ಒಳಗನ್ನು ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ
ದಿನೇಶ ಉಪ್ಪೂರರ
"ನನ್ನೊಳಗೆ"
*****
ನಮ್ಮನ್ನು ನಾವೇ ಕಂಡುಕೊಳ್ಳುವುದಕ್ಕೆ ಇರುವ ದಾರಿ ಆತ್ಮಕಥನ ಅಥವಾ ಆತ್ಮಚರಿತ್ರೆ. ಬರೆಹಗಾರರಾದವರು ಸಾಮಾನ್ಯವಾಗಿ ತಮ್ಮ ಬದುಕಿನ ಸಾಧನೆ ಕುರಿತು ತಿಳಿಸಲು ಈ ಮಾರ್ಗ ಕಂಡುಕೊಳ್ಳುತ್ತಾರೆ. ಇತರರು ತಮ್ಮ ಪರಿಚಿತರಿಂದ ಬರೆಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಎಲ್ಲರಿಗೂ ತಮ್ಮ ಬಗ್ಗೆ ಜನರಿಗೆ ತಿಳಿಯಬೇಕೆಂಬ ಹಂಬಲ ಇದ್ದೇಇರುತ್ತದೆ. ಆದರೆ ತಿಳಿಸುವಂತಹದೇನಾದರೂ ಸ್ವಲ್ಪ ಅವರ ಬದುಕಿನಲ್ಲಿ ಇರಬೇಕಾದ್ದಗತ್ಯ.
ಯಕ್ಷಗಾನ ಕ್ಷೇತ್ರದ ಬಗ್ಗೆ ಅರಿತವರಿಗೆಲ್ಲ ಮಾರ್ವಿ ನಾರ್ಣಪ್ಪ ಉಪ್ಪೂರ ಭಾಗವತರ ಹೆಸರು ತಿಳಿದೇಇರುತ್ತದೆ. ಹಿರಿಯ ತಲೆಮಾರಿನ ಪ್ರಖ್ಯಾತ ಭಾಗವತರಲ್ಲಿ ಅವರ ಹೆಸರು ಅಗ್ರ ಪಂಕ್ತಿಯಲ್ಲೇ ಇದೆ. ಅವರ ಭಾಗವತಿಕೆಯ ಸವಿಯನ್ನು ಸಾಕಷ್ಟು ಸಲ ಉಂಡವರಲ್ಲಿ/ ಮೆಚ್ಚಿದವರಲ್ಲಿ ನಾನೂ ಒಬ್ಬ. ಅವರ ತಂದೆಯೂ ಭಾಗವತರಾಗಿದ್ದರಂತೆ. ಮಾರ್ವಿಯವರು ಕಾಳಿಂಗ ನಾವುಡರಂತಹ ಜನಪ್ರಿಯ ಭಾಗವತರನ್ನು ಯಕ್ಷಕ್ಷೇತ್ರಕ್ಕೆ ಕೊಟ್ಟವರು.
ಶ್ರೀ ದಿನೇಶ ಉಪ್ಪೂರರು ಮಾರ್ವಿ ನಾರ್ಣಪ್ಪ ಭಾಗವತರ ಪುತ್ರರು. ಇವರು ನೇರವಾಗಿ ಯಕ್ಷಗಾನ ಕ್ಷೇತ್ರದಲ್ಲಿ ಕಾಣಿಸಿಕೊಂಡವರಲ್ಲವಾದರೂ ಆ ಕಲೆಯ ಬಗ್ಗೆ ತಿಳಿದವರು. ಹವ್ಯಾಸಿ ಕಲಾವಿದರಾಗಿ ವೇಷ ಹಾಕಿದವರು. ಜೀವನ ನಿರ್ವಹಣೆಗಾಗಿ ಸರಕಾರಿ ಸೇವೆಗೆ ಸೇರಿದರೂ ಕಲಾ ಕ್ಷೇತ್ರದ ನಂಟು ಬಿಡದವರು. ಅವರು ತಮ್ಮ ಜೀವನಾನುಭವವನ್ನು ಈ ಕೃತಿಯ ಮೂಲಕ ಹೊರಹಾಕಿದ್ದಾರೆ.
ಇಲ್ಲಿ ಆತ್ಮಕಥನ ಎರಡು ಮಗ್ಗುಲುಗಳಲ್ಲಿ ಸಾಗುತ್ತದೆ. ಒಂದು ದಿನೇಶರದು , ಇನ್ನೊಂದು ಅವರ ತಂದೆಯವರದು. ದಿನೇಶರು ಕೆಲ ಯಕ್ಷಗಾನ ಪ್ರಸಂಗಗಳನ್ನೂ ಬರೆದಿದ್ದಾರೆ. ಅವರ ಬಾಲ್ಯದ ಹಳ್ಳಿಯ ಬದುಕು ಈ ಕೃತಿಯಲ್ಲಿ ಅತ್ಯಂತ ಆಪ್ತವಾಗಿ ಮೂಡಿಬಂದಿದೆ. ಆರ್ಥಿಕವಾಗಿ ಅನುಕೂಲವಿಲ್ಲದಿದ್ದರೂ ಬಾಲ್ಯದ ಜೀವನ ಸಹ್ಯವಾದದ್ದು ಯಕ್ಷಗಾನದ ನಂಟಿನಿಂದಲೇ. ಹೇಗೋ ವಿಕಲಚೇತನರೆಂಬ ಸರ್ಟಿಫಿಕೇಟ್ ಪಡೆದುಕೊಂಡು ಸರಕಾರಿ ನೌಕರಿಗೆ ಸೇರಿಕೊಂಡು ಬಚಾವಾದ ಸಂದರ್ಭ ಸ್ವಾರಸ್ಯಕರವಾದದ್ದೆನಿಸಿದರೂ ಅದರ ಹಿಂದೆ ಇರುವ ನೋವನ್ನೂ ಅವರು ತೋಡಿಕೊಂಡಿದ್ದಾರೆ. ಈ ಪ್ರಾಮಾಣಿಕತೆಯೇ ಆತ್ಮಕಥೆಗೆ ಬಲ ತರುತ್ತದೆ. ನಿಜ, ನೂರಕ್ಕೆ ನೂರರಷ್ಟು ಸತ್ಯ ಹೇಳುವದು ಯಾರಿಗೂ ಸಾಧ್ಯವಿಲ್ಲ. ( ಬಹುಶಃ ಗಾಂಧೀಜಿಯವರನ್ನು ಬಿಟ್ಟು). ಯಾಕೆಂದರೆ ನಮ್ಮ ಸುತ್ತಲಿನ ಸಮಾಜ ಯಾವ ರೀತಿ ಅದನ್ನೆಲ್ಲ ಸ್ವೀಕರಿಸುತ್ತದೆಂದು ಹೇಳುವದು ಕಷ್ಟ. ಇದ್ದದ್ದು ಇದ್ದ ಹಾಗೆ ಹೇಳಿದರೆ ನಾವು ನಮ್ಮ ಕೆಲ ಬಾಂಧವ್ಯವನ್ನೂ ಕಳೆದುಕೊಳ್ಳಬೇಕಾಗುತ್ತದೆ.
ದಿನೇಶ ಅವರೇನೂ ವೃತ್ತಿ ಬರೆಹಗಾರರಲ್ಲ. ಆದರೂ ಈ ಪುಸ್ತಕ ನಮ್ಮ ನಡುವಿನ ಅನೇಕ ಬರೆಹಗಾರರ ಕೃತಿಗಳಿಗಿಂತ ಕಡಿಮೆಯೇನಲ್ಲ. ನಿರೂಪಣೆಯ ಶೈಲಿ ತುಂಬ ಸೊಗಸಾಗಿದೆ. ಓದಿಸಿಕೊಂಡು ಹೋಗುವಂತಹದು. ಹಿರಿಯ ಯಕ್ಷಕವಿ , ಕಲಾತಜ್ಞ ಡಿ. ಎಸ್. ಶ್ರೀಧರ ಅವರ ಮುನ್ನುಡಿಯಿದೆ. ೨೪೦ ಪುಟಗಳ ಈ ಪುಸ್ತಕ ಮೈಸೂರಿನ ಮಡಿಲು ಪ್ರಕಾಶನ ಹೊರತಂದಿದೆ.
- ಎಲ್. ಎಸ್. ಶಾಸ್ತ್ರಿ
Comentários