top of page

ಕಬೀರ ಕಂಡಂತೆ

ಸ್ವಾರ್ಥದ ಮಬ್ಬಿನಲಿ ಸಣ್ಣಾದೀತು ಬದುಕು..! ಕಾಮ, ಕ್ರೋಧ ಮದ ಲೋಭಕಿ, ಜಬಲಗ ಘಟಮೆ ಖಾನ| ಕಬೀರ ಮೂರಖ ಪಂಡಿತಾ, ದೋನೊ ಏಕ ಸಮಾನ|| ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳ ಪ್ರಭಾವದಿಂದ ಮನುಷ್ಯ ಮೃಗಕ್ಕಿಂತಲೂ ಕಡೆಯಾಗಿ ವರ್ತಿಸುತ್ತಾನೆ. ಮಾನವ ದಾನವನಾಗುತ್ತಾನೆ. ಇಂಥ ಸಂದರ್ಭದಲ್ಲಿ ಎಷ್ಟೇ ವಿದ್ವಾಂಸನಾದರೂ ಆತನ ಬುದ್ಧಿ ಭೃಷ್ಟವಾಗಿ, ಸಾಮಾನ್ಯ ಜನರಂತೆ ವಿವೇಚನೆ ಕಳೆದುಕೊಳ್ಳುತ್ತಾನೆ. ಕೆಲವು ಸಲ, 'ಇಷ್ಟು ಕಲಿತವರಾಗಿ, ತಿಳಿದವರಾಗಿ ಇಂಥ ಕೆಟ್ಟ ಕೆಲಸ ಮಾಡಬಾರದಿತ್ತು" ಎಂಬ ಮಾತು ಸಮಾಜದಲ್ಲಿ ಕೇಳಿ ಬರುತ್ತವೆ. ಆದರೆ ಧನ, ಸಂಪತ್ತು, ಅಧಿಕಾರದ ಮದದಿಂದ ಮನುಷ್ಯ ವಿವೇಚನಾ ಶಕ್ತಿ -ಯನ್ನೇ ಕಳೆದುಕೊಳ್ಳುತ್ತಾನೆ. ಇದಕ್ಕಾಗಿ ಆತ ಬಲಾತ್ಕಾರ ನಡೆಸಲು, ಹತ್ಯೆ ಮಾಡಲೂ ಸಹ ಮುಂದಾಗುತ್ತಾನೆ. ಮೇಲಿನ ದೋಹೆಯಲ್ಲಿ ಸಂತ ಕಬೀರರು, *"ಕಾಮಕ್ರೋಧ ಮದಮತ್ಸರ, ಆಕ್ರಮಿಸೆ ಹೃದಯ ಸ್ಥಾನ| ಕಬೀರ ಮೂರ್ಖ ಪಂಡಿತ, ಇಬ್ಬರೂ ಏಕ ಸಮಾನ||* ಎಂದು ಮಾರ್ಮಿಕವಾಗಿ ಹೇಳಿದ್ದಾರೆ. ಅರಿಷಡ್ವರ್ಗ -ಗಳೆಂಬ ವಿಕಾರಗಳು ಮನುಷ್ಯನ ಹೃದಯವನ್ನೇ ಆಕ್ರಮಿಸಿ ಪ್ರೇಮಭಾವ, ಸಂವೇದನೆಗಳಿಗೆ ಯಾವುದೆ ಸ್ಥಾನ ಕೊಡದ ಸ್ಥಿತಿ ನಿರ್ಮಾಣವಾದಾಗ, ಪಂಡಿತ ಮತ್ತು ಪಾಮರನ ಮಧ್ಯೆ ಯಾವುದೇ ವ್ಯತ್ಯಾಸ ಕಾಣಲಾರದು ಎಂದಿದ್ದಾರೆ. ಸಮಾಜದಲ್ಲಿ ಸಜ್ಜನಿಕೆಯ ಮುಖವಾಡ ಧರಿಸಿ ವಿವಿಧ ರೀತಿಯ ಕುಕೃತ್ಯಗಳನ್ನು ಮಾಡುವುದನ್ನು ಕಾಣುತ್ತೇವೆ. ಶೌರ್ಯ, ಅಧಿಕಾರದ ಮದದಿಂದ ಮಣ್ಣು ಮುಕ್ಕಿದ ರಾವಣ, ದುರ್ಯೋಧನಾದಿಗಳ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಈ ಹಿನ್ನೆಲೆಯಲ್ಲಿ ಮನಸ್ಸಿಗೆ ಅಂಟಿಕೊಂಡಿರುವ ದುರ್ಗುಣಗಳನ್ನು ತೊಳೆದು ಶುದ್ಧ ಮಾಡಿದಾಗ ಮಾತ್ರ ಮನುಷ್ಯ ಮನುಷ್ಯನೆಂದು ಕರೆಸಿಕೊಳ್ಳಬಲ್ಲ. ನಮ್ಮಲ್ಲಿನ ದುರ್ಗುಣಗಳನ್ನು ಬಿಡಲೇಬೇಕು ಎಂಬ ಧೃಡ ಸಂಕಲ್ಪದೊಂದಿಗೆ ಕಾರ್ಯ ಪ್ರವೃತ್ತರಾದಾಗ ವಿವೇಚನಾ ಶಕ್ತಿ ಜಾಗೃತಗೊಂಡು ಅನಿಷ್ಠಗಳನ್ನು ತಡೆಯಲು ಸಾಧ್ಯವಾದೀತು. ಕಣ್ಣಿಲ್ಲದ ಧೃತರಾಷ್ಟ್ರಂಗೆ ಮೋಹದ ಕುರುಡು ಕಣ್ಣಿದ್ದ ಕೌರವಂಗೆ ಮದ, ಕ್ರೋಧದ ಕುರುಡು| ಮಣ್ಣಾದೀತು ಬದುಕು ಸ್ವಾರ್ಥದ ಮಬ್ಬಿನಲಿ ಸಣ್ಣಾಗದಿರು ಲೋಕದಲಿ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.

ಕಬೀರ ಕಂಡಂತೆ
bottom of page