[ ಮಾಗೋಡು ರಾಮ ಹೆಗಡೆಯವರು ನನಗೂ ಪರಿಚಿತರೆ. ಹೊನ್ನಾವರ ಪೇಟೆಯಲ್ಲಿ ಸಿಕ್ಕಾಗೆಲ್ಲ ನಗೆಯಾಡಿ " ಆರಾಮಿದ್ರನ್ರೋ " ಎಂದು ಕೇಳುವಷ್ಟು. ಪಟ್ಟಾಗಿ ಕ್ರಾಪ್ ಬಾಚಿಕೊಂಡು ಹೆಗಲ ಮೇಲೊಂದು ಟವೆಲ್ ಒಗೆದು, ಶುಭ್ರವಾದ ಲುಂಗಿ ಅಂಗಿಯೊಡನೆ ತಿರುಗಾಡುವ ಹೆಗಡೆಯವರ ಇತರ "ಭಾನಗಡಿ"ಗಳು ಗೊತ್ತಿಲ್ಲದಿದ್ದರೂ ಆಟದ ಮೇಳದವರೊಡನೆ ಅವರ ಒಡನಾಟ, ಸ್ಥಾನಿಕ ರಾಜಕೀಯದಲ್ಲಿ ಅವರ ಆಸಕ್ತಿಗಳ ಬಗ್ಗೆ ಮಾತುಗಳನ್ನು ಕೇಳಿದವ. ನನಗಿಂತ ಹತ್ತು ವರ್ಷ ದೊಡ್ಡವರು. ಈಚೆಗೆ "ದಶಾವತಾರ" ಎಂಬ ಹೆಸರಲ್ಲಿ ಅವರ ಆತ್ಮಕಥನ ಪ್ರಕಟವಾಗಿದೆ ಎಂಬ ಸುದ್ದಿ ತಿಳಿದು ಕುತೂಹಲದಿಂದ ಅಬ್ಳಿ ಹೆಗಡೆಯವರಿಗೆ ಒಂದು ಪುಸ್ತಕ ಸಿಕ್ರೆ ಕಳಿಸಿ ಎಂದಿದ್ದೆ. ಅವರು ಪ್ರೊ. ರಾಜು ಹೆಗಡೆಯವರಿಗೆ ತಿಳಿಸಿದ್ದರಿಂದ ನನಗೆ ಪ್ರತಿ ಬಂತು. ಆತುರದಿಂದ ಓದಿದೆ. ರಾಜು ಹೆಗಡೆಯವರು ಒಬ್ಬ ಕವಿಯಾಗಿ ಗೊತ್ತು. ಬೆಳಗಾವಿಯ ಡಾ. ಡಿ. ಎಸ್. ಕರ್ಕಿ ಪ್ರತಿಷ್ಠಾನದ ಕಾವ್ಯ ಸ್ಪರ್ಧೆಗೆ ಅವರ " ಟೊಂಗೆಯಲ್ಲಿ ಸಿಕ್ಕ ನಕ್ಷತ್ರ" ಸಂಕಲನ ಸ್ಪರ್ಧೆಗೆ ಬಂದಿತ್ತು. ತೀರ್ಪುಗಾರರಲ್ಲಿ ನಾನೂ ಒಬ್ಬನಿದ್ದೆ. ಅದಕ್ಕೆ ಪ್ರಥಮ ಬಹುಮಾನವೂ ಬಂತು. ಆಗ ರಾಜು ಪತ್ನೀ ಸಮೇತರಾಗಿ ಬಂದಿದ್ದರು. ಆದರೆ ಅವರ ಮಾವ ಪ್ರೊ. ಅವಧಾನಿಯವರು, ( ಆರ್ವಿಯವರು ) ನನ್ನ ಸಮಕಾಲೀನ ಒಡನಾಡಿಗಳು. ಅವರ " ಹೊಕ್ಕಳು" ನಮ್ಮ ಪ್ರೆಸ್ಸಲ್ಲೇ ಪ್ರಿಂಟಾಗಿತ್ತು. ಅವನ್ನೆಲ್ಲ ನೆನಪಿಸಿಕೊಳ್ಳಲು ಈಗ ಅವಕಾಶವಾಯಿತು. ] ಆತ್ಮಕಥನ ಪ್ರಾಮಾಣಿಕವಾಗಿರಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ ಹಾಗೆ ಅಪ್ಪಟ ಪ್ರಾಮಾಣಿಕ ಆತ್ಮಕಥನಗಳು ಸಿಗುವದು ಬಹಳ ಕಡಿಮೆ. ಗಾಂಧೀಜಿಯವರು ತಮ್ಮ ಆತ್ಮಶೋಧನೆ/ ಸತ್ಯಶೋಧನೆಯಲ್ಲಿ ತಮ್ಮ ಬದುಕನ್ನು ಪ್ರಾಮಾಣಿಕವಾಗಿ ತೆರೆದಿಡಲು ಪ್ರಯತ್ನಿಸಿದ್ದಾರೆ. ಈಚಿನ ಆತ್ಮಕಥನಗಳಲ್ಲಿ ಯಕ್ಷಗಾನ ಕಲಾವಿದರಾದ ಕೆರೆಮನೆ ಶಿವರಾಮ ಹೆಗಡೆಯವರ ನೆನಪಿನ ರಂಗಸ್ಥಳ ( ನಿರೂಪಣೆ: ಡಾ. ಜಿ. ಎಸ್. ಭಟ್ ಸಾಗರ) ದಲ್ಲಿ ಅವರು ತಮ್ಮ ಪತ್ನಿಯೇತರ ಸಂಬಂಧದ ಬಗ್ಗೆಯೂ ನಿರ್ಭಿಡೆಯಿಂದ ಹೇಳಿಕೊಂಡಿದ್ದುಂಟು. ಪಿ. ಲಂಕೇಶ ಅವರು ಆ ಭಾಗವನ್ನು ತಮ್ಮ ಪತ್ರಿಕೆಯಲ್ಲಿ ಮರು ಪ್ರಕಟನೆ ಮಾಡಿದ್ದರು ಮತ್ತು ಆ ವರ್ಷದ ಉತ್ತಮ ಕೃತಿ ಎಂಬ ಶಿಫಾರಸನ್ನೂ ಮಾಡಿದ ನೆನಪು. ಹಾಗೆ ನೋಡಿದರೆ ಮಾಗೋಡು ರಾಮ ಹೆಗಡೆಯವರೇನೂ ಜಗತ್ಪ್ರಸಿದ್ಧ ವ್ಯಕ್ತಿಗಳಲ್ಲ. ಹೆಚ್ಚು ಕಡಿಮೆ ಹೊನ್ನಾವರಕ್ಕೆ/ ಜಿಲ್ಲೆಗೆ ಸೀಮಿತವಾದ ವ್ಯಕ್ತಿ ಅವರು. ಆದರೆ "ಬೆಂಗಳೂರುವರೆಗೂ ಕೈ" ಇತ್ತು. ರಾಮಕೃಷ್ಣ ಹೆಗಡೆ, ಬಂಗಾರಪ್ಪ, ಪಟೇಲರನ್ನೆಲ್ಲ ಮಾತನಾಡಿಸಿ ತಮ್ಮ ಕೆಲಸ ಮಾಡಿಸಿಕೊಳ್ಳಬಲ್ಲಷ್ಟು. ತಮ್ಮ ಸಲುವಾಗಿ ಎಂದಲ್ಲ. ಇಲ್ಲದ ಊರ ಉಸಾಬರಿ ಮಾಡಿ ಬೈಸಿಕೊಳ್ಳುವ ಹವ್ಯಾಸ. ಹಾಗಂತ ಬೇರೆಯವರಿಗೆ ಕೆಡುಕು ಬಯಸಿದವರೇನಲ್ಲ. ಅವರೇ ಅದನ್ನೆಲ್ಲ ಏನೂ ಮುಚ್ಚಿಡದೇ ಬಿಚ್ಚಿ ಹೇಳಿದ್ದಾರೆ. ಇಲ್ಲಿ ಅವರ ಹತ್ತವತಾರಗಳಿಲ್ಲದಿದ್ದರೂ ನಾಲ್ಕಾರಂತೂ ಇದ್ದೇಇವೆ. ತಮಗನಿಸಿದ್ದನ್ನು ನಿರ್ಭಿಡೆಯಿಂದ ಬರೆಯುತ್ತ ಹೊರಟ ಮುಕ್ತ ಬರವಣಿಗೆ ಇಲ್ಲಿದೆ. ಅವರ " ಕೊಚ್ಚರಟ್ಟೆ" ಬರೆಹವನ್ನು ಒಂದು ರೂಪಕ್ಕೆ ತರಲು ಪರಿಶ್ರಮ ಪಟ್ಟವರು ಅವರ ಮಗನೇ. ( ರಾಜು). ಡಾ. ಎಂ. ಜಿ. ಹೆಗಡೆಯವರ ಮುನ್ನುಡಿ ಇದೆ. ಪುಸ್ತಕ ಅಷ್ಟೇನೂ ದೊಡ್ಡದಲ್ಲ. ಎಲ್ಲಾ ಸೇರಿ ೯೪ ಪುಟ. ಮಾಗೋಡ ಹೆಗಡೆಯವರು ಹೆಚ್ಚು ಕಲಿತವರಲ್ಲದಿದ್ದರೂ ಅವರು ಅವರದೇ ನಿರೀಕ್ಷೆಗಿಂತ ಹೆಚ್ಚು ಬೆಳೆದದ್ದು ಸಾಹಸ ಮನೋವೃತ್ತಿಯಿಂದಲೆ. ಒಂದು ರೀತಿ ಧಾಡಸಿತನವಿತ್ತು. ಮನಸ್ಸಿಗೆ ಬಂದದ್ದು ಆಗಲೇಬೇಕು. ಮಾಡಿಯೇ ತೀರುತ್ತಿದ್ದರು. ಅದಕ್ಕಾಗಿ ಅವರು ಜನರಿಂದ ಮೆಚ್ಚುಗೆಯನ್ನೂ ಪಡೆದರು. ಅದಕ್ಕಿಂತ ಹೆಚ್ಚು ಆರೋಪಗಳನ್ನೂ ಸಂಪಾದಿಸಿದರು. ಯಾವುದಕ್ಕೂ ಹಿಮ್ಮೆಟ್ಟಲಿಲ್ಲ. ಸಹಕಾರಿ ಸಂಸ್ಥೆಗಳ ಕ್ಷೇತ್ರ, ರಾಜಕೀಯ ಕ್ಷೇತ್ರ, ಯಕ್ಷಗಾನ ಕ್ಷೇತ್ರ ಎಲ್ಲ ಕಡೆ ಕೈಹಾಕಿದರು. ಕೆಲಮಟ್ಟಿಗೆ ಯಶಸ್ಸನ್ನೂ ಕಂಡರು. ಬಹಳ ದೊಡ್ಡದೇನನ್ನೂ ಸಾಧಿಸಲಿಲ್ಲ. ಅಂತಹ ಉದ್ದೇಶವೂ ಅವರಿಗಿದ್ದಂತಿರಲಿಲ್ಲ. ನಿಂತಲ್ಲಿ ನಿಲ್ಲದೆ, ಕುಂತಲ್ಲಿ ಕೂರದೇ ಅಸ್ವಸ್ಥತೆಯಿಂದ ಚಡಪಡಿಸುವ ಮನಸ್ಥಿತಿ ಅವರದಾಗಿತ್ತು. ಆ ಕ್ಷಣದಲ್ಲಿ ಮನಸ್ಸಿಗೇನು ತೋಚಿತೋ ಅದನ್ನು ಮಾಡುತ್ತ ನಡೆದರು. ಫಲಿತಾಂಶಕ್ಕಾಗಿಯೂ ಕಾಯುತ್ತ ಕೂರಲಿಲ್ಲ. ಹಿಂದಿರುಗಿ ನೋಡುವ ಅಭ್ಯಾಸವಿರಲಿಲ್ಲ. ಚಿಟ್ಟಾಣಿ ರಾಮಚಂದ್ರ ಹೆಗಡೆಯವರೊಡನೆ ಅತ್ಯಂತ ಆತ್ಮೀಯ ಒಡನಾಟವಿದ್ದುದರಿಂದ ಅವರ ಸಲುವಾಗಿ ನಿಸ್ಪೃಹವಾಗಿ ಸಾಧ್ಯವಿದ್ದುದೆಲ್ಲ ಮಾಡಿದರು. ರಾಜ್ಯಪ್ರಶಸ್ತಿ ಚಿಟ್ಟಾಣಿಯವರಿಗೆ ಬರಲೂ ಅವರೇ ಕಾರಣವಾದರು. ಕೆರೆಮನೆ ಮೇಳಕ್ಕೆ ಚಿಟ್ಟಾಣಿ ಸೇರದಂತೆ ಮಾಡಿದ ಆಪಾದನೆಯೂ ಅವರ ಮೇಲೆ ಬಂತು. ಆದರೆ ಅದು ಚಿಟ್ಟಾಣಿ ಅಭಿಮಾನಿಗಳಿಗಾಗಿ ಅನಿವಾರ್ಯವಾಗಿ ಮಾಡಬೇಕಾಗಿಬಂದದ್ದು ಎಂದು ವಿವರವಾಗಿ ಆ ಸಂದರ್ಭ ಹೇಳಿಕೊಂಡಿದ್ದಾರೆ. ಬದುಕಿನ ಉತ್ತರಾರ್ಧದಲ್ಲಿ ತಾಳಮದ್ದಲೆ ಕೂಟದಲ್ಲಿ ಕಾಣಿಸಿಕೊಂಡರು. ತಮ್ಮ ಬದುಕಿನ ಏರಿಳಿತಗಳನ್ನು, ಗುಣಾವಗುಣಗಳನ್ನು, ನಿಸ್ಸಂಕೋಚವಾಗಿ ಹೇಳಿಕೊಳ್ೞುತ್ತ ಹೋಗಿರುವ ಮಾಗೋಡು ರಾಮ ಹೆಗಡೆಯವರ ಈ ಆತ್ಮಕಥನದಿಂದ ನಮಗೆ ಬಹಳಷ್ಟೇನೋ ಸಿಗುತ್ತದೆ ಎಂಬ ನಿರೀಕ್ಷೆ ಮಾಡುವ ಅಗತ್ಯವಿಲ್ಲವಾದರೂ ಬರೆದಷ್ಟರಲ್ಲೇ ಕಾಣಿಸಿಕೊಂಡಿರುವ ಪ್ರಾಮಾಣಿಕ ಮನಸ್ಥಿತಿಯನ್ನು ಮೆಚ್ಚದೇ ಇರಲಾಗದು. ಸಮಾಜ ವ್ಯವಸ್ಥೆಯಲ್ಲಿ ಎಲ್ಲರದೂ ಏನೋ ಒಂದಿಷ್ಟು ಪಾಲು ಇದ್ದೇಇರುತ್ತದೆ. ಅವರು ಬೆಳೆದು ಬಂದ ಪರಿಸರ, ಮನೆಯ ಪರಿಸ್ಥಿತಿ ಇವೆಲ್ಲವನ್ನು ಗಮನಿಸಿದಾಗ "ಮಾಗೋಡು ರಾಮ ಹೆಗಡೆಯವರು" ಎಂದು ಅವರು ಅನಿಸಿಕೊಂಡದ್ದೇನು ಸಣ್ಣಸಾಮಾನ್ಯ ಸಂಗತಿ ಎಂದು ನನಗೆ ಅನಿಸುತ್ತಿಲ್ಲ. ಪುಸ್ತಕ ಕಳಿಸಿದ ಪ್ರಿಯ ರಾಜು ಅವರಿಗೆ ಕೃತಜ್ಞತೆ ಹೇಳಲೇಬೇಕು.
- ಎಲ್. ಎಸ್. ಶಾಸ್ತ್ರಿ
Comments