ಆಕೆ ಬೊಮ್ಮಿ, ಹೆಣ್ಣಾದ ಭ್ರಹ್ಮ ಇರಬಹುದು. ಭೂ ಸುಧಾರಣೆಯ ಕಾಲಘಟ್ಟ. ಡಿಕ್ಲರೇಷನ್ ಪರ್ವ.
ಆಕೆಯ ಗಂಡ ತೀರಿಕೊಂಡಿದ್ದ ಮರವನ್ನಡರುವ ಕೌಶಲ್ಯದಲ್ಲಿ ಆತ ಹಮೀರನಾಗಿದ್ದ.
ಮೂರು ಗಂಡು ಮಕ್ಕಳು, ಒಂದು ಹೆಣ್ಣು. ಯಜಮಾನ ಸ್ವರ್ಗಕ್ಕೆ ಸಂದಾಗ
ದೊಡ್ಡ ಮಗನಿಗೆ ಮದುವೆಯಾಗಿತ್ತು, ಆತನೂ ಪೂರ್ಣಾವಧಿ ಯವ್ವನವನ್ನು ಅನುಭವಿಸದೆ ಮಗುಒಂದನ್ನು ಕೊಟ್ಟು ಹೋದಾತ. ಅವನ ಹೆಂಡತಿಯೂ ಬಹುಕಾಲ ಬದುಕಿದವಳಲ್ಲ, ಮಲೇರಿಯಕ್ಕೆ ಬಲಿ ಸಿಕ್ಕಿತ್ತು. ಎರಡನೆಯ ಮಗ ಐತ್ತಪ್ಪನಿಗೆ ಮದುವೆಯಾಯ್ತು, ಸಂತಾನ ಬೆಳೆಯಿತು. ಗೇಣಿ ಒಕ್ಕಲು ತನ. ಭತ್ತದ ವ್ಯವಸಾಯ, ಬೊಮಿಯದ್ದೆ ಹಿರಿತನ. ಆ ಕುಟುಂಬಕ್ಕೆ ನನ್ನ ತಂದೆಯವರಿಂದ ಕೊಡಲ್ಪಟ್ಟದ್ದು, ವಿಭಜನೆಯಲ್ಲಿ ನನ್ನ ಪಾಲಿಗೆ ಬಂದ ಗದ್ದೆಗಳು. ಒಂದೂವರೆ ಎಕ್ರೆ ವಿಸ್ತೀರ್ಣದ ಎರಡು ಬೆಳೆಯ ಗಣ್ಣಗಳು. ನಾನಾಗ ಬಿ.ಎ;ಬಿ.ಎಡ್;ಎಲ್. ಎಲ್.ಬಿ ಹಠತೊಟ್ಟು ಮುಗಿಸಿ ಪುತ್ತೂರಿನಲ್ಲಿ ಐದು ವರ್ಷಗಳನ್ನಷ್ಟೇ ಹಿಂದೆ ತಳ್ಳಿದ್ದೆ. ಜೊತೆಗೆ ವಿವೇಕಾನಂದ ಕಾಲೇಜಿನಲ್ಲಿ ಅಂಶಕಾಲಿಕ ಉಪನ್ಯಾಸಕರಾಗಿಯೂ ವಿದ್ಯಾರ್ಥಿಗಳ ಸಂಗಡ ಖುಷಿಯಲ್ಲಿದ್ದೆ. ತುರ್ತುಪರಿಸ್ಥಿತಿಯ ಸಿಡಿಲ ಸದ್ದು. ಉರಿಮಜಲು ರಾಮಭಟ್ಟರು ನನ್ನನ್ನು ಜನಸಂಘದ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಅಧ್ಯಕ್ಷನನ್ನಾಗಿ ಮಾಡಿದ್ದರು. ಕಾರಾಗೃಹ ಸಹವಾಸದ ಘಾಟು ಹೊಡೆದಿತ್ತು.
ಕಥೆ ತುಂಬ ಚಿಕ್ಕದಾಗ ಬಾರದೆಂಬುದಕ್ಕೆ ಇಷ್ಟು ಹೇಳಿದ್ದೇನೆ. ಮೇಲ್ಕಾಣಿಸಿದ ಸನ್ನಿವೇಶದ ದಿನಗಳಲ್ಲಿ ಒಂದು ಮುಂಜಾನೆ ಬೊಮ್ಮಿಯ ಮನೆಯಲ್ಲಿ ಹಾಜರಾದೆ. ಉಭಯ ಕುಶಲೋಪರಿಯ ಬಳಿಕ ಸುರುಳಿಸುತ್ತಿ ತಂದಿದ್ದ ಮುದ್ರಿತ ಹಾಳೆಯನ್ನು ಬಿಡಿಸಿ ಅವಶ್ಯವಿದ್ದ ವಿವರಗಳನ್ನೆಲ್ಲ ನಮೂದಿಸಿ ಬೊಮ್ಮಿಯ ಕೈಗಿತ್ತೆ. ಅವಳು ಇದೇನೆಂದು ತುಳುಭಾಷೆಯಲ್ಲಿ ಕೇಳಿದಳು. ನಾನು ಇದರಲ್ಲಿ ನೀನು, ನಿನ್ನ ಮಕ್ಕಳು ಗೇಯುವ ಎಲ್ಲಾ ಜಮೀನು ನಿನ್ನ ವಶಕ್ಕೆ ಬರುವ ದಾಖಲಾತಿ ಇದೆ. ಇದನ್ನು ಇಂಗ್ಲಿಷಿನಲ್ಲಿ ಡಿಕ್ಲರೇಷನ್ ಫಾರ್ಮ್ ಅಂತ ಹೇಳುತ್ತಾರೆ ಎಂದೆ. ಆಗ ಅವಳು 'ಧನಿಕುಳೆ' ಪುರಾ ಎಂಕ್ಲೆಗೆನೋ? ಈರೆಗ್ ದಾಲ ಬೋಡ್ಚೋ? "( ದನಿಗಳೇ ಎಲ್ಲಾ ನಮಗೋ, ನಿಮಗೇನೂ ಬೇಡವೇ?) ಅಂತ ಉದ್ಗರಿಸಿದಳು. ಅವಳ ಕಣ್ಣುಗಳು ನೀರಿನಲ್ಲಿಮಿಂದದ್ದನ್ನು ಕಂಡೆ.
ಎದುರಿಗಿದ್ದ ಮಗ ಐಯ್ತಪ್ಪ ಮೂಕವಿಸ್ಮಿತನಾಗಿದ್ದ.
" ನನಗೆ ದೇವರು ವಿದ್ಯೆ ಕೊಟ್ಟಿದ್ದಾನೆ, ಎಲ್ಲಿ ಬೇಕಾದರೂ ಬದುಕಿಕೊಂಡೇನು. ನಿಮಗೆ ಕೆಸರು ಹಿಸುಕುವುದನ್ನಷ್ಟೇ ಕೊಟ್ಟದ್ದಲ್ಲವೇ? " ಎಂದೆ. ಇಬ್ಬರೂ ಕಾಲಿಗೆ ಅಡ್ಡ ಬಿದ್ದರು, ಬೊಮ್ಮಿ ತನ್ನ ಕೈಯ್ಯಾರೆ ಕೊಟ್ಟ ಎಳೆನೀರು ಹೀರಿ ಅವರ ಮನೆಯಿಂದ ಹೊರಬಿದ್ದೆ.
ಈ ಪ್ರಸಂಗದ ಈ ಹೆಣ್ಣು ಬೊಮ್ಮಿಗೆ ಈ ನೆಲದಲ್ಲಿ ಯಾವ ಸ್ಥಾನ?
-----------------------------------
ಎಚ್ಚರದ ವಿನಂತಿ
ಅಯ್ಯಾ ಕಾಲಪುರುಷ, ನಿನ್ನೆಯವರೆಗೆ ನಡೆದ ಯುಗಾದಿಗಳ ನಿನ್ನ ಹಾದಿ,
ಬಿರುಕು ಬಿದ್ದು ಹೋಳಾಗಿ ಹೋಯ್ತು.
ಈ ಯುಗಾದಿಗದರೂ ತೋರಿಸುವೆಯಾ ಮುಂದೆ ಹಾಗಾಗದ ಹೊಸ ಹಾದಿ?
--------------------------
ಬಿ. ಪುರಂದರ ಭಟ್
ಪುತ್ತೂರು.
Comments