ನವ ಮಾಸ ಮುಗಿವ ಮುನ್ನ
ಹೊರ ಜಗಕೆನ್ನ ತೋರಗೊಡದೆ
ಅನ್ನ ಪಾನ ಪೌಷ್ಟಿಕತೆಯಲಿ ನಿನ್ನೊಡಲೊಳಗೆನ್ನ ಕಾಪಿಟ್ಟ ಮೊದಲ ದೇವತೆ ನೀನು.
ತುಂಬಲು ನವಮಾಸ ನಿನ್ನ ಹೊತ್ತ
ಭೂಮಾತೆಯೆಂಬ ಮತ್ತೊಬ್ಬ ಮಾತೆಯ ಮಡಿಲಲೆನ್ನ ಇಳಿಸಿ ನಗುನಗುತ ಹೊರ ಜಗವ ತೋರಿದ ಜಗನ್ಮಾತೆ ನೀನು.
ಕರ್ಪೂರದಂತೆ ಕರಗುತ್ತಿದ್ದರೂ
ಮಕ್ಕಳ ಬಾಳಿಗೆ ಬೆಳಕು ನೀಡಿ
ಬಾಳಿನ ದಾರಿಯ ಏಳುಬೀಳನು
ಮೀರಿ ನಿಲ್ಲುವ ಛಲವ ತುಂಬಿದ ಮಹಾ ತಾಯಿ.
ನೀನೆಂದುಕೊಂಡಂತೆ ಸಾಗಿದ
ಬಾಳಿನ ಬಂಡಿಯ ವೇಗ ಅದೇಕೋ
ಮಂದ ಮಂದನೆ ಸಾಗಿ ಮುಂದೆ ಹೋಗಲಾಗದೆ
ಹಿಂದೆ ಬರಲಾಗದೆ ನಿಂತೇ ಬಿಟ್ಟಿತು.
ಅಂದು ಬುವಿಗೆ ನಾ ಬಂದಾಗ
ನಿನ್ನ ಮೊಗವರಳೆ ಬಂಧುಗಳ ನಲಿಸಿ
ಮೃಷ್ಟಾನ್ನವನುಣಿಸಿದ ನೀನಿಂದು
ಕಾಣದ ಲೋಕದಿ ಕಾಣೆಯಾದರೂ
ಎನ್ನೊಳಗೆಲ್ಲೋ ಅವಿತಿರುವೆ
ರಚನೆ-ಸಾವಿತ್ರಿ ಮಾಸ್ಕೇರಿ
Comments