ಇಂದು ಜನ್ಮದಿನ
************************
ಸದ್ದಿಲ್ಲದ ಸಾಧಕ " ಭಾರತೀಸುತ "
*************************"
ಎಡಕಲ್ಲು ಗುಡ್ಡದ ಮೇಲೆ
ಬಯಲು ದಾರಿ
ಹುಲಿಯ ಹಾಲಿನ ಮೇವು
ಗಿರಿಕನ್ನಿಕೆ
ಮೊದಲಾದ ಸಿನಿಮಾಗಳನ್ನು ನೋಡಿ ಮೆಚ್ಚದೇ ಇರುವವರಿಲ್ಲ. ಅವು ಬಹಳ ಜನಪ್ರಿಯ ಚಿತ್ರಗಳು. ಆದರೆ ಅವುಗಳ ಯಶಸ್ಸಿನ ಹಿಂದೆ ಆ ಕಾದಂಬರಿಕಥೆಗಳನ್ನು ಬರೆದ ವ್ಯಕ್ತಿಯ ಬಗ್ಗೆ ತಿಳಿದವರು ಕಡಿಮೆ. ಅವರೇ " ಭಾರತೀಸುತ" ಕಾವ್ಯನಾಮದ ಎಸ್. ಆರ್. ನಾರಾಯಣರಾವ್.
ಭಾರತೀಸುತರು ಕೊಡಗಿನ ಬಿಳಿಗೇರಿ ಎಂಬಲ್ಲಿ ೧೯೧೫ ಮೇ ೧೫ ರಂದು ಹುಟ್ಟಿದರು. ಶಾನಭಾಗ ರಾಮಯ್ಯನವರ ಮಗ ನಾರಾಯಣರಾವ್ ೧೩ ನೇ ವಯಸ್ಸಿಗೇ ಮೊದಲ ಕಥೆ ಬರೆದರು. ೧೫ ನೇ ವಯಸ್ಸಿಗೆ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದರು. ಸೆರೆಮನೆ ವಾಸ ಕಂಡರು. ಹೊರಬಂದವರು ಕಾಫಿ ತೋಟವೊಂದರಲ್ಲಿ ಗುಮಾಸ್ತನ ಕೆಲಸ ಮಾಡಿದರು. ಸ್ವಂತ ವಿದ್ಯಾಭ್ಯಾಸ ಮಾಡಿ ಮದ್ರಾಸ್ ವಿ. ವಿ. ಕನ್ನಡ ವಿದ್ವಾನ್ ಪದವಿ , ನಂತರ ಶಿಕ್ಷಕರ ತರಬೇತಿ ಪಡೆದು ಶಾಲಾ ಶಿಕ್ಷಕರಾದರು. ಕೆಲ ಕಾಲ ರಾಷ್ಟ್ರಬಂಧು, ಗುರುವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿದರು.
ಭಾರತೀಸುತರು ಪಂಜೆ ಮಂಗೇಶರಾಯರ ಶಿಷ್ಯರು. ಅವರ ಸಾಹಿತ್ಯ ಸಾಧನೆ ಬಹಳ ದೊಡ್ಡದು. ೩೨ ಕಾದಂಬರಿ, ೮ ಕಥಾ ಸಂಕಲನ, ೧೯ ಮಕ್ಕಳ ಪುಸ್ತಕಗಳು ಸೇರಿ ಸುಮಾರು ೬೨ ಕೃತಿಗಳನ್ನು ರಚಿಸಿದರು. ಅವರ ನಾಲ್ಕು ಕಾದಂಬರಿಗಳು ಚಲನಚಿತ್ರವಾಗಿ ಬಹಳ ಜನಪ್ರಿಯವಾದವು. ಹಣ ಗಳಿಸಿದವು. ಆದರೆ ಭಾರತೀಸುತರಿಗೆ ಹಣವೂ ಬರಲಿಲ್ಲ, ಹೆಸರೂ ಬರಲಿಲ್ಲ.
ಎಡಕಲ್ಲು ಗುಡ್ಡ, ಬಯಲುದಾರಿ, ಹುಲಿಯ ಹಾಲಿನ ಮೇವು, ಗಿರಿಕನ್ನಿಕೆ, ಹುಲಿಬೋನು, ಬೆಂಕಿಯ ಮಳೆ, ವಕ್ರರೇಖೆ, ದೊರೆಮಗಳು, ಪೃಥ್ವಿ ರಾಜ, ಅಮಾತ್ಯನಂದಿನಿ, ಗಿಳಿಯು ಪಂಜರದೊಳಿಲ್ಲ, ಬೆಳಕಿನೆಡೆಗೆ, ಸಂತಾನ ಭಿಕ್ಷೆ ಮೊದಲಾದವುಅವರ ಕಾದಂಬರಿಗಳು. ಮೂರುಕಾದಂಬರಿಗಳಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಬಹುಮಾನಗಳು ಬಂದವು. ವಲ್ಮೀಕ ಎಂಬುದು ಅವರ ಒಂದು ಪ್ರಸಿದ್ಧ ಕಿರುಕಾದಂಬರಿ. ಮಕ್ಕಳಿಗಾಗಿ ಹತ್ತೊಂಬತ್ತು ಪುಸ್ತಕ ಬರೆದರು.ನವಸಾಕ್ಷರರಿಗಾಗಿ ಮೂರು ಪುಸ್ತಕ ರಚಿಸಿದರು. ಸ್ವತಃ ಕಾವೇರಿ ಪ್ರಕಾಶನ ಸಂಸ್ಥೆ ಆರಂಭಿಸಿದರು.
ತುಂಬ ಸರಳ ಮನುಷ್ಯ. ನಮ್ಮ ಹೊನ್ನಾವರದ ಮನೆಗೆ ಅನೇಕ ಸಲ ಬಂದಿದ್ದರು. ಕೊಡಗಿನ ಬದಲು ಬೆಂಗಳೂರಿನಂಥಲ್ಲಿದ್ದರೆ ಬಹಳ ದೊಡ್ಡ ಹೆಸರೂ ಮಾಡುತ್ತಿದ್ದರು. ದುಡ್ಡೂ ಮಾಡುತ್ತಿದ್ದರು. ಕೇಳಿದರೆ ತಮಗೆ ಬೆಂಗಳೂರು ಬದುಕು ಹಿಡಿಸುವದಿಲ್ಲ ಎನ್ನುತ್ತಿದ್ದರು.
೧೯೭೬ ಎಪ್ರಿಲ್ ೪ ರಂದು ಅವರು ನಿಧನರಾದರು.
- ಎಲ್. ಎಸ್. ಶಾಸ್ತ್ರಿ
Comments