top of page

ಬುಕ್ - ಫೇಸ್: ೨೯೦-ಮಣ್ಣಿನ ಪ್ರೀತಿಯ ಒಂದಿಷ್ಟು ಬರೆಹಗಳು

ಡಾ. ಆರ್. ಜಿ. ಹೆಗಡೆಯವರ

ಮೊದಲ ಮಳೆಯ ಪರಿಮಳ

**********

ಈ ತಲೆಬರೆಹ ನೋಡುತ್ತಿದ್ದಂತೆಯೇ ತಟ್ಟನೆ ಡಾ. ಎಂ. ಅಕಬರ ಅಲಿ ಅವರ ಕವನದ ಎರಡು ಸಾಲುಗಳು ನೆನಪಿಗೆ ಬಂದವು -

" ಮೊದಲ ಮಳೆ ಮುತ್ತಿಡಲು

ಮೈ ಜುಮ್ಮುಗೊಂಡಿತಿಳೆ..."

ಇಳೆಗೆ ಮೊದಲ ಮಳೆಯ ಹನಿಗಳು ಬಿದ್ದಾಗ ಉಂಟಾಗುವ ರೋಮಾಂಚನವೇ ಅಂತಹದು. ಪ್ರಕೃತಿಯನ್ನು ಪ್ರೀತಿಸಲಾರದವ ಕವಿಯಾಗಲಾರ. ಕವಿಗೆ ಮೊದಲ ಸ್ಫೂರ್ತಿಯೇ ಪ್ರಕೃತಿ. ನಂತರ ಹೆಣ್ಣು. ಪ್ರಕೃತಿಯೆಂದರೂ ಹೆಣ್ಣೇ.

ಡಾ. ರಾಮಚಂದ್ರ ಹೆಗಡೆಯವರ ಈ ಪುಸ್ತಕದ ತುಂಬ ಮೊದಲ ಮಳೆಯ ಸೆಳಕುಗಳಿವೆ. ಇವು ಒಂದು ರೀತಿಯ ಲಘುಬರೆಹಗಳು. ನನಗೆ ಇಂತಹ ಬರೆಹಗಳೆಂದರೆ ಬಲು ಇಷ್ಟ. ಏಕೆಂದರೆ ಇವುಗಳಲ್ಲಿ ನೆಲದ ಪ್ರೀತಿ ಇರುತ್ತದೆ. ಮಣ್ಣಿನ ವಾಸನೆಯಿರುತ್ತದೆ. ಸಂಸ್ಕೃತಿಯ ಸೊಗಡು ಇರುತ್ತದೆ. ಹೆಗಡೆಯವರೂ ನಮ್ಮ ಉತ್ತರ ಕನ್ನಡದ ಹಳ್ಳಿಯ ಬದುಕಿನಲ್ಲಿ ಬೆರೆತು ಬೆಳೆದವರಾದ್ದರಿಂದ ಸಹಜವಾಗಿಯೇ ಅವರ ಅನುಭವಗಳು, ಅವರ ಅನಿಸಿಕೆಗಳು , ಅವರ ಭಾವನೆಗಳು ಎಲ್ಲವೂ ನನ್ನದೇ ಅನಿಸಿಬಿಡುವಂತಹ ಆಪ್ತ ಭಾವ ಈ ಬರೆಹಗಳಲ್ಲಿ ಕಂಡುಬರುತ್ತದೆ.

ಇದಕ್ಕೆ ಅವರು "ಒಂದು ಸಂಸ್ಕೃತಿಯ ಚಿತ್ರಪಟಗಳು" ಎಂದಿದ್ದಾರೆ. ಪುಸ್ತಕಕ್ಕೆ ಮುನ್ನುಡಿ ಬರೆದ ಕತೆಗಾರ ಶ್ರೀಧರ ಬಳಗಾರ ಅವರು ಹೇಳುವಂತೆ " ಕಸೂತಿ ಹಾಕಿದ ಈ ನೆನಪಿನ ಚಿತ್ರಗಳು ಮುಸ್ಸಂಜೆಯ ನಸುಗೆಂಪಿನಂತೆ, ಹಿತವಾದ ಬೆಳದಿಂಗಳಿನಂತೆ ತಂಪಾಗಿ‌ನಮ್ಮೊಳಗೆ ಹಾಸಿಕೊಳ್ಳುತ್ತವೆ".

ರಾಮಚಂದ್ರ ಹೆಗಡೆಯವರು ಕುಮಟಾ ತಾಲೂಕಿನ ಮೂರೂರು ಎಂಬ ಹೆಸರಿರುವ ಒಂದೇ ಊರಿನವರು. ರಾಜಕೀಯ ಕಾದಂಬರಿಗಳ ಮೇಲೆ ಪಿಎಚ್ಡಿ ಮಾಡಿ ದಾಂಡೇಲಿ ಬಂಗೂರನಗರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದು ಅವರು ಪ್ರಸಿದ್ಧ ಅಂಕಣಕಾರರೂ ಹೌದು. ಐದು ಪುಸ್ತಕಗಳು ಪ್ರಕಟಗೊಂಡಿದ್ದು ಇನ್ನಷ್ಟು ಬರಲು ಸಿದ್ಧಗೊಂಡಿವೆ. ಈ ೨೫೦ ಪುಟಗಳ ಪುಸ್ತಕದ ಪುಟಗಳನ್ನು ತೆರೆಯುತ್ತ ಹೋದರೆ ಸಾಕು, ನಿಮ್ಮನ್ನು ಅವು ಸಲೀಸಾಗಿ ಓದಿಸಿಕೊಂಡುಹೋಗುತ್ತವೆ. ತುಂಬ ಆತ್ಮೀಯವೆನಿಸುವ ಚಿತ್ರಣಗಳು. ಹಳ್ಳಿಯ ಬದುಕಿನ ಪ್ರತಿಯೊಂದು ಕ್ಷಣವೂ ಇಲ್ಲಿ ದೃಶ್ಯಕಾವ್ಯದಂತೆ ಮೂಡಿಬಂದಿವೆ. ಯಾವ ಆಡಂಬರವೂ ಇಲ್ಲದ ಸರಳ ಭಾಷೆಯ ೪೯ ಶಬ್ದಚಿತ್ರಗಳು ಇಲ್ಲಿವೆ.

ಉತ್ತರ ಕನ್ನಡ ಜಿಲ್ಲೆಗೆ ಸೊಗಸು ಕೊಟ್ಟಿದ್ದು ಎರಡು. ೧. ನಿಸರ್ಗ. ೨. ಯಕ್ಷಗಾನ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು ಮುಡಿಯುವ ಜಿಲ್ಲೆ ಇದು. 'ಉತ್ತರ'ವಿಲ್ಲದ ಹಲವು ಪ್ರಶ್ನೆಗಳೇ ತುಂಬಿರುವ 'ಕನ್ನಡ' ಜಿಲ್ಲೆ. ಅದೆಲ್ಲ ಏನೇ ಇದ್ದರೂ ಬದುಕು ಅನುಭವಿಸುವವರಿಗೆ ಬದುಕಿನ ಹಲವು ವೈವಿಧ್ಯಗಳನ್ನು , ವೈಚಿತ್ರ್ಯಗಳನ್ನು ಕಟ್ಟಿಕೊಡುವ ಜಿಲ್ಲೆ ಮಾತ್ರ ಹೌದು. ಅವೇ ಈ ಜಿಲ್ಲೆಯವರ ಸಂಪತ್ತು.

"ಅಂಗಡಿ ಮುಂಗಟ್ಟುಗಳ ಕಥೆ"ಯಿಂದ " ಮಳೆಯೆಂದರೆ ಬರೀ ಸುರಿಯುವ ನೀರಲ್ಲ" ಎಂಬ ಬರೆಹದತನಕ ಇಲ್ಲಿ ಹೆಗಡೆಯವರ ಬಾಲ್ಯ ಯೌವನಗಳು ಕಂಡುಂಡ ಅನುಭವಗಳು , ನೋಡಿದ/ ಒಡನಾಡಿದ ವ್ಯಕ್ತಿಗಳು, ಅವರ ಸ್ವಭಾವಾತಿಶಯಗಳು, ಸ್ವಾರಸ್ಯಕರ ಘಟನೆಗಳು ಏನೆಲ್ಲ ನಮ್ಮೆದುರು ತೆರೆದುಕೊಳ್ಳುತ್ತಹೋಗುತ್ತವೆ. " ಮನಸ್ಸು ತುಂಬಿ ನಿಂತ ಹಾಡುಗಳ ಜಗತ್ತು"/ ಶಂಕ್ರಣ್ಣ ಅಂದ್ರೆ ಶಂಕ್ರಣ್ಣ/ ಸಣ್ಕೂಸನ ಎಮ್ಮೆಗಳ ಜಗತ್ತು/ ತಾಳಮದ್ದಲೆ/ ಇಡಕುವಿನ ಅಕ್ಕಿ ಮುಡೆ/ ಪರಿಮಳಗಳ ಜಾತ್ರೆ/ ಅಡಿಕೆ ತೋಟವೆಂಬ ಅದ್ಭುತ/ ಮೌನದಲ್ಲಿ ತೆರೆದುಕೊಂಡ ಮಂದ್ರಸ್ವರಗಳು/ಗೊಬ್ಬರ ಕಂಬಳ/ ಒಂದು ಯಕ್ಷಗಾನದ ರಿಹರ್ಸಲ್ಲು/ ಮೋಕ್ಷದತ್ತ ನಡೆದ ನಾಣಜ್ಜ/ ಕೂದಲು ಕತ್ತರಿಸಿಕೊಳ್ಳುವ ರೋಮಾಂಚನ/ ಕೊಟ್ಟಿಗೆಯೆಂದರೆ ಮನೆ, ಆಕಳೆಂದರೆ ಮಗಳು/ ಊಟ ಇರಲಿ ಬಿಡಲಿ, ಆಟ ಬೇಕೇ ಬೇಕು.....

ಇವೆಲ್ಲ ನಮ್ಮನ್ನು ತಮ್ಮೊಳಗೆ ಸೆಳೆದುಕೊಂಡು ನಮ್ಮದೇ ಅನುಭವಗಳೆಂಬಂತೆ ಅವನ್ನು ಸೀಪುತ್ತ ಅದರ ಸವಿ ಅನುಭವಿಸುವಂತೆ ಮಾಡುವ ಥಾಕತ್ತು ಈ ಬರೆಹಗಳಲ್ಲಿದೆ. ಯಾವುದನ್ನು ಎಂದು ಉದಾಹರಿಸುವದು? ಅದೂ ಕಷ್ಟವೇ. ಇವು ಓದಿ ನೋಡಬೇಕಾದದ್ದು ಹೊರತು ಹೇಳಿದರೆ ಅದರಲ್ಲಿ ಮಜಾ ಇಲ್ಲ. ಇಲ್ಲಿ ಬರುವವರಲ್ಲಿ ಯಾರೂ ನಮಗೆ ಅಪರಿಚಿತರೆನಿಸುವದೇಇಲ್ಲ.

ಆದ್ದರಿಂದ ನೀವು ಮೊದಲು ಮಾಡಬೇಕಾದ ಕೆಲಸ ಈ ಪುಸ್ತಕ ತರಿಸಿಕೊಂಡು ಓದಿ ಅದರ ಪರಿಮಳವನ್ನು/ ಅದರ ರುಚಿಯನ್ನು ಆಸ್ವಾದಿಸುವದು. ಆ ಸುಖವನ್ನು ತಪ್ಪಿಸಿಕೊಳ್ಳಬೇಡಿ. ಅವರ ಇನ್ನೂ ಮೂರು ಪುಸ್ತಕಗಳನ್ನು ಓದಬೇಕಿದ್ದು ನನಗೆ ಅತ್ಯಂತ ಪ್ರಿಯವಾದ ಈ ಪುಸ್ತಕವನ್ನೇ ಮೊದಲು ಕೈಗೆತ್ತಿಕೊಳ್ಳಲು ಕಾರಣ ನಾನೂ ಅನುಭವಿಸಿದ ಆ ಮೊದಲ ಮಳೆಯ ಪರಿಮಳ. ಸೊಗಸಾದ ಪುಸ್ತಕ ಕೊಟ್ಟಿದ್ದಕ್ಕೆ ಅವರಿಗೆ ಅಭಿನಂದನೆಗಳು.

- ಎಲ್. ಎಸ್. ಶಾಸ್ತ್ರಿ

ಡಾ. ಆರ್. ಜಿ. ಹೆಗಡೆ

ಮೊ. ನಂ. ೯೪೪೮೪೦೮೮೪೨




Comments


©Alochane.com 

bottom of page