ನವ ಸಂವತ್ಸರದ ಹಾಡು
ಹೊಸಗನಸಿನ ಬೆನ್ನನೇರಿ
ಹಾರಿ ಬರುತಿದೆ
ನವ ಸಂವತ್ಸರದ ಹಕ್ಕಿ
ಮೂಡಣ ಅಂಚಿನ ಬೆಟ್ಟದಿ ಜಾರಿ
ಕರೆದು ತರುತಿದೆ
ಹೊಸ ಬೆಳಕನು ಹೆಕ್ಕಿ ll
ನವಚೈತ್ರದ ಬೀಜವ ತಂದು
ಬುವಿಯೊಳಗಿಟ್ಟು
ಹಾಡುತಿಹುದು ರಾಗದಲಿ
ಉದಯಿಸಲಿ ಹೊಸ ಚಿಗುರು
ಮೌಢ್ಯ ನಿಶೆಯಳಿದು
ಸಮರಸದ ಭಾವದಲಿ ll
ಸರ್ವೋದಯದ ಸಂಭ್ರಮದಲಿ
ನಲಿಯುತಲಿರಲಿ
ಪ್ರತಿದಿನದ ಸುಪ್ರಭಾತ
ಸಮನ್ವಯದ ಸಂಗಮದಲಿ
ಅರಳುತಲಿರಲಿ
ವಿಶ್ವಾಸದ ಪಾರಿಜಾತ ll
-ಶ್ರೀಧರ ಶೇಟ್ ಶಿರಾಲಿ
ಕವಿ ಶ್ರೀಧರ ಶೇಟ ಶಿರಾಲಿ ಅವರು ನಮ್ಮ ನಡುವಿನ ಅತ್ಯಂತ ಉತ್ಸಾಹಿ ಕ್ರಿಯಾಶೀಲ ಚೇತನ. ಅವರ "ನವ ಸಂವತ್ಸರದ ಹಾಡು" ಕವನ ನಿಮ್ಮ ಸಹಸ್ಪಂದನಕ್ಕಾಗಿ.
ಡಾ.ಶ್ರೀಪಾದ ಶೆಟ್ಟಿ ಸಂಪಾದಕ ಆಲೋಚನೆ.ಕಾಂ
Comments