top of page

ಲಕ್ಷ್ಮೀನಾರಾಯಣ ಶಾಸ್ತ್ರಿಯವರ " ಯಕ್ಷ ನಕ್ಷತ್ರಗಳು " ಒಂದು ಆಪ್ತವಾದ ಕೃತಿ

ಯಕ್ಷನಕ್ಷತ್ರಗಳು ಕೃತಿ ಉತ್ತರ ಕನ್ನಡದ ಎಂಟು ಮಂದಿ ಶ್ರೇಷ್ಠ ಕಲಾವಿದರನ್ನು ,ಅವರ ಸಾಧನೆಗಳನ್ನು ಪರಿಚಯಿಸುವ ವಿಶಿಷ್ಟ ಗ್ರಂಥ. ವಿಶಿಷ್ಟ ಏಕೆಂದರೆ ಶಾಸ್ತ್ರಿಯವರು ಈ ಕಲಾವಿದರನ್ನು ಕಲಾವಿದರಾಗಿಯೂ,ಬಂಧುಗಳಾಗಿಯೂ,ಒಡನಾಡಿಗಳಾಗಿಯೂ ಹತ್ತಿರದಿಂದ ಬಲ್ಲವರು...ಉಣ್ಣುವ ಮನೆಯಿಂದ ಬಣ್ಣದ ಮನೆಯವರೆಗೆ,ಬಣ್ಣದಮನೆಯಿಂದ ರಂಗದ ಮೇಲೆ ...ಹೀಗೆ ಈ ಕಲಾವಿದರನ್ನು ಕುರಿತು ಅರಿತವರು..ಪುರಾಣಲೋಕದ ಅಲೌಕಿಕ ಪಾತ್ರಗಳನ್ನು ಅದ್ಭುತವಾಗಿ ಕಟ್ಟುತ್ತಾ ,ನಿಜದ ಬದುಕಿನಲ್ಲಿ ಬದುಕಲು ಹೋರಾಡಿದವರು.ಮುನ್ನುಡಿಯಲ್ಲಿ ಡಾ.ಜಿ.ಎಸ್.ಭಟ್ಟರು ನುಡಿದಂತೆ ಒಂದು ಶತಮಾನದ ಇತಿಹಾಸ,ಸ್ಥಿತ್ಯಂತರಗಳನ್ನು ಕಾಣುತ್ತಾ ಕಲೆಯನ್ನು ಉಳಿಸಲು ಹೆಣಗಾಡಿದವರು.

ಈ ಪುಸ್ತಕದಲ್ಲಿ ಬಹುಪಾಲು ಕೆರೆಮನೆ ಕಲಾವಿದರ ಕುರಿತೇ ಇದೆ.ಅದು ಸರಿಯೇ ಏಕೆಂದರೆ ಕೆರೆಮನೆ ಯಕ್ಷಗಾನದ ಇತಿಹಾಸ,ಯಕ್ಷಗಾನದ ಅಸ್ಮಿತೆ,ವರ್ತಮಾನವೂ ಹೌದು.ಇಲ್ಲಿ ಬರುವ ಪರಿಚಯದಲ್ಲಿ ನಾನುಯಾಜಿ ಭಾಗವತರನ್ನು ಕಂಡವನಲ್ಲ, ಕೊಂಡದಕುಳಿ ಸಹೋದರರು, ಶಿವರಾಮ ಹೆಗಡೆಯವರ ಒಂದೆರಡುಪಾತ್ರಗಳನ್ನು ಬಿಟ್ಟು ಹೆಚ್ಚು ಕಂಡವನಲ್ಲ. ಕೃತಿಯಲ್ಲಿ ಸುಮಾರು ನಲವತ್ತು ಪುಟಗಳಷ್ಟು ಆವರಿಸಿದ ಮಹಾಬಲ ಹೆಗಡೆಯರ ಹೆಚ್ಚಿನೆಲ್ಲ ವೇಷಗಳನ್ನು ನೋಡಿ ಆನಂದಿಸಿದ್ದಷ್ಟೇ ಅಲ್ಲ,ಅಂತಹ ಮತ್ತೊಬ್ಬ ಬರಲೇ ಇಲ್ಲ,ಬರುವುದೂ ಸಂಭವವಲ್ಲ ಎಂದು ನಂಬಿದವನು ನಾನು.ಅವರು ನಮ್ಮ ಮನೆಗೂ ಹಲವು ಬಾರಿ ಬಂದವರು.ರಂಗದೊಳಗೂ,ವೈಯಕ್ತಿಕವಾಗಿಯೂ ಮಾತಾಡಿದವರು.ಅವರನ್ನು ಹಲವು ತಾಳಮದ್ದಲೆಗೂ ಕರೆದಿದ್ದೇನೆ .ಅವರೊಂದಿಗೆ ಅರ್ಥವನ್ನೂ ಹೇಳಿದ್ದೆ.ಮಹಾಬಲರ ಮುಖ್ಯ ಪಾತಪಾತ್ರಗಳನ್ನುಕುರಿತು ಇಲ್ಲಿ ವಿಶ್ಲೇಷಣೆ ಇದೆ..ನನಗೆ ಇದು ಈ ಕೃತಿಯ ಹೂರಣ ಅನ್ನಿಸಿತು.ಕೆರೆಮನೆ ಶಿವರಾಮ ಹೆಗಡೆಯವರ ಬದುಕು,ಬಣ್ಣದ ಬದುಕನ್ನು ಬಾಲಕನಾಗಿ ಕಂಡು ಬೆಳದ ರೀತಿಯನ್ನು ವರ್ಣಿಸಿದರೆ,ಮಹಾಬಲ,ಶಂಭು,ಗಜಾನನರ ಆಪ್ತ ಗೆಳೆಯ - ಬಂಧುವಾಗಿ ಬರೆದಿದ್ದಾರೆ.ಗಜಾನನ ಹೆಗಡೆಯವರ ಸ್ತ್ರೀ,ಪುರುಷ ಪಾತ್ರಗಳನ್ನು ನಾನು ನೋಡಿದ್ದೆ.ಶಂಭು ಹೆಗಡೆಯವರು ನನ್ನ ಪ್ರಸಂಗವನ್ನು ರಂಗವೇರಿಸಿದವರು.ನಾನು ಅತಿ ಹೆಚ್ಚು ಮೆಚ್ಚುವ ಕಲಾವಿದರು.ಯಕ್ಷಗಾನ ಕಲಾವಿದರಲ್ಲೇ ಚಿಂತನಶೀಲ ಕಲಾವಿದರು.ಗಜಾನನ ಹೆಗಡೆಯವರ ಕುರಿತು ಮುಂದೆ ಕೆರೆಮನೆಯಲ್ಲೇ ಅವರನ್ನು ಕುರಿತು ಸಂಸ್ಮರಣೆಯ ಭಾಷಣ ಮಾಡಿದ್ದೆ.ಅವರ ಗದಾ ಯುದ್ಧದ ಭೀಮ,ಮೇನಕೆ,ಪ್ರಭಾವತಿ,ಅಂಬೆ ಈಗಲೂ ಮನಸ್ಸಿನ ಚಿತ್ರವಾಗಿ ಉಳಿದಿದೆ.ಮೂರೂರು ದೇವರು ಹೆಗಡೆಯವರ ಪಾತ್ರಗಳ ವೈಭವವನ್ನೂ ಕಂಡಿದ್ದೇನೆ..ಈ ಎಲ್ಲ ಮಹನೀಯರ ಆಪ್ತ ಪರಿಚಯ ಈ ಕೃತಿ.ಶಾಸ್ತ್ರಿಯವರು ಫೇಸ್ ಬುಕ್ಕಲ್ಲಿ ಬರೆದಾಗಲೇ ಹಲವನ್ನು ಓದಿದ್ದೆ ...ಗಜಾನನ ಹೆಗಡೆಯವರನ್ನು ಕುರಿತು ಎಲ್.ಎಸ್.ಶಾಸ್ತ್ರಿಗಳು ಬರೆದುದು ಗದ್ಯವೆಂಬುದಕ್ಕಿಂತ ಭಾವಲಹರಿ,ನೋವಿನ ಲಹರಿ ಎಂದರೆ ಸರಿಯಾದೀತು.


ಒಂದುಆಪ್ತವಾದ,ಚಿಂತನೀಯವಾದ,ಗೌರವ,ಸ್ನೇಹ,ಕುತೂಹಲದ ಕಣ್ಣಿನಿಂದ ಹಿಂತಿರುಗಿ ನೆನಪಿಸಿಕೊಳ್ಳುವ ಸಜೀವ ಚಿತ್ರಣವನ್ನಿತ್ತ ಲೇಖಕ ಲಕ್ಷ್ಮೀನಾರಾಯಣ ಶಾಸ್ತ್ರಿಯವರನ್ನು ಅಭಿನಂದಿಸುತ್ತೇನೆ.ಈ ಪುಸ್ತಕ ಕಲೆಯ ಅಧ್ಯಯನದಲ್ಲಿ ಆಸಕ್ತರಿಗೆ ,ಕಲೆಯ ಇತಿಹಾಸದ ಕುರಿತ ಶೋಧಕರಿಗೆ ಅತ್ಯುಪಯುಕ್ತ ಗ್ರಂಥ.ಶಾಸ್ತ್ರಿಯವರಿಗೆ ಅಭಿನಂದನೆಗಳು



ಶ್ರೀಧರ ಡಿ.ಎಸ್.

ಕಿನ್ನಿಗೋಳಿ





17 views0 comments

留言


bottom of page