top of page

ನಮ್ಮ ಮನೆಯೊಳಗೆ ನುಗ್ಗಿದ ಒಬ್ಬ ಭಯೋತ್ಪಾದಕ ! [ನಗೆ ಬರೆಹ]

ಅಂದು, ಮಧ್ಯರಾತ್ರಿಯ ನೀರವತೆಯಲ್ಲಿ ನನ್ನ ಮಡದಿ ಭಯ ಮಿಶ್ರಿತ ಧ್ವನಿಯಲ್ಲಿ “ರೀ... ಬೇಗ...ಏಳ್ರಿ.. ಯಾರೋ ಕಳ್ಳರು ನಮ್ಮ ಕೋಣೆಯಲ್ಲಿ ಸೇರಿಕೊಂಡಿದ್ದಾರೆ. ಎದ್ದು ಲೈಟ್ ಹಾಕ್ರಿ, ನನಗೆ ತುಂಬ ಭಯ ಆಗ್ತಾ ಇದೆ”. ಎಂದು ನನ್ನ ಭುಜ ಹಿಡಿದು ಅಲುಗಾಡಿಸಿದಾಗ ನಿದ್ದೆಯ ಗೌರಿಶಂಕರವನ್ನು ತಲುಪಿದ್ದ್ದ ನನಗೆ ಕಿರಿ ಕಿರಿ ಅನಿಸಿತು. ಎದ್ದು ಹೋಗಿ ಲೈಟ್ ಹಾಕಿ ಸುತ್ತಲೂ ನೋಡಿ “ ಕಳ್ಳರೂ ಇಲ್ಲ; ಸುಳ್ಳರೂ ಇಲ್ಲ ... ಎಲ್ಲಾ ನಿನ್ನ ಭ್ರಮೆ. ಸುಮ್ನೆ ಮಲಕೋ” ಎಂದು ಸಣ್ಣದಾಗಿ ಗದರಿಸಿದಾಗ ಅವಳು ಅವಮಾನಗೊಂಡವಳಂತೆ ಒಲ್ಲದ ಮನಸ್ಸಿನಿಂದ ಹಾಸಿಗೆಯ ಮೇಲೆ ಉರುಳಿದಳು. ಅವಳು ಮಲಗಿದ್ದನ್ನು ನೋಡಿ ನಾನೂ ಲೈಟ್ ಆರಿಸಿ ಹಾಸಿಗೆಯ ಮೇಲೆ ಉರುಳಿದಾಗ ನಿದ್ದೆ ನನ್ನನ್ನು ಆವರಿಸಿತು.


ನಿದ್ದೆಯ ಅತಿ ರಮ್ಯವಾದ ಪ್ರಪಂಚದಲ್ಲಿ ತೇಲುತ್ತಿದ್ದ್ದ ನನಗೆ ಮತ್ತೊಂದು ಬ್ರೇಕು ಬೀಳಬೇಕೆ.! ಮಲಗಿದ ಅರ್ಧ ತಾಸಿನಲ್ಲಿಯೇ ನನ್ನ ಹೆಂಡತಿ ಮತ್ತೊಮ್ಮೆ ಎಬ್ಬಿಸಿದಳು. “ ರೀ.. ಏಳ್ರಿ.. ಬೇಗ ..” ಎಂದು ಬಲವಂತ ಮಾಡಿದಳು. “ ನೋಡಿ ಮತ್ತೆ ಶಬ್ದ ಆಗ್ತಾ ಇದೆ. ಯಾರೋ ಓಡಿದ ಹಾಗೆ ಅನಿಸ್ತಾ ಇದೆ. ನನಗಂತೂ ಭಯ ಆಗ್ತಾ ಇದೆ. ದಯವಿಟ್ಟು ನೀವು ಮಲಗ ಬೇಡಿ” ಎಂದು ಅತ್ಯಂತ ದೈನ್ಯತೆಯಿಂದ ಕೈಮುಗಿದು ಬೇಡಿಕೊಂಡಳು. ಅವಳ ಮಾತು ಕೇಳಿದ ನನಗೆ ನಗು ಒತ್ತರಿಸಿ ಬಂದರೂ ಹೇಗೋ ಪ್ರಯಾಸದಿಂದ ಹತ್ತಿಕ್ಕಿಕೊಂಡು ಅವಳಿಗೆ ಸಮಾದಾನ ಮಾಡುವ ಧಾಟಿಯಲ್ಲಿ ನುಡಿದೆ.” ನೋಡು, ನೀನು ಹಗಲೆಲ್ಲ ಟಿ.ವಿ.ಹಾಗೂ ಪೇಪರುಗಳಲ್ಲ್ಲಿ ಕೊಲೆ, ಸುಲಿಗೆಗಳ ದೃಶ್ಯಗಳನ್ನು ನೋಡ್ತೀಯಾ. ರಾತ್ರಿಯಲ್ಲಿ ಕ್ರೈಮ್ ನ್ಯೂಸ್, ಕ್ರೈಮ್ ಡೈರಿ ಅಂತ ಅದು ಬೇರೆ ನೋಡ್ತೀಯಾ. ಅದು ಬೇರೆ ಇತ್ತೀಚೆಗೆ ಬೆಂಗಳೂರಿನಲ್ಲಿ ಹಾಗೂ ಅಹಮದಾಬಾದಗಳಲ್ಲಿ ಸರಣಿ ಬಾಂಬು ಸ್ಪೋಟ ನಡೆದಿವೆ. ಇವೆಲ್ಲ ನಿನ್ನ ಮನಸ್ಸಿನ ಯಾವುದೋ ಮೂಲೆಯಲ್ಲಿ ಹುದುಗಿ ನೀನು ಸುಷುಪ್ತಾವಸ್ಥೆಯಲ್ಲಿದ್ದಾಗ ಅವು ಕನಸಿನ ರೂಪದಲ್ಲಿ ನಿನ್ನನ್ನು ಕಾಡ್ತಾ ಇರುತ್ತವೆ. ಇದನ್ನೇ ಸಿಗ್ಮಂಡ್ ಫ್ರಾಯ್ಡ್ ಎಂಬ ಮನಃಶಾಸ್ತ್ರಜ್ಞ ತನ್ನ ಮನಃಶಾಸ್ತ್ರದಲ್ಲಿ ಪ್ರತಿಪಾದಿಸಿದ್ದು” ಎಂದು ನಾನು ಹೇಳಿದ್ದಕ್ಕೆ, ಅವಳು “ ರೀ, ನೀವು ಬೇಕಾದರೆ ಮಲಗಿಕೊಳ್ಳಿ. ಆದರೆ ಲೈಟ್ ಮಾತ್ರ ಹಾಗೆ ಇರಲಿ” ಎಂದಳು. ಅನಿವಾರ್ಯವಾಗಿ ನಾನು ಹಾಸಿಗೆಯ ಮೇಲೆ ಉರುಳಿದೆ.


ಬೆಳಿಗ್ಗೆ ಹಾಸಿಗೆಯಿಂದ ಎದ್ದು ಮುಖ ಮಾರ್ಜನ ಮಾಡಿಕೊಂಡು ಹಾಗೆಯೇ ವಾಕ್ ಹೋಗಿಬಂದೆ. ಬರುವಾಗ ಹಾಲಿನ

ಬೂತಿನಿಂದ ಹಾಲು ತಂದು ‘ಫ್ರಿಜ್’ನಲ್ಲಿಟ್ಟು ಹೆಂಡತಿಯನ್ನು ಎಬ್ಬಿಸೋಣವೆಂದು ನೋಡಿದರೆ ಅವಳಿನ್ನೂ ಹಾಸಿಗೆಯಲ್ಲಿಯೆ ಮಲಗಿದ್ದಳು. ಅವಳನ್ನು ಎಬ್ಬಿಸಿದೆ. ಎದ್ದು ಕುಳಿತ ಅಕೆ ಕಣ್ಣು ಉಜ್ಜಿಕೊಳ್ಳುತ್ತಾ ಹೇಳಿದಳು, “ ನಾನು ನಿನ್ನೆ ರಾತ್ರಿ ನಿಮಗೆ ನಿದ್ದೆ ಹಾಳು ಮಾಡಿದೆ. ನಿನ್ನೆ ರಾತ್ರಿ ನಮ್ಮ ರೂಮಿಗೆ ಬಂದಿದ್ದು ಕಳ್ಳ ಅಲ್ಲ. ಬಹುಷಃ ಒಂದು ಇಲಿ ರೂಮಿನೊಳಗೆ ಸೇರಿಕೊಂಡಿದೆ. ನೀವು ಮಲಗಿದ ಮೇಲೆಯೂ ಒಂದೆರಡು ಬಾರಿ ಶಬ್ದ ಕೇಳಿಬಂತು. “ ಎಂದು ಹೇಳಿದಾಗ ಅವಳು ಭ್ರಮಾ ಲೋಕದಿಂದ ವಾಸ್ತವಕ್ಕೆ ಇಳಿದಿರುವದು ನನಗೆ ಸಂತಸ ನೀಡಿತು. ಆದರೆ ಈ ಸಂತೋಷದ ಬೆನ್ನಲ್ಲೇ ಒಂದು ಹೊಸ ತಲೆ ನೋವು ಹುಟ್ಟಿಕೊಂಡಿತೆಂದು ನನಗೆ ಅನಿಸಿತು. ಇಲ್ಲಿಯವರೆಗೆ ಶಾಂತಿ ನಿವಾಸವಾಗಿದ್ದ ಈ ಮನೆಯಲ್ಲಿ ಹೊಸ ಅತಿಥಿಯ ಆಗಮನವೊಂದು ಅಲ್ಲೋಲ ಕಲ್ಲೋಲಕ್ಕೆ ಎಲ್ಲಿ ಕಾರಣೀಭೂತವಾದೀತೆಂಬ ಭಯವೂ ಉಂಟಾಯಿತು. ಹೆಂಡತಿಗೆ ಹೇಳಿದೆ. “ ನೋಡು, ನೀನೇನೂ ಭಯ ಪಡಬೇಡ. ಸಂಜೆ ಮಕ್ಕಳೆಲ್ಲ ಮನೆಯಲ್ಲಿ ಇದ್ದಾಗ ಎಲ್ಲರೂ ಕುಳಿತುಕೊಂಡು ಆ ಇಲಿಯನ್ನು ಹೇಗೆ ಉಪಾಯವಾಗಿ ಹಿಡಿದು ಮರ್ದನ ಮಾಡಬಹುದು ಎಂಬುದನ್ನು ಚರ್ಚೆ ಮಾಡೋಣ.” ಎಂದು ಅವಳನ್ನು ಸಮಾದಾನ ಮಾಡಿದೆ.


ನಿಶ್ಚಯಿಸಿದಂತೆ ಅಂದು ರಾತ್ರಿ ಎಂಟು ಗಂಟೆಗೆ ನನ್ನ ಅಧ್ಯಕ್ಷತೆಯಲ್ಲಿ ಹೆಂಡತಿ, ಇಬ್ಬರು ಮಕ್ಕಳು ಹಾಗೂ ನನ್ನ ವೃದ್ಧ ತಾಯಿಯನ್ನೊಳಗೊಂಡ ಸರ್ವ ಪಕ್ಷ ಸಭೆ ಜರುಗಿತು. ಸಭೆಯ ಪ್ರಾರಂಭದಲ್ಲಿ ಸುತ್ತಲೂ ಭಧ್ರವಾದ ‘ಮೆಷ್’ಹೊಂದಿರುವ ಈ ಮನೆಯಲ್ಲಿ ಆ ಉಗ್ರಗಾಮಿ ಹೇಗೆ ಒಳ ನುಸುಳಿ ಬಂದ ಎಂಬುದರ ಬಗ್ಗೆ ಚರ್ಚೆ ನಡೆಯಿತು. ಬೇಸಿಗೆ ಕಾಲವಾದುದರಿಂದ ಗಾಳಿ ಒಳ ಬರಲಿಯೆಂದು ನಾನು ಹಾಲ್‍ನ ಕಿಟಕಿ ತೆರೆದು ಮಲಗಿದ್ದೆ. ಅದೇ ಉಗ್ರಗಾಮಿ ಒಳ ನುಸುಳಲು ಕಾರಣವೆಂದು ವಿರೋಧಿಪಕ್ಷದ ನಾಯಕನ ಹಾಗೆ ನನ್ನ ಕಿರಿಯ ಮಗ ವಾದ ಮಂಡಿಸಿದ. ಅದಕ್ಕೆ ನನ್ನ ಹೆಂಡತಿಯೂ ಧ್ವನಿಗೂಡಿಸಿ ಎಲ್ಲದಕ್ಕೂ ನಾನೇ ಕಾರಣವೆನ್ನುವಂತೆ ಪ್ರತಿಬಿಂಬಿಸಿದರು. ನನ್ನ ಯಾವುದೇ ಸಮಜಾಯಿಶಿಗೂ ಅವರು ಒಪ್ಪದಿದ್ದಾಗ ನಾನೇ ಚರ್ಚೆಯನ್ನು ಬೇರೆಡೆಗೆ ತಿರುಗಿಸಿದೆ. “ನೋಡಿ, ಆರೋಪ - ಪ್ರತ್ಯಾರೋಪ ಮಾಡ್ತಾ ಇದ್ರೆ ಯಾವುದೇ ಅರ್ಥ ಇಲ್ಲ; ನಮ್ಮ ಬೆಡ್ ರೂಮಿನಲ್ಲಿರುವ ಭಯೋತ್ಪಾದಕನನ್ನು ಕೊಲ್ಲುವದು ಯಾ ಒಕ್ಕಲೆಬ್ಬಿಸುವದು ಮುಖ್ಯ” ಎಂದು ನುಡಿದೆ. ಆದರೆ ಅಲ್ಲಿಯ ವರೆಗೆ ಸುಮ್ಮನೆ ಇದ್ದ ನನ್ನ ವೃದ್ಧ ಮಾತೋಶ್ರೀ ನನ್ನ ಈ ಪ್ರಸ್ತಾಪಕ್ಕೆ ತಕರಾರು ಎತ್ತಿದಳು. “ ನೋಡು ಮಾಣಿ, ಇಲಿಯನ್ನು ಕೊಲ್ಲೋದು ಅಂದ್ರೆ ಪಾಪ. ಇಲಿ ಅಂದ್ರೆ ಮೂಷಿಕ; ಅದು ಗಣಪತಿಯ ವಾಹನ. ಇಲಿ ಕೊಂದ್ರೆ ದೇವರಿಗೆ ಸಿಟ್ಟು ಬರ್ತು. ಅದಕ್ಕಾಗಿ ಇಲಿ ಕೊಲ್ಲೂಲೆ ಹೋಗಡಾ. ಅದಕ್ಕೆ ಸ್ವಲ್ಪ ಹೆದರಿಸು; ಅದೇ ತನ್ನ ಪಾಡಿಗೆ ತಾನೇ ಹೋಗ್ತು” ಎಂದು ನುಡಿದಳು. ಅಜ್ಜಿಯ ಮಾತಿಗೆ ನನ್ನ ಹಿರಿಯ ಮಗ ತನ್ನ ಸಹಮತ ನೀಡಿದ. ಆದರೆ ನನ್ನ ಎರಡನೇಯ ಮಗ ಅದನ್ನು ವಿರೋಧಿಸಿ, “ ಅಜ್ಜಿ, ನೀನು ರಾಜಕಾರಣಿಗಳ ಹಾಗೆ ಮಾತಾಡ್ತಿ. ನಿನ್ನ ಮಾತು ಕೇಳಿದ್ರೆ ನಾಳೆಗೆ ಇಡೀ ಮನೆ ತುಂಬಾ ಇಲಿ ಸಂತಾನವೇ ಹೆಚ್ಚಾಗಿ ನಾವೇ ಈ ಮನೆ ಬಿಡೋ ಪರಿಸ್ಥಿತಿ ನಿರ್ಮಾಣ ಆದ್ರೂ ಆತು” ಎಂದ ಅವನ ಮಾತಿಗೆ ಇಡೀ ಸಭೆಯೆ ದೊಡ್ಡದಾಗಿ ನಕ್ಕು ಬಿಟ್ಟಿತು.


ಸಭೆಯ ನಿರ್ಣಯದಂತೆ ನನ್ನ ನಾಯಕತ್ವದಲ್ಲ್ಲಿ ಇಬ್ಬರು ಮಕ್ಕಳನ್ನು ಒಳಗೊಂಡ ಒಂದು ಕಾರ್ಯಚರಣೆಯ ತಂಡವನ್ನು ರಚಿಸಿ ಕಾರ್ಯೋನ್ಮುಖರಾದೆವು. ಮೊದಲು ರೂಮಿನ ಬಾಗಿಲು ಹಾಗೂ ಕಿಟಕಿಗಳನ್ನು ಭದ್ರವಾಗಿ ಮುಚ್ಚಿ ರೂಮನ್ನೆಲ್ಲ ಶೋಧಿಸುವ ಕೆಲಸ ಪ್ರಾರಂಭವಾಯಿತು. ಸುಮಾರು ಒಂದು-ಒಂದೂವರೆ ತಾಸುಗಳ ನಮ್ಮ ಶೋಧನಾ ಕಾರ್ಯದಲ್ಲ್ಲಿ ಯಾವುದೇ ಮಹತ್ವದ ಸುಳಿವು ಸಿಗದೆ ಕೊನೆಗೆ ಹುಡುಕಿ ಹುಡುಕಿ ಸುಸ್ತಾದ ನಾವು ತಪಾಸಣೆಯನ್ನು ಅಲ್ಲಿಗೇ ಕೈಬಿಟ್ಟೆವು.

ಈ ಘಟನೆ ನಡೆದ ಒಂದು ಮೂರ್ನಾಲ್ಕು ದಿನಗಳ ನಂತರ ನಮ್ಮ ಮಕ್ಕಳ ರೂಮಿನಲ್ಲಿ ಮಧ್ಯರಾತ್ರಿ ಹೊತ್ತಿಗೆ ಇಲಿರಾಜ ಬಂದಿದ್ದನಂತೆ. ಅಲ್ಲಿಯೂ ಅವನ ಚಲನವಲನದಿಂದ ಆದ ಶಬ್ದಕ್ಕೆ ಮಕ್ಕಳಿಬ್ಬರೂ ಎದ್ದು ಲೈಟು ಹಾಕಿ ನೋಡಿದಾಗ ಅದು ಪುಸ್ತಕದ ಶೆಲ್ಪಿನಿಂದ ಚಂಗನೆ ಹಾರಿ ‘ಹಾಲ್’ಗೆ ಓಡಿದ್ದಷ್ಟೇ ಇವರ ಕಣ್ಣಿಗೆ ಬಿತ್ತು. ಮುಂದೆ ಅದರ ಜಾಡು ಹಿಡಿಯಲು ಅವರಿಗೆ ಸಾಧ್ಯವಾಗದೆ ಪುನಃ ರೂಮಿಗೆ ಬಂದು ಮಲಗಿದರಂತೆ. ಆಮೇಲೆ ಇಲಿಯ ಉಪಟಳ ಒಂದು ವಾರ ಕಂಡು ಬರಲಿಲ್ಲ. ಮುಂದೊಂದು ದಿನ ಬೆಳಿಗ್ಗೆ ನಮ್ಮ ಕೆಲಸದ ಮುದುಕಿ ನನ್ನ ತಾಯಿಯ ಕೋಣೆಯಲ್ಲಿ ಕಸ ಗುಡಿಸುವಾಗ ಇಲಿಯನ್ನು ನೋಡಿ ಕೂಗಿ ನಮ್ಮ ಕರೆಯುವ ಹೊತ್ತಿಗೆ ಅದು ಅವಳ ಕಣ್ಣು ತಪ್ಪಿಸಿ ಅಲ್ಲಿಂದ ಮಾಯವಾಗಿತ್ತು. ಆ ಮುದುಕಿ ನನ್ನ ಮನೆಯವರನ್ನು ಕರೆದು, “ ಆ ಇಲಿ ಶಾನೆ ದೊಡ್ಡದಾಗೆ ಇತ್ತ್ರಮ್ಮ್ತ . ಇಂತದೆ ಒಂದು ಇಲಿ ಆ ತಮಿಳರ ಮನೇಲಿ ಬಂದಿತ್ತು. ಅವರ ಮನೆ ಬೆಡ್ಡು, ಬೆಡ್ಶೀಟೂ, ಆ ಯಮ್ಮನ ರೇಶಿಮೆ ಸೀರೆ, ಆ ಯಪ್ಪನ ಪ್ಯಾಂಟು ಎಲ್ಲಾನೂ ಕಡಿದು ಕಡಿದು ಹಾಳು ಮಾಡಿ ಹಾಕಿತ್ತು ಅಮ್ಮ. ನೀವು ಆ ಇಲಿನ ಹಾಂಗೇ ಬುಡ್ಬೇಡಿ; ಏನಾದರೂ ಮಾಡಿ ಹೊಡ್ದು ಸಾಯಿಸಲೇ ಬೇಕ್ರಮ್ಮ. ಇಲ್ದೆ ಹೋದ್ರೆ ನಿಮ್ಮ ಮನೆಗೆ ದೊಡ್ಡ ಆಪತ್ತು ಅಮ್ಮ” ಎಂದು ವಿರೋಧಿ ಪಕ್ಷದ ನಾಯಕರಂತೆ ಏರಿದ ಕಂಠದಲ್ಲಿ ನೀಡಿದ ಭಾಷಣದ ಪರಿಗೆ ನನ್ನ ಹೆಂಡತಿಯ ಮನಸ್ಸು ಮತ್ತೆಲ್ಲಿ ಪೂರ್ವಾವಸ್ಥೆಗೆ ತಿರುಗುತ್ತದೆಯೋ ಎಂಬ ಭಯ ಉಂಟಾಯಿತು. ತಕ್ಷಣ ನಾನು ಮಧ್ಯೆ ಪ್ರವೆಶಿಸಿ “ ಇಲ್ಲಮ್ಮ, ಅದಕ್ಕೆ ನಾನು ಬೇರೆ ಉಪಾಯ ಮಾಡ್ತಾ ಇದ್ದೇನೆ. ಒಂದೆರಡು ದಿನದಲ್ಲೇ ಅದನ್ನು ಹಿಡಿತೀನಿ. ನೀವ್ಯಾರೂ ತಲೆ ಕೆಡಿಸಿ ಕೊಳ್ಳುವದು ಬೇಡ” ಎಂದು ನುಡಿದೆ. ಆಗ ಕೆಲಸದವಳು ಅಲ್ಲಿಗೇ ಮಾತು ನಿಲ್ಲಿಸಿದಳು.


ಅಂದು ಸಂಜೆ ಮಾರ್ಕೇಟಿಗೆ ಹೋಗಿ ಒಂದು ಇಲಿ ಪಂಜರವನ್ನು ಖರೀದಿಸಿ ತಂದು ಅದರಲ್ಲಿ ಸುಟ್ಟ ಕೊಬ್ಬರಿ ಚೂರೊಂದನ್ನು ಇಟ್ಟು ಪಂಜರವನ್ನು ‘ಹಾಲ್’ನಲ್ಲಿಟ್ಟೆ. ಆದರೆ ಬೆಳಿಗ್ಗೆ ಎದ್ದು ನೋಡಿದರೆ ಕೊಬ್ಬರಿ ಮತ್ತು ಪಂಜರ ಮಾತ್ರ ಯಥಾ ಸ್ಥಿತಿಯಲ್ಲಿಯೇ ಇತ್ತು. ನನ್ನ ಮೊದಲ ಪ್ರಯತ್ನ ಯಶಸ್ವಿಯಾಗಲಿಲ್ಲ. ಮರುದಿನ ಕೊಬ್ಬರಿಯ ಬದಲು ಈರುಳ್ಳಿ ಬೋಂಡಾವನ್ನು ಇಟ್ಟು ನೋಡಿದೆ. ಅದಕ್ಕೂ ಯಶಸ್ಸು ಸಿಗಲಿಲ್ಲ. ಮೂರನೇಯ ದಿನ ಅದನ್ನು ಸ್ಥಳ ಬದಲಾಯಿಸಿ ಅಡಿಗೆ ಮನೆಯಲ್ಲಿಟ್ಟೆ. ಆಗಲೂ ಕಾರ್ಯಾಚರಣೆಗೆ ಫಲ ದೊರಕಲಿಲ್ಲ. ಇದನ್ನೆಲ್ಲ ನೋಡುತ್ತಿದ್ದ ನನ್ನ ಎರಡನೇಯ ಮಗ ಅಜ್ಜಿಯ ಕೋಣೆಯಲ್ಲಿ ಇಲಿ ಪಂಜರ ಇಡುವಂತೆ ಒಂದು ಸಲಹೆ ನೀಡಿದ, ಅಂದು ರಾತ್ರಿ ಅಮ್ಮ ಮಲಗಿದ ಮೇಲೆ ಅವಳಿಗೆ ಗೊತ್ತಾಗದ ಹಾಗೆ ಇಲಿ ಪಂಜರವನ್ನು ಅವಳ ಹಾಸಿಗೆಯ ಹತ್ತಿರವಿಟ್ಟು ಲೈಟು ಆರಿಸಿ ನನ್ನ ರೂಮಿಗೆ ಹೋಗಿ ಮಲಗಿದೆ. ಮಧ್ಯ ರಾತ್ರಿಯ ಹೊತ್ತಿಗೆ “ ಮಾಣಿ, ಮೂಷಿಕ ಎಂತಕ್ಕೋ ಕೂಗ್ತಾ ಇದ್ದು ; ಒಂದ ಸಲ ಇಲ್ಲಿಗೆ ಬಂದು ನೋಡು” ಎಂದು ಅಮ್ಮ ನನ್ನನ್ನು ಕೂಗಿ ಕರೆಯುತ್ತಿದ್ದಳು. ನನಗೆ ಖಾತ್ರಿ ಆಯಿತು - ನಮ್ಮ ‘ಆಪರೇಶನ್ ಮೂಷಿಕ’ ಯಶಸ್ವಿ ಆಗಿದೆ ಎಂದು. ತಡ ಮಾಡದೆ ಅಮ್ಮನ ಕೋಣೆಗೆ ಹೋಗಿ ಲೈಟ್ ಹಾಕಿ ನೋಡುತ್ತೇನೆ – ಅಲ್ಲಿ, ನಮ್ಮ ಮನೆಯಲ್ಲಿ ಏಕೆ ನನ್ನ ಇಡೀ ಸಂಸಾರದಲ್ಲಿಯೇ ಭಯದ ಲೋಕವನ್ನೇ ಸೃಷ್ಟಿಸಿದ ಇಲಿ ಮಹಾರಾಜ ಅರ್ಥಾತ್ ನನ್ನ ತಾಯಿಯ ಭಾಷೆಯಲ್ಲಿ ವಿಘ್ನೇಶ್ವರನ ವಾಹನ ಮೂಷಿಕದೇವ ಪಂಜರದಲ್ಲಿ ಸೆರೆಯಾಗಿ ವಿಲಿ ವಿಲಿ ಎಂದು ಒದ್ದಾಡುತ್ತಿದ್ದ. ನನಗೆ ಖುಷಿಯೋ ಖುಷಿ- ನನ್ನ ಯೋಜನೆ ಯಶಸ್ವಿಯಾಗಿದ್ದಷ್ಟೆ ಅಲ್ಲಾ ನನ್ನ ಮಾನ ಉಳಿದಿದ್ದಕ್ಕೆ.! ಮಲಗಿದ್ದ ಹೆಂಡತಿ ಮಕ್ಕಳನ್ನೆಲ್ಲ ಕೂಗಿ ಕರೆದು ಎಬ್ಬಿಸಿದೆ. ಅವರೆಲ್ಲ ಹಾಸಿಗೆಯಿಂದ ಎದ್ದು ಬಂದು ಸೆರೆಯಾದ ಇಲಿಯನ್ನು ಬೆರಗಿನಿಂದ ಅವಲೋಕಿಸಿದರು. ಬಾಂಬು ಹಾಕಿ ನೂರಾರು ಜನರ ಪ್ರಾಣ ಹರಣ ಮಾಡಿದ ಭಯೋತ್ಪಾದಕನನ್ನು ಪೋಲಿಸರು ಹಿಡಿದು ಒಯ್ಯುವದನ್ನು ನೋಡುವಾಗಿನ ಸ್ಥಿತಿಯಂತಿತ್ತು.


ಆದರೆ ನನ್ನ ತಾಯಿಗೆ ನಾವೆಲ್ಲ ಸೇರಿ ಮೂಷಿಕನಿಗೆ ಈ ರೀತಿ ಹಿಂಸೆ ನೀಡುತ್ತಿರುವದು ಸುತಾರಾಂ ಒಪ್ಪಿಗೆಯಾಗಲಿಲ್ಲ. ಆಗ ನನ್ನ ಕಿರಿಯ ಮಗ , “ ಅಜ್ಜಿ, ಆ ಸೆಂಟಿಮೆಂಟಲ್ ಎಲ್ಲ ಈಗೀನ ಕಾಲ್ದಲ್ಲಿ ನಡೆಯೋದಿಲ್ಲ. ಸರಕಾರ ಕಾನೂನು, ವಿಚಾರಣೆ, ಸೆಂಟಿಮೆಂಟಲ್ ಅಂತ ಹೇಳಿ ಭಯೋತ್ಪಾದಕರನ್ನು ಗಲ್ಲಿಗೆ ಏರಿಸದೆ ಬಿಡುತ್ತಾ ಬರುತ್ತಿದೆ. ಅದರ ಪರಿಣಾಮವಾಗಿಯೇ ಇವತ್ತು ಬೀದಿ ಬೀದಿಲೆಲ್ಲ ಬಾಂಬ ಹಾಕ್ತಾ ಇದ್ದಾರೆ. ನಮ್ಮದು ಯಾವುದೇ ವಿಚಾರಣೆ-ಗಿಚಾರಣೆ ಅಂತ ಇಲ್ಲ. ನಾಳೆ ಬೆಳಿಗ್ಗೆ ನಿನ್ನ ಮೂಷಿಕನ್ನು ನಾವು ಮರ್ದನ ಮಾಡೋದು ಖಂಡಿತ.” ಎಂದು ಸಾರಿದಾಗಲಂತೂ ಅಮ್ಮನಿಗೆ ಕಣ್ಣಲ್ಲಿ ನೀರು ಬಂದು ಬಿಟ್ಟಿತು. ಇದು ವಿಕೋಪಕ್ಕೆ ತಿರುಗುತ್ತದೆಯೆಂದು ತಿಳಿದ ನಾನು, “ ಅದನ್ನೆಲ್ಲ ನಾಳೆ ವಿಚಾರ ಮಾಡೋಣ; ಈಗ ನೀವು ಹೋಗಿ ಮಲಗಿಕೊಳ್ಳಿ ” ಅಂತಾ ಸಮಾದಾನ ಹೇಳಿ, ಇಲಿಯ ಪಂಜರವನ್ನು ಎತ್ತಿಕೊಂಡು ಹೋಗಿ ವರಾಂಡದಲ್ಲಿಟ್ಟು ಎಲ್ಲರಿಗೂ ಮಲಗಲು ಹೇಳಿ ನಾನೂ ಮಲಗಿದೆ.


ಬೆಳಿಗೆ ಎದ್ದವನೇ ವರಾಂಡಕ್ಕೆ ಬಂದು ನೋಡಿದೆ. ನನಗೇ ಆಶ್ಚರ್ಯ ಕಾದಿತ್ತು!. ವರಾಂಡದಲ್ಲಿಟ್ಟ ಪಂಜರ ಅಲ್ಲಿ ಇರಲೇ ಇಲ್ಲ. ಹೆಂಡತಿ, ಮಕ್ಕಳನ್ನು ಎಬ್ಬಿಸಿ ಕೇಳಿದೆ. ಯಾರೂ ತಾವು ಪಂಜರ ಮುಟ್ಟಿಲ್ಲ ಅಂತ ಹೇಳಿದಾಗ ನನಗೆ ಆಶ್ಚರ್ಯ ತಡೆಯಲಾಗಲಿಲ್ಲ.


ಕೋಣೆಯಿಂದ ನಿದಾನವಾಗಿ ಹೊರಬಂದ ತಾಯಿ, “ ಮಾಣಿ, ನಿಂಗೊ ಎಲ್ಲ ಸೇರ್ಕಂಡು ಬೆಳಿಗ್ಗೆ ಎದ್ದವರು ಆ ಬಡ ಪ್ರಾಣೀನಾ

ಕೊಂದು ಬಿಟ್ತ್ರಿ ಹೇಳಿ ನಾನೇ ರಾತ್ರಿ ಎದ್ದು ಬಾಗಿಲು ತೆಗೆದು ಹೊರಗಡೆ ಹೋಗಿ ಮೂಷಿಕನನ್ನು ದೂರಕ್ಕೆ ಬಿಟ್ಟು ಬಂದ್ಬಿಟ್ಟೆ. ಇಲಿ ಪಂಜರನ ಬಚ್ಚಲ ಮನೆಲಿ ಇಟ್ಟಿದ್ದೆ; ನಿನ್ನ ಹೆಂಡ್ತಿಗೆ ಹೇಳಿ ಅದನ್ನು ತೊಳೆಸಿ ಚಜ್ಜಾದ ಮೇಲೆ ಕಟ್ಟಿ ಇಡೂಲೆ ಹೇಳ್ಬಿಡು.” ಎಂದು ಹೇಳಬೇಕೆ?

ಬಚ್ಚಲು ಮನೆಗೆ ಹೋಗಿ ನೋಡಿದೆ. ಬರಿದಾದ ಇಲಿ ಪಂಜರವು ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡ ಹೊರಟ ನನ್ನನ್ನು ನೋಡಿ ಅಣುಕಿಸುವಂತೆ ಅಲ್ಲಿ ವಿರಾಜಮಾನವಾಗಿತ್ತು.!


- ಶ್ರೀಪಾದ ಹೆಗಡೆ, ಸಾಲಕೊಡ



57 views0 comments

Comments


bottom of page