ಹರಿದ ದೇಹ
ಚೆಲ್ಲಿದ ರಕ್ತ
ಚೆಲ್ಲಾಪಿಲ್ಲಿಯಾದ ಅಂಗಾಂಗಗಳು
ಹೇಳಕೇಳುವವರಿಲ್ಲ
ಅತ್ತುಕರೆವವರಿಲ್ಲ
ಸ್ಮಶಾನ ಮೌನ
ಅವಶೇಷಗಳಡಿಗಳಲ್ಲಿ ಸಿಲುಕಿರಲು
ಹೊರಬರಲಾರದು ಆಕ್ರಂದನವೂ...!
ಯಾಕಾಗಿ ಈ ಯುದ್ಧ
ಯಾರಿಗಾಗಿ ಈ ಯುದ್ಧ...?
ಗೆದ್ದವ ಬೀಗಿದನೇ...?
ಸೋತವ ನರಳಿದನೇ...?
ಸಿಂಹಾಸನ ಭದ್ರವೇ...?
ಪಟ್ಟಭದ್ರರ ಪಟ್ಟಾಭಿಷೇಕ...!
ನರರು ನರಳಿ ನರಳಿ ನರಕವಾಸಿಗಳು
ನರೋತ್ತಮನಷ್ಟೇ ಅರಮನೆಯಲ್ಲಿ..!
ಅವ ಸಾಯಲು ಅಲ್ಲೇ
ಆ ಅರಮನೆಯಲ್ಲೇ ಹೂತು
ಗೋರಿ ಕಟ್ಟಬಹುದು...
ಮತ್ತದೂ ಸ್ಮಶಾನವೇ ಆಗುವುದು ತಾನೆ...!
ನೆತ್ತರಲ್ಲಿ ಕಟ್ಟಿದ ಸಾಮ್ರಾಜ್ಯ
ನೆತ್ತರನ್ನೇ ಬಯಸುತ್ತಿರುತ್ತದಷ್ಟೆ...!
— ಸೀತಾರಾಮ ನಾ ಹೆಗಡೆˌ ಕೈಗಡಿ
コメント