top of page

ಇಳಿ ಸಂಜೆ ನೆನಪು

ನವುರಾದ ತಂಗಾಳಿ ಹಿತವಾಗಿ ಸೋಕಿ
ಕಡಲಲೆಯ ಮೇಲೇರಿ ಬಳಿ ಬಂದಿದೆ
ದಂಡೆಯಲಿ ಜತೆ ನಡೆದ ಜೋಡಿ ಪಾದಗಳ
ಸ್ಮೃತಿ ಗಂಧ ಘಮ್ಮೆಂದು ಮುದ ತಂದಿದೆ ||1|| ಹಾಯಿ ಬಿಚ್ಚಿದ ಮನದ ಹಡಗು
ನೆನಪುಗಳ ಅಲೆ ಮೇಲೆ ತೇಲಾಡಿದೆ
ಪಡುವಣದ ರಂಗೆಲ್ಲಾ ಒಲವಿನರಮನೆಯಲ್ಲಿ
ರಂಗೇರಿ ಮಧುಚಂದ್ರ ತುಳುಕಾಡಿದೆ ||2|| ಎಲೆ ಮರೆಯಲಿ ಜೋಡಿ ಹಕ್ಕಿ ಪಿಸು ನುಡಿದು
ಬೆಚ್ಚನೆಯ ಗರಿಯೊಳಗೆ ರಮಿಸುತ್ತಿವೆ
ಬೆಳದಿಂಗಳು ನಸು ನಾಚಿ ಮಧು ಬನದ ತುಂಬೆಲ್ಲಾ ಕಳ್ಳ ಹೆಜ್ಜೆಯನಿಟ್ಟು ಸರಿಯುತ್ತಿದೆ. ||3||   - ಬಾಲಕೃಷ್ಣ ದೇವನಮನೆ, ಬೆಳಂಬಾರ

ಇಳಿ ಸಂಜೆ ನೆನಪು
bottom of page