ಕಬೀರ ಕಂಡಂತೆ : ೫
ನ್ಯಾಯಕ್ಕಾಗಿ ಸೆಟೆದು ನಿಲ್ಲುವ ಛಲವಿರಲಿ..! ತತ್ವ ಕಬೀರ ಸುತಾ ಕ್ಯಾ ಕರೆ, ಉಠ ಕಿನ ರೋವೆ ದುಃಖ ಜಾಕಾ ಬಾಸಾ ಗೋರಮೆಂ, ಸೋ ಕ್ಯೂಂ ಸೋವೆ ಸುಖ// ಬದುಕಿನ ತಾಪತ್ರಯಗಳಲ್ಲಿ ನಲುಗಿ ಮುರುಟಿದ ವ್ಯಕ್ತಿ,ಮನಸ್ಸು ಮಾಡಿದರೆ ಪುನಃ ಚಿಗಿತುಕೊಳ್ಳಲು ಸಾಧ್ಯ. ಆಖಾಡದಲ್ಲಿ ಎದುರಾಳಿಯ ಹೊಡೆತಕ್ಕೆ ಕೆಳಕ್ಕೆ ಬೀಳುವದು ಸಾಮಾನ್ಯ. ಆದರೆ ಕೆಳಕ್ಕೆ ಬಿದ್ದವ ಛಲ, ಬಲಗಳನ್ನು ಒಟ್ಟುಗೂಡಿಸಿ ಮತ್ತೆ ಮೇಲೆದ್ದು ಮುಂದಿನ ಆಟಕ್ಕೆ ಸಜ್ಜಾಗುವದು ಅಷ್ಟೇ ಮಹತ್ವದ್ದು. ಸಮಸ್ಯೆಗಳ ಜಂಜಡದಲ್ಲಿ ಸಿಲುಕಿದ ಮನುಷ್ಯ ಜರ್ಜರಿತನಾಗಿ ದುಃಖ ಅನುಭವಿಸುತ್ತಾನೆ. ಆದರೆ ಕೇವಲ ವೇದನೆ ಗಳನ್ನು ಸಹಿಸಿಕೊಂಡು ನಿಷ್ಕ್ರಿಯರಾದರೆ, ಸೋಲಿನ ಪ್ರಪಾತದಿಂದ ಎಂದಿಗೂ ಹೊರಬರಲು ಸಾಧ್ಯವಾಗದು. ' ಪ್ರಯತ್ನದಲ್ಲಿ ಪರಮಾತ್ಮ ನಿದ್ದಾನೆ" ಎಂಬ ಭರವಸೆಯ ನುಡಿಗಳಲ್ಲಿ ನಂಬಿಕೆ ಇರಿಸಿ ಪ್ರಯತ್ನಶೀಲನಾಗುವ ವ್ಯಕ್ತಿಗೆ ಅಂಧಃಕಾರ ದಲ್ಲಿಯೂ ಭರವಸೆಯ ಕಿಡಿ ಕಂಡು ಆತ ಬೆಳಕಿನ ಕಡೆಗೆ ಹೋಗಲು ಸಾಧ್ಯ. ಓರ್ವ ವ್ಯಕ್ತಿ ಅಥವಾ ಇಡೀ ಸಮಾಜ, ಸಂಕಷ್ಟ ಸುಳಿಯಲ್ಲಿ ಸಿಲುಕಿದಾಗ ಅದರಿಂದ ಹೊರಬರಲು ಏಕೆ ಪ್ರಯತ್ನಿಸಬಾರದು? ಎಂಬುದೇ ಸಂತ ಕಬೀರರ ಕಳಕಳಿಯ ಪ್ರಶ್ನೆ. ದಿನ ನಿತ್ಯದ ಅನ್ಯಾಯ, ದುಃಖಗಳನ್ನು ನಿರ್ಲಿಪ್ತರಾಗಿ, ನಿಷ್ಕ್ರಿಯತೆಯಿಂದ ಸಹಿಸಿಕೊಳ್ಳವದು ಅಜ್ಞಾನ. ಅದಕ್ಕೇ ಕಬೀರರು ಸಮಾಜವನ್ನು ಅಜ್ಞಾನದ ನಿದ್ರೆಯಿಂದ ಎಚ್ಚರಗೊಳಿಸುವ ಪ್ರಯತ್ನ ಮಾಡಿದ್ದಾರೆ. ಜಗತ್ತಿನಲ್ಲಿ ನಡೆಯುತ್ತಿರುವ ಅನ್ಯಾಯ, ಅನಾಚಾರಗಳಿಗೆ ನಮ್ಮ ಮನಸ್ಸು ಕರಗಬೇಕು ಎಂಬ ಆಶಯದೊಂದಿಗೆ ಜನರು ತಮ್ಮ ಆಕ್ರೋಶವನ್ನು ಹೊರಹಾಕುವಂತೆ ಕರೆ ನೀಡಿದ್ದಾರೆ. "ಕಬೀರ, ಮಲಗಿಕೊಂಡಿದ್ದರೆ ನಿನಗೆ ಸಿಗುವದೇನು? ಎದ್ದು ನಿಂತು ಹೊರಹಾಕು ಆಕ್ರೋಶ, ಸಿಕ್ಕೀತು ಸುಖ- ಸಮಾಧಾನ" ಎಂದು ಕಬೀರರು ತಮ್ಮ ದೋಹೆಯ ಮೂಲಕ ಕರೆ ನೀಡಿದ್ದಾರೆ. ನಮ್ಮಲ್ಲಿ ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಕಿಚ್ಚು ಹೊತ್ತಿಕೊಂಡಾಗ ಮಾತ್ರ ದುಃಖದ ಕೂಪ ದಿಂದ ಹೊರಬರಲು ಸಾಧ್ಯ. ಇದಕ್ಕೆ ನಮ್ಮಲ್ಲಿ ಸಂವೇದನೆ ಮತ್ತು ಪ್ರಯತ್ನ ಶೀಲ ಗುಣಗಳು ಇರಬೇಕಾದುದು ಅತ್ಯಗತ್ಯ. ಇದಕ್ಕಾಗಿ ಅಂತಃ ಶಕ್ತಿಯನ್ನು ನಂಬಿ ನಡೆದರೆ ಗೆಲುವು ಶತಸಿದ್ಧ. ಹಾರುವ ಹಕ್ಕಿ ರೆಕ್ಕೆ ಹರಡಿದರೆ ಮಾತ್ರ ಎತ್ತರಕ್ಕೆ ಏರಲು ಸಾಧ್ಯ. ಸುತ್ತಲೂ ಬಿರುಗಾಳಿ ಕಂಗೆಡಿಸಿದರೂ ಬದುಕಿನ ದೋಣಿಗೆ ನಂಬುಗೆಯ ಹುಟ್ಟು ಹಾಕುವ ಧೀರ ಮಾತ್ರ ಗಮ್ಯ ಸೇರಲು ಸಾಧ್ಯ ಎಂಬುದನ್ನು ಮನಗಂಡು ನಡೆಯಬೇಕು ಎಂಬುದನ್ನು ಕಬೀರರು ಮಾರ್ಮಿಕವಾಗಿ ಬಣ್ಣಿಸಿ ಸಮಾಜಕ್ಕೆ ದಾರಿ ತೋರಿದ್ದಾರೆ. ಆಲಸ್ಯದ ಕಾಡಿಗೆ ಒರೆಸಿ ಚೈತನ್ಯ ಜ್ಯೋತಿಯನ್ನು ಬೆಳಗುವ ಛಲ ನಮ್ಮದಾಗಿರಲಿ ಎಂಬುದೇ ಅವರ ಆಶಯ. ದೂರುತ್ತ ಕೂರದಿರು, ಕರಬುತ್ತ ಬದುಕದಿರು ಗುರಿಯತ್ತ ನಡೆವಲ್ಲಿ ದುರಿತಗಳ ಎಣಿಸದಿರು/ ಹಾರುವ ಹಿಡಿ ಹಕ್ಕಿ ಬೆದರುವದೆ ಸಾಗರಕೆ? ಕರವೆತ್ತು ಕಾಯಕಕೆ - ಶ್ರೀವೆಂಕಟ // - ಶ್ರೀರಂಗ ಕಟ್ಟಿ ಯಲ್ಲಾಪುರ.