ನವ ಸಂವತ್ಸರದಯನಗಳೆರಡಕೂ ಸೂರ್ಯನ ಪಥ ಚಲನ
ಧನುವನು ತೊರೆದು ಮಕರವ ಸೇರುವ ಕಾಲವೆ ಸಂಕ್ರಮಣ
ಜಾತಿ ಮತ ಭೇದವಿಲ್ಲದೆ ರವಿ ಬೆಳಕನು ನೀಡುವನು
ಭೂಲೋಕದ ಜೀವಿಗಳೆಲ್ಲವ ರಕ್ಷಿಪ ಪ್ರತ್ಯಕ್ಷ ದೇವನಿವನು.
ತನುಮನದೊಳಗಿಹ ಅಂದಿನ ಕೊಳೆಯನು ತೊಳೆದಿದೆ ತಿಲಸ್ನಾನ
ಬನ್ನಿರಿ ಒಳಿತಿಗೆ ಮಾಡುವ ಎಲ್ಲರೂ ಭಗವಂತನ ಧ್ಯಾನ
ಸೌರಮಾನ ಪರ್ವವಿದು ಸಮೃದ್ಧಿಯ ಸಂಕೇತ
ತಿಲತೈಲದ ಜ್ಯೋತಿಯ ಬೆಳಗುವ ಬನ್ನಿ ಸವಿಯನು ಹಂಚುತ್ತ.
ಆದಿತ್ಯ ಹೃದಯ ಸ್ತೋತ್ರವ ಪಠಿಸುವ ಇಂದಿನ ಶುಭ ಘಳಿಗೆ
ಶುಭ ಸಂದೇಶವ ಸಾರುವ ಬನ್ನಿ ಎಲ್ಲ ಬಂಧುಗಳಿಗೆ
ಶಾಪ ವಿಮೋಚನೆ ಕಾಲವಿದಂತೆ
ಕರುಣಿಸ ಬರುವನು ಪರಮಾತ್ಮ
ಸಗ್ಗದ ಬಾಗಿಲು ತೆರೆಯುವುದಂತೆ
ಮರಣಿಸಿದವನೇ ಪುಣ್ಯಾತ್ಮ
ಹೊಸಿಲಲಿ ಅರಿಶಿನ ಕುಂಕುಮ ಚಂದನ ತೂಗಿದೆ ಹಸಿರಿನ ತೋರಣ
ರಂಗು ರಂಗಿನ ರಂಗೋಲಿಯಲಿ ಸುಗಂಧ ಸುಮ ತಿಲ ತರ್ಪಣ
ಸಿಂಗರದುಡುಗೆಯ ಅಂಗನೆಯರಿಗೆ ಸಂಭ್ರಮದ ವಯ್ಯಾರ
ಅಂದದ ಹೂಗಳು ಹೆರಳಿಗೆ ಚೆಂದವು ಕೊರಳಿಗೆ ಮುತ್ತಿನ ಹಾರ
ಚಿಣ್ಣರ ಬಣ್ಣದ ಕನಸಿನ ಲೋಕಕೆ
ಕುಸುರೆಳ್ಳಿನ ಸವಿಯು
ಬಣ್ಣಿಸಿ ಬರೆದಿಹ ಸಂದೇಶದ ಕಾಗದ
ನೀಡಲು ಬಲು ಖುಷಿಯು.
ಸಾವಿತ್ರಿ ಮಾಸ್ಕೇರಿ
Comments