ಬಾನ ಬಯಲಿಗೆ ಬದುಕ ದುಪ್ಪಟಿ
- shreepadns
- Jan 19, 2023
- 1 min read
ಕೆಚ್ಚಲಿಗೆ ಸಿಕ್ಕಿಸುತ ಹಾಲು ಸೆಳೆಯುವ ಯಂತ್ರ
ಗರ್ಭದೊಲು ಬಿತ್ತುತ್ತ ಹುಸಿಬೀಜ ಮಂತ್ರ
ಜೀವ ಮೂಡದ ಕಾಯ ಸಾವಿನೆಡೆ ನಡೆದಿತ್ತು
ಜನನ-ಮರಣದ ಪರಿಯು ವಿಪರೀತ
ಸತ್ತವನು ಜನಿಸಿರಲು ಇದ್ದವನ ಹೆಣ ಬಿತ್ತು
ಹೆಗಲು ನೀಡಲು ಹೋದ ವಿಜ್ಞಾನ ದಾಸ
ಜಲ ನುಸುಳಿ ಬರಲೆಂದು ನಳವ ಜೋಡಿಸಿದೆ
ನಳದೊಳಗೂ ಸುಳಿದಿತ್ತು ಖೂಳ ಪಡೆಯು
ಎಳೆ ಬೇರುಗಳ ಸೀಳಿ ಅರಳು ಮೊಗ್ಗನು ಹಿಸುಕಿ
ಲೋಕ ಶೋಕದಿ ಮುಳುಗಿ ಮೂಕವಾಯಿತು ವಿಜ್ಞಾನ ದಾಸ
ಪ್ರಳಯ ಪ್ರಳಯವೆಂದೇಕೆ ಕಳವಳಿಸಿ ಸಾಯುತ್ತೀರಲ್ಲ
ಮೊದಲು ಖಾತರಿ ಪಡಿಸಿ ಬದುಕು ಇದೆಯೆಂದು
ಬದುಕಿಸುಸುರಿಗೆ ನಿತ್ಯ ಉರಿ-ಉರಿವ ಹೊಗೆಯನಿಲ
ಒಡಲಿನುರಿ ತಣಿಸಲೆನೆ ಸಿಕ್ಕಿದ್ದು ವಿಷದ-ಜಲ-ಜಾಲ
ಸಂಕರದ ಅನ್ನ ನಿರ್ಬೀಜ ಧಾನ್ಯ
ವಂಶವಾಹಿನಿ ತಿರುಚಿ ವಿಕೃತ ಫಲ-ಬೀಜ
ಅರ್ಬುದಕೆ ಬಲಿಯಾಯ್ತು ಗರ್ಭದಾಳ
ಸುರುಟುತ್ತ ಮುರುಟುತ್ತ ಜೀವ ನಾಳ
ಪ್ರಳಯದೆದೆಯಲಿ ಇರಲು ಹೊಸ- ಹುಟ್ಟು ಕಣಸು
ಬೆದರದಿರು ಬೆಚ್ಚದಿರು ಇದು ನಿಯತಿ ವಿಜ್ಞಾನ ದಾಸ
ರೆಪ್ಪೆ ಮುಚ್ಚಿಕೋ ಕನಸು, ಹಗಲಾದರೇನು?
ಮೇರೆದಪ್ಪಿದ ಅಂಕಿ, ಬಂಡವಾಳದ ಗೂಳಿ,
ತೇಲಲೇತಕೆ ಚಿಂತೆ, ವಿಶ್ವಸಂತೆಯ ಜಾತ್ರೆ
ಸಿದ್ಧವಿದೆ ನೇಣು ಉಚಿತ ಯಾನಕೆ ನಿತ್ಯ
ಬದುಕು ಭಾರವೋ? ಬೇಗ ನಿರ್ಧರಿಸು ವಿಜ್ಞಾನ ದಾಸ
- ಪುಟ್ಟು ಕುಲಕರ್ಣಿ
留言