top of page

ಬಡಗೇರಿ

ಸಣ್ಣ ಮನೆಗಳ ನಡುವೆ

ತಲೆ ಎತ್ತಿದೆ ತೆಂಗಿನ ಮರ

ಮೆಲ್ಲ ಬೀಸುವ ಗಾಳಿ ಅದರ ಎದೆಗೆ

ಹೊರಟ ರಸ್ತೆಯ ಅಂಚು ಅಂಗಡಿ ಸಾಲು

ಸವರುತಿದೆ ಹಾಡ ಗೊಂಚಲಸಾರ

ಶೇಂಗಾ ಗಿಡಗಳ ಕಂಪು ಪ್ರತಿ ಹಾಡಿಗೂ

ನೋವ ನೇವರಿಸುವ ಪಾಂಗಿನ ಸದ್ದುಗಳು

ಹೊಗೆ ಉಗುಳುವ ಹೊಡತಲೆಗೆ ನಿದ್ದೆ ಜೋಂಪು!

ತಾರ್ಲೆ ಕುಣಿತಕೆ ಹೆಜ್ಜೆ ಹಾಕುವ ಎತ್ತುಗಳು

ಹಾಡನ್ನೇ ಉಸುರುತಿವೆ ಹೀರೆ ಹೂಗಳು

ಬಿದ್ದ ಹೂಗಳ ಹೆಕ್ಕಿ ನಿಕ್ಕಿಯಾದವು ನಂಟು

ಹಾದಿ ತೋರುವ ಹಾಡು ಬಿಂಜೆಮುಳ್ಳು!

ಹಣ್ಣು ಕಲ್ಲಂಗಡಿಗೂ ಅದರದೇ ಗೆಂಪು

ಸೌದೆ ಹೊರೆ ಭಾರಕ್ಕೆ ಮೈಲು ದೂರದ ಬಾಂದು

ಜೋಡೆತ್ತು ಗೊರಸಿನಲಿ ಮಣ್ಣಗಂಧ!

ಸುಗ್ಗಿ ಹಿಗ್ಗಿನ ಸುಖ ಮೊಗ್ಗು ಸಗ್ಗದ ದಂಡೆ

ಕರಿ ಅಕ್ಕಿ ಘಮ ಘಮಿಸೋ ಸಾಲು ಹೂಗೊಂಡೆ

ಕತ್ತಲಲೂ ಅರಳಿರುವ ಅಬ್ಬಲಿ ಹೂವಂತೆ

ತಬ್ಬಲಿಗಳಂತಿಹವು ಬಡತನದ ಜಗಲಿಗಳು

ಮಾವಿನ ಮರಕ್ಕೆ ಚಾಚಿಟ್ಟ ಹೊರೆಗಳು

ಸಂಜೆ ಹೊರಡಬೇಕು ಪೇಟೆಗೆ

ಅವರಿವರ ಪಟ್ಟಾಂಗ ನಡುವೆ ಡಣಿವಿಲ್ಲದ ಹಾಡು

ಕರೆದಿಲ್ಲ! ದಣಪೆಗೆ ಬಂದ ಪದ್ಮಪತ್ರ!

ಅಲೆಯುವ ಭತ್ತದ ಕದರು ತುರಾಯಿ

ಹೈಲು ಕಟ್ಟಿದರೆ ಬಾನೆತ್ತರ ಧೂಳೇ ಕರಿಮೋಡ

ಮಡಕೆಯಲಿ ಗಂಜಿ ಬಣ್ಣ ಗುಲಗಂಜಿ

ಕಷ್ಟ ನುಂಗುವ ದಗದಿ ನೋವ ಗೆರೆಗಳ ಹಾಡು

ದುಡಿದೂ ಹೊಟ್ಟೆ ತುಂಬದ ಒಕ್ಕಲೆದೆ ಹಾಡು!


-ಫಾಲ್ಗುಣ ಗೌಡ, ಅಚವೆ


ಫಾಲ್ಗುಣ ಗೌಡ ಇವರು ಮೂಲತಃ ಉತ್ತರ ಕನ್ನಡದ ಅಂಕೋಲಾ ತಾಲೂಕಿನ ಅಚವೆಯವರು. ಪಿ.ಎಮ್‍. ಜ್ಯೂನಿಯರ್ ಅಂಕೋಲಾ ಕಾಲೇಜಿನಲ್ಲಿ ಪ್ರಾಚಾರ್ಯರಾಗಿದ್ದಾರೆ. ಅವರ ಕವನ ಸಂಕಲನ ‘ಮಾಮೂಲಿ ಮಳೆಯಲ್ಲ’ ಕನ್ನಡ ಸಾಹಿತ್ಯ ಪರಿಷತ್ತಿನಿಂದ ಪ್ರಕಟಣೆಗೊಂಡಿದೆ. ಅದೇ ರೀತಿ ಅವರ ಪ್ರಬಂಧ ಸಂಕಲನ ‘ಅಶಾಂತ ಕಡಲು ಪ್ರಶಾಂತ ಮುಗಿಲು’ ಕೃತಿಯು ರಾಘವೇಂದ್ರ ಪ್ರಕಾಶನದಿಂದ ಪ್ರಕಟಣೆಗೊಂಡಿದೆ. ಸಂಚಯ ಸಾಹಿತ್ಯ ಸ್ಪರ್ಧೆಯಲ್ಲಿ ಇವರ ಕೃತಿಗೆ ಬಹುಮಾನ ದೊರಕಿದೆ. – ಸಂಪಾದಕ.

110 views0 comments

Comments


bottom of page