ನಾನು ಈ ಮಂಚದಿಂದ ಸ್ವಂತವಾಗಿ ಹತ್ತಿಳಿದು ಹತ್ತು ಹನ್ನೆರಡು ವರ್ಷಗಳೇ ಕಳೆದು ಹೋಗಿವೆಯೇನೋ ಅಂತ ನೆನಪು ಮಾಡ್ಕೊಂಡ ನನ್ನ ಕಣ್ಣಿಂದ ನೀರು ಜಾರಿದ್ದು ಯಾರಿಗೂ ಕಾಣಲೇ ಇಲ್ಲಾ..ಯಾಕೆಂದರೆ ನೋಡಲು ಅಲ್ಲಿ ಯಾರೂ ಇರಲೇ ಇಲ್ಲಾ.. ‘ಅತ್ತೆ.. ಇವತ್ತು ನಿಮಗೆ ಸ್ನಾನ ಮಾಡಿಸೋದಿಲ್ಲ..ತುಂಬಾ ಕೆಲಸ ಇದೆ’ ಸೊಸೆ ಹೇಳ್ತಾ ಇದ್ದಳು.. "ಇವತ್ತು ಮಾಡ್ಸಿಬಿಡೇ"ಅಂತ ಕೂಗಿ ಹೇಳ್ಬೇಕು ಅನ್ನಿಸ್ತು ಆದ್ರೆ ನನ್ನ ಮಾತು ಮುಟ್ಟೋದು ನನ್ನ ಮನಸ್ಸಿನ ತನಕ ಮಾತ್ರ.. ಅಂತ ನೆನಪಾದಾಗ ಕೂಗಿ ಹೇಳಲು ಯೋಚಿಸೋದೂ ಸಹಿತ ವ್ಯರ್ಥ ಪ್ರಯತ್ನ ಅಂತ ಸುಮ್ಮನಾದೆ.. ಆದ್ರೂ ಅವಳಿಗೆ ನನ್ನ ಮನಸಿನ ಮಾತು ಮುಟ್ಟಿಸೋಕೆ ಹತ್ತಿರವೇ ಇದ್ದ ಘಂಟೆಯನ್ನು ಎರಡು ಸಲ ತೂಗಿದೆ. ಘಂಟೆ ಶಬ್ಧಕ್ಕೆ ಹೊರಗೆ ಬಂದ ಸೊಸೆ 'ಇಲ್ಲಾ ಅತ್ತೆ ಇವತ್ತು ಆಗೋದೇ ಇಲ್ಲಾ ಊರಲ್ಲಿ ಮದುವೆ ಇದೆ.. ನಿಮಗೆ ಗಂಜಿ ಕೊಟ್ಟು ನಾನು ಮದುವೆಗೆ ಹೋಗಿ ಬರಬೇಕು..ನೀವು ಇವತ್ತೊಂದು ದಿನ ಸ್ನಾನ ಮಾಡದೇ ಇದ್ರೆ ಏನೂ ಆಗಲ್ಲ..ನಾಳೆ ಕೆಲಸದ ನಿಂಗಿ ಬರ್ತಾಳಲ್ಲ ಅವಳೇ ನಿಮಗೆ ಮೈ ತೊಳೆಸಿಕೊಡ್ತಾಳೆ'..ಅಂತ ಹೇಳಿ ಒಳಗೆ ಹೋಗೇ ಬಿಟ್ಟಳು..
ಒಹ್..! ಇವತ್ತು ಊರಲ್ಲಿ ಮದುವೆಯಂತೆ..! ಅದಕ್ಕೆ ನಮ್ಮ ಮನೆಯಲ್ಲಿ ಯಾರಿಗೂ ಪುರಸೊತ್ತೇ ಇಲ್ಲಾ..ನಮ್ಮೂರೇ ಹಾಗೆ ಸುಖದಲ್ಲಿ, ದುಃಖದಲ್ಲಿ ಒಟ್ಟಾಗಿ ಒಂದೇ ಮನೆಯವರ ಹಾಗೇ ಬದುಕುವುದಕ್ಕೇ ಮಾದರಿಯಾಗಿತ್ತು..ಈಗಲೂ ಹಾಗೇ ಇದೆ... ಇತ್ತೀಚಿಗೆ ಯಾರ ಮನೆಯಲ್ಲೂ ಮೊದಲಿನಷ್ಟು ಜನ ಇಲ್ಲಾ ಅದಕ್ಕೆ ಸಣ್ಣ ಪುಟ್ಟ ಕಾರ್ಯದಲ್ಲಿ ಮೊದಲಿನ ಸಂಭ್ರಮ ಇಲ್ಲಾ ಅನಿಸುತ್ತದೆಯಂತೆ... ಊರಿನ ಮಕ್ಕಳೆಲ್ಲ ಕಲಿತು, ಬೇರೆ ಬೇರೆ ಊರುಗಳಲ್ಲಿ ಒಳ್ಳೊಳ್ಳೆ ಕೆಲಸದಲ್ಲಿದ್ದಾರಂತೆ.. ಅವರ್ಯಾರು ಊರಿಗೆ ಜಾಸ್ತಿ ಬರೋದೇ ಇಲ್ಲವಂತೆ... ಆಗಾಗ ನನ್ನ ಬಳಿ ಸುಳಿದಾಡುವ ನನ್ನ ಸೊಸೆ ಗೊಣಗಾಡುವ ವಿಷಯಗಳಲ್ಲಿ ಇದೂ ಒಂದಾಗಿತ್ತು ಅವಳು ಹೇಳಿದ ಹಾಗೇ.. ಊರಿಂದ ಹೊರಗೆ ಹೋದ ಮಕ್ಕಳನ್ನ ದೂರಲು ನನ್ನ ಮನಸ್ಸು ಯಾಕೋ ಒಪ್ಪಲಿಲ್ಲ.. ಬೇರೆ ಊರಿಗೆ ಹೋಗಿ ಬದುಕು ಕಟ್ಟುವ ಕಷ್ಟದ ಅರಿವು ಅಂದಿಗೂ ನನಗಿತ್ತು.. ಕಟ್ಟಿದ ಬದುಕನ್ನ ಹಾಗೇ ನೆಡೆಸಿಕೊಂಡು ಹೋಗುವ ಜವಾಬ್ದಾರಿ ಅವರಿಗಿರುವ ಅರಿವೂ ನನಗಿತ್ತು..
ಪಾಪ ನನ್ನ ಸೊಸೆ ಯಾವತ್ತಿಗೂ ಬೇಸರಿಸದೆ.. ಮನೆಯಲ್ಲಿ ಎಲ್ಲ ಕೆಲಸ ಒಬ್ಬಳೇ ಮಾಡ್ತಿರ್ತಾಳೆ... ಅವಳಿಗೆ ನಾನೂ ಭಾರವಾಗಿಬಿಟ್ಟೆ.. ಮಗನೂ ಒಳ್ಳೆಯವನೇ ಆದರೆ ಸ್ವಲ್ಪ ಒರಟ, ಕೋಪಿಷ್ಠ..ಅವನನ್ನು ಅದೆಷ್ಟು ಚೆನ್ನಾಗಿ ಸಂಭಾಳಿಸುತ್ತಾಳೆ ನನ್ನ ಸೊಸೆ ವಾರಿಜ.. ನಾನೇ ಇನ್ನೊಂದಿಷ್ಟು ಸರಿಯಾಗಿ ನನ್ನ ಮಗನನ್ನ ಬೆಳೆಸಿದ್ರೆ ಅವಳಿಗೆ ಇಷ್ಟು ಕಷ್ಟ ಆಗ್ತಾ ಇರ್ಲಿಲ್ಲವೇನೋ..ಒಂದು ವರ್ಷದ ಹಿಂದಿನ ತನಕ ನಾನೂ ಮಲಗಿದಿಂದಲೇ ಕೂಗಿ 'ಅವಳ ಮೇಲೆ ಸಿಟ್ಟು ಮಾಡ್ಬೇಡ' ಅಂತ ಕೂಗಿ ಹೇಳ್ತಾ ಇದ್ದೆ.. "ಅದು ನಿನ್ನ ಇರಿವನ್ನು ತೋರಿಸ್ಕೊಳೋ ಒಂದು ಪ್ರಯತ್ನವಾಗಿತ್ತು" ಅಂತ ನನ್ನ ಒಳ ಮನಸ್ಸು ಕೂಗಿ ಹೇಳಿದ ಹಾಗಾಯಿತು.. ತಕ್ಷಣ ನನ್ನ ಯೋಚನೆ ಬದಲಾಯಿಸಿ ‘ ಹೌದು ನನ್ನ ಮಗ ಕೋಪಿಷ್ಠ ನಾದರೂ ಒಂದೇ ನಿಮಿಷದ ಕೋಪ ಅವನದ್ದು.. ಅದರಲ್ಲೂ ತನ್ನ ಮಡದಿ ಅಂದರೆ ವಿಶೇಷ ಅಕ್ಕರೆ ಅವನಿಗೆ... ಅವರ ಸುಖ ಸಂಸಾರದಲ್ಲಿ ನಾನೇ ಒಂದು ತೊಡಕು’ ಅನ್ನಿಸಿದಾಗ ಸುಮ್ಮನೆ ನಿಟ್ಟುಸಿರು ಬಿಟ್ಟು ನಾನು ಮಲಗುವ ಪ್ರಯತ್ನದಲ್ಲಿರುವಾಗ ..
'ಇವತ್ತು ನಾನು ಈ ಸೀರೆ ಉಟ್ಟಕೊಳಲಾ'.. ಅಂತ ಸೊಸೆ ವಾರಿಜ ಅವಳ ಗಂಡ ಶ್ರೀಹರಿ ಹತ್ತಿರ ಕೇಳ್ತಾ ಇದ್ದಳು ಅನ್ಸುತ್ತೆ.. ನನ್ನ ಹತ್ತಿರ ಕೇಳಿದ್ರೆ ಆ ಹಸಿರು ಬಣ್ಣದ.. ತಿಳಿ ಗುಲಾಬಿ ಅಂಚಿನ ಸೀರೆ ಉಟ್ಕೋ ಅಂತ ಹೇಳ್ಬೇಕು.. ಆ ಸೀರೆಲ್ಲಿ ಅವಳು ಮಹಾಲಕ್ಷ್ಮಿ ಹಾಗೇ ಕಾಣ್ತಾಳೆ.. ಅಷ್ಟರಲ್ಲಿ 'ನಾನು ಹೇಳಿದ್ದು ಉಟ್ಕೋಳೊದಿಲ್ಲ ಅಂದ್ರೆ ನನ್ನನ್ನ ಯಾಕೆ ಕೇಳ್ತಿಯಾ ನಿನಗೆ ಯಾವ್ದು ಬೇಕೋ ಅದನ್ನೇ ಉಟ್ಕೊಂಡು ಹೊರಡು ಬೇಗ ಲೇಟ್ ಆಗ್ತಾ ಇದೆ' ಅಂತ
ನನ್ನ ಮಗನ ದೂರ್ವಾಸಾವತಾರದ ಗಲಾಟೆ..
ನನ್ನ ಮಾತು ನಿಂತು ಹೋದ ಮೇಲೆ ನನ್ನ ಕಿವಿ ಸ್ವಲ್ಪ ಜಾಸ್ತಿನೇ ಚುರುಕಾಗಿದೆ.. ಅಂದುಕೊಳ್ಳುತ್ತ..ನೀರು ಕೇಳಲು ನನ್ನ ಏಕಮಾತ್ರ ಅಸ್ತ್ರ ಘಂಟಾನಾದ ಮೊಳಗಿಸಿದೆ..
ಮಗ ಬಂದು ಏನಮ್ಮ ನಿಂದು ಈಗ ಅಂದ.. 'ಬೇಸರಿಸಿಕೊಳ್ಳುತ್ತ ಕೇಳಿದ' ಅಂತಾ ನನ್ನ ಮನಸ್ಸಿಗೆ ಅನಿಸಿತು.. ನೀರು ಬೇಕು ಅಂತ ಸನ್ನೆ ಮಾಡಿದೆ.. ನನ್ನ ಸನ್ನೆ ನನ್ನ ಮಗ, ಸೊಸೆ ಇಬ್ಬರಿಗೂ ಚನ್ನಾಗೇ ಅರ್ಥ ಆಗ್ತಿತ್ತು.
ಇರಮ್ಮಾ ವಾರಿ ನಿನಗೆ ಗಂಜಿ ತರ್ತಾ ಇದಾಳೆ..ಅಂತ ಹೇಳಿ ಹೊರಗೆ ಹೋಗೇ ಬಿಟ್ಟ. ಇವ್ನು ಇವತ್ತು ನನ್ನ ಜೊತೆ ಸ್ವಲ್ಪ ಹೊತ್ತು ಕುಳಿತು ಕೊಳ್ಳಬೇಕಿತ್ತು..ಅಂತ ತುಂಬಾ ಅನ್ನಿಸಿತು.
ವಾರಿಜ ಗಂಜಿ ತಂದು ನನ್ನೆದುರಿಗಿಟ್ಟು, ಅತ್ತೆ ಬೇಗ ಮುಗಿಸಿ. ನಾನು ರೆಡಿಯಾಗಿ ಬರ್ತೀನಿ ಅಂತ ಹೋದಳು ಅವಳನ್ನ ಕೂರಿಸಿ ಹಸಿರು ಸೀರೆ ಉಟ್ಕೋ ಅಂತ ಹೇಳಬೇಕು ಅನ್ನಿಸಿತು ಆದರೆ ಅವಳು ಅಲ್ಲಿರಲಿಲ್ಲ.
ತುಂಬಾ ದಿನಗಳಾಯ್ತು ಗಂಜಿ ಬಿಟ್ಟು ಬೇರೆ ಏನೂ ತಿನ್ನೋಕೆ ಸಾಧ್ಯ ಆಗ್ತಾ ಇಲ್ಲಾ.. ಈ ಗಂಜಿ ತಿನ್ನೋದು ಒಂದು ಶಿಕ್ಷೆ ಆಗಿ ಹೋಗಿದೆ ಅಂತ ಬೇಸರಿಸಿ ಕೊಳ್ಳುತ್ತಾ ಗಂಜಿ ತಿಂದು ಮುಗಿಸುವ ಹೊತ್ತಿಗೆ ವಾರಿಜಾ ರೆಡಿಯಾಗಿ ಬಂದಳು.
ಅವಳನ್ನ ನೋಡಿ ನನ್ನ ಕಣ್ಣ ನಾನೇ ನಂಬದೇ ಕಣ್ಣೆಲ್ಲ ಉಜ್ಜಿಕೊಂಡು ಮತ್ತೊಮ್ಮೆ ನೋಡಿದೆ...ಹೌದು ಅವಳು ನಾನು ಮನಸ್ಸಿನಲ್ಲಿ ಅವಳನ್ನ ಯಾವ ಸೀರೆಯಲ್ಲಿ ನೋಡ್ಬೇಕು ಅಂತ ಆಸೆ ಪಟ್ಟಿದ್ದನೋ ಅದೇ ಸೀರೆ ಉಟ್ಕೊಂಡಿದ್ದಾಳೆ.. ನಾನೇ ಅವಳಿಗೆ ಕೊಟ್ಟ ನನ್ನ ಎರಡೆಳೆ ಚಿನ್ನದ ಸರ ಹಾಕಿಕೊಂಡು ಮಹಾಲಕ್ಷ್ಮಿ ಹಾಗೇ ಕಾಣ್ತಾಇದಾಳೆ... ನನ್ನಿಷ್ಟದ ಮಲ್ಲಿಗೆ ಹೂವು ಮುಡ್ಕೊಂಡಿದಾಳೆ ಅನ್ನಿಸುತ್ತೆ ಪರಿಮಳ ಘಮ ಘಮ ಅಂತಾ ಬರ್ತಾ ಇತ್ತು... ಅವಳನ್ನ ಹಾಗೇ ಸ್ವಲ್ಪ ಹೊತ್ತು ಕಣ್ಣು ತುಂಬಿಕೊಂಡು ಪ್ರೀತಿಯಿಂದ ತಲೆ ಸವರುವ ಆಸೆ ಆಯ್ತು... ಆದ್ರೆ ಆಗಲೇ ಅವಳು ಬಾಗಿಲು ಹಾಕೋ ಸದ್ದಾಗುತ್ತಿತ್ತು...
ನನ್ನ ಸೊಸೆಯನ್ನ ನಾನು ಮನೆ ತುಂಬಿಸಿಕೊಂಡಾಗ ಇನ್ನೂ ಚೆನ್ನಾಗಿದ್ದಳು..ಈಗ ಸ್ವಲ್ಪ ವಯಸ್ಸಾಗಿದೆ ಅದ್ಕೆ ಇರ್ಬೇಕು ಸ್ವಲ್ಪ ದಪ್ಪನೂ ಆಗಿದಾಳೆ ಅಂತ ಯೋಚನೆ ಮಾಡುವಾಗ ಸಣ್ಣಗೆ ನಗು ಬಂತು.. ಹಾಗೇ ನೋಡಿದ್ರೆ ನಾನು ನನ್ನ ಮದುವೆಯಲ್ಲಿ ಅವಳಗಿಂತ ಚನ್ನಾಗೇ ಇದ್ದೆ ಅಂತ ಯೋಚನೆ ಬಂದಾಗ 'ನನ್ನ ಸುಕ್ಕುಗಟ್ಟಿದ ಕೆನ್ನೆಯಲ್ಲೂ ರಂಗೇರಿತೇನೋ' ಅಂತ ಅನ್ನಿಸಿತು.
ಮಲಗುವ ಪ್ರಯತ್ನ ಮಾಡುತ್ತಿದ್ದ ನನಗೆ ಮತ್ತೆ.... 'ಇಡೀ ದಿನ ಹಾಸೀಗೆಯ ಮೇಲೇ ಮಲಗಿರುವ ನಿನಗೆ ನೀನು ಹೇಳಿದ ತಕ್ಷಣ ಒಲಿಯುವುದು ಸಾಧ್ಯ ಇಲ್ಲಾ' ಅಂತ ನಿದ್ರಾದೇವಿ ತನ್ನ ಹಳೇ ಜಗಳ ತೆಗೆದಳು..ಈಗೀಗ ಈ ಜಗಳ ನಮ್ಮಿಬ್ಬರ ನಡುವೆ ತೀರಾ ಸಾಮಾನ್ಯ...ಆದ್ರೆ ಇವತ್ತು ನನಗವಳ ಜೊತೆ ಜಗಳವಾಗಲಿ.. ಅವಳನ್ನ ಒಲಿಸಿಕೊಳ್ಳುವ ಮನಸ್ಸಾಗಲೀ ಆಗಲೇ ಇಲ್ಲಾ.. ಯಾಕೋ 'ಮದುವೆ' ಶಬ್ದ ಕೇಳಿದಾಗಿನಿಂದ ನನ್ನ ನೆನಪುಗಳು ನನ್ನ ಕಣ್ಣ ಮುಂದೆ ಬರಲು ಶುರು ಆಯ್ತು... ಅದೂ ಇಂದು ಎಂದಿಗಿಂತ ತಾಜಾವಾಗಿ...
ನನ್ನ ಮದುವೆ...!! ಸುಮಾರು ಎಪ್ಪತ್ತು ವರ್ಷಾನೇ ಕಳೆದು ಹೋಗಿದೆಯೇನೋ...ಊರಿಗೆಲ್ಲ ಸುಂದರಿ ನಾನು.. ನನ್ನ ಕನ್ನಡಿ ಅಂತೂ ಅದನ್ನ ಹೇಳ್ತಾನೇ ಇರ್ತಿತ್ತು...
ನನ್ನಪ್ಪ ಸಹ ‘ನನ್ನ ಮಗಳು ಚಿನ್ನದ ಗೊಂಬೆ’ ಹಾಗಿದಾಳೆ ಅಂತ ಯಾವಾಗ್ಲೂ ಹೇಳ್ತಾನೇ ಇರ್ತಿದ್ರು.. ಅವರು ಹೇಳೋದು ಕೇಳಿ ಎನು ಮಾಡೋದು..?
ಹೆತ್ತವರಿಗೆ ಹೆಗ್ಗಣನೂ ಮುದ್ದಲ್ಲವೇ..? ಅನಿಸುತ್ತಿತ್ತು...
ಆದರೆ ಜೊತೆಗೆ ನನ್ನ ಗೆಳತಿಯರೂ ಅದನ್ನ ಯಾವಾಗಲೂ ನಿಜ ಅಂತ ಅನ್ನಿಸೋ ಮಾತುಗಳನ್ನ ಆಡ್ತಾನೇ ಇರ್ತಿದ್ರು.. ಆಗ ನನಗೆ ನನ್ನ ಕನ್ನಡಿಯ ಮಾತಿನಲ್ಲಿ ನಿಜ ಇದೆ ಅಂತ ಅನ್ನಿಸ್ತಾ ಇತ್ತು.. ಖುಷಿನೂ ಆಗ್ತಿತ್ತು.
ಹದಿಮೂರು ವರ್ಷ ಆಯ್ತು ನಿನ್ನ ಮಗಳಿಗೆ ಇನ್ನು ಯಾವಾಗ ಮದುವೆ ಮಾಡ್ತಿಯಾ..ಮದುವೆ ಮಾಡೋ ಯೋಚನೆ ಇದ್ಯೋ ಹೀಗೆ ಮಗಳನ್ನ ಕೂರಿಸಿ ಹೊಗಳ್ತಾನೇ ಇರ್ತಿಯೋ ಅಂತ ಊರವರೆಲ್ಲ ಅಪ್ಪನ ಹಂಗಿಸೋಕೆ ಶುರು ಮಾಡಿದ್ರು.
ಅಪ್ಪ ಸಿಟ್ಟಲ್ಲಿ ಮನೆಗೆ ಬಂದು 'ನೋಡ್ತಾ ಇರ್ಲಿ ಈ ಊರವರೆಲ್ಲ... ರಾಜಕುಮಾರ ಬಿಳಿ ಕುದರೆ ಮೇಲೆ ಬಂದು ಮದುವೆ ಮಾಡಿಕೊಂಡು ಹೋಗ್ತಾನೆ ನನ್ನ ಮುದ್ದಿನ ಮಗಳನ್ನ' ಅಂತ ಕೂಗಾಡಿದ್ದು.. ನನಗಿನ್ನೂ ಎಷ್ಟು ಚೆನ್ನಾಗಿ ನೆನಪಿದೆ ಅಂತ ಆಶ್ಚರ್ಯ ಆಯ್ತು..
ಪ್ರತಿದಿನ ಮೊಮ್ಮಗಳ ನೆನಪು ಅವಳ ಜೊತೆ ಕಳೆದ ದಿನಗಳು ಕಣ್ಣ ಮುಂದೆ ಬರ್ತಿದ್ದ್ವು.
ಎಂದಿಗೂ ಇಷ್ಟು ಹಳೆಯ.. ನನ್ನ ಮದುವೆಯ ನೆನಪುಗಳು.. ಇಷ್ಟು ಸ್ಪಷ್ಟವಾಗಿ ಬಂದಿದ್ದೇ ಇಲ್ಲಾ.. ಇವತ್ತು ಯಾಕೋ ಆ ನೆನಪುಗಳೆಲ್ಲ ನಿನ್ನೆ ಮೊನ್ನೆ ನೆಡದ ಹಾಗೆ ಕಣ್ಣ ಮುಂದೆ ಬರ್ತಾ ಇವೆ.
ನನಗೆ 'ಹಳೇ ನೆನಪುಗಳನ್ನ ನೆನಪಿಸಿಕೊಳ್ಳೋದು.. ಮನಸ್ಸಿನ ಜೊತೆಯಲ್ಲೇ ಮಾತಾಡುವುದು' ಇವೆರಡನ್ನು ಬಿಟ್ಟು ಬೇರೆ ಏನೂ ಮಾಡಲು ಸಾಧ್ಯ... ಮೊಮ್ಮಗಳನ್ನ ನೆನಪಿಸಿಕೊಳ್ಳೋದು ನನಗೆ ತುಂಬಾ ಇಷ್ಟ.. ಆದರೆ ಇಷ್ಟು ಹಳೆಯ ನೆನಪುಗಳು ನನಗೆ ಬೇಡ... ಅಂದುಕೊಳ್ಳುತ್ತ ಮಲಗುವ ಪ್ರಯತ್ನ ಮಾಡಿದರೆ .. ಮತ್ತದೇ ನನ್ನ ಮತ್ತು ನಿದ್ರಾದೇವಿಯ ನಡುವಿನ ಜಗಳ...
ಮತ್ತದೇ ಬೇಡವೆಂದರೂ ಕೇಳದೇ ಒತ್ತರಿಸುವ ನೆನಪುಗಳ ರಾಜ್ಯಭಾರ...
ಭರ್ತಿ ಎರಡು ವರ್ಷ ನನ್ನ ಜಾತಕ ಹಿಡಿದು ಊರು ಊರು ತಿರುಗಿದ್ದ ನನ್ನಪ್ಪ..ಆ ಸಮಯದಲ್ಲಿ ಊರವರೆಲ್ಲ ನನ್ನಪ್ಪನನ್ನ ನೋಡಿ ಎಷ್ಟು ಹೀಯಾಳಿಸುತ್ತಿದ್ದರು ಎನ್ನುವುದು ನಮಗೆಲ್ಲ ತಿಳಿದೇ ಇತ್ತು.. ಆದ್ರೂ ಅಪ್ಪ ತನ್ನ ಪ್ರಯತ್ನ ಬಿಡ್ತಾ ಇರ್ಲಿಲ್ಲ.. ನನಗೇ ಕೆಲವೊಮ್ಮೆ ಅನ್ನಿಸ್ತಾ ಇತ್ತು ಅಪ್ಪ ಯಾಕೆ ಅಷ್ಟು ಒಳ್ಳೆಯ ಹುಡುಗನೇ ಬೇಕು ಅಂತ ಒದ್ದಾಡ್ತಾ ಇದಾನೆ ಏನೂ ಕುಂದೇ ಇಲ್ಲದ ಹುಡುಗ ಎಲ್ಲಿ ಇರ್ತಾನೆ ಈ ಕಾಲದಲ್ಲಿ ... ನನ್ನ ಗೆಳತಿಯರಿಗೆಲ್ಲ ಮದುವೆ ಆಗಿ ಹೋಗಿ ವರ್ಷಗಳೇ ಕಳೆಯುತ್ತಾ ಇದೆ ಅಂತಾ..
.
ಆದ್ರೂ ಅಪ್ಪ ತನ್ನ ಮಗಳಿಗೆ ರಾಜಕುಮಾರನ ಹುಡ್ಕೋ ಪ್ರಯತ್ನ ಬಿಟ್ಟಿರಲಿಲ್ಲ...
ಕೊನೆಗೂ ಅಪ್ಪನ ಪ್ರಯತ್ನಕ್ಕೊ ನನ್ನ ಅದ್ರಷ್ಟಕ್ಕೋ ಅಪ್ಪನ ಕನಸಿನ ರಾಜಕುಮಾರ ಸಿಕ್ಕೇಬಿಟ್ಟ...!! ಮನೆಯಲ್ಲೆಲ್ಲ ಸಂಭ್ರಮವೋ ಸಂಭ್ರಮ..ಎಲ್ಲರ ಬಾಯಲ್ಲೂ 'ಅಪ್ಪನ ರಾಜಕುಮಾರ'ನ ಗುಣಗಾನ... ಆಗಿನ ಕಾಲದಲ್ಲಿ ತುಂಬಾ ಎನಿಸುವ sslc ಕಲಿತಿದ್ದನಂತೆ ಅವನು..ತುಂಬಾ ಜಮೀನಿರುವ ಅವರು ಹತ್ತೂರಿಗೆ ಶ್ರೀಮಂತರಂತೆ.. ಊರವರೆಲ್ಲ ಪ್ರೀತಿಸುವಷ್ಟು ಒಳ್ಳೆಯವನಂತೆ...
ಛೇ.. ಇವತ್ತು ಯಾಕೆ ಇಷ್ಟೊಂದು ಕಾಟ ಕೊಡ್ತಾ ಇವೆ ಈ ನೆನಪುಗಳು.. ನನ್ನ ಸ್ಥಿತಿ ನೋಡಿ ಗೇಲಿ ಮಾಡಲಿರಬೇಕು..ನಾನು ಹೇಗಾದರೂ ನಿದ್ರಾದೇವಿಯನ್ನು ಸೋಲಿಸಲೇ ಬೇಕು..ಗೆದ್ದಾದರು ಸರಿ.. ಒಲಿಸಿಕೊಂಡಾದರೂ ಸರಿ.. ನೆನಪುಗಳ ಕಾಟ ತಪ್ಪಿಸಿಕೊಂಡರೆ ಸಾಕು ಅನ್ಕೊಂಡು ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡೆ ನಾನು..
ದೂರದ ಬೆಂಗಳೂರಿನಲ್ಲಿ ದೊಡ್ಡ ಶಾಲೆಯಲ್ಲಿ ಓದುತ್ತಿರುವ ಒಬ್ಬಳೇ ಮೊಮ್ಮಗಳು ಮುಚ್ಚಿದ ಕಣ್ಣ ಹಿಂದೆ ಕಾಣಿಸಿದಾಗ ನೆನಪುಗಳಿಗೆ ಬೇಡ ಹೇಳಲು ಹೇಗೆ ಸಾಧ್ಯ ನನಗೆ.. ತನ್ನ ಪಡಿಯಚ್ಚು ನನ್ನ ಮೊಮ್ಮಗಳು ಅನ್ನುವದು ಅವಳು ಹುಟ್ಟಿದ ತಕ್ಷಣ ಆ ಎಳೆ ಮಗುವನ್ನು ನೋಡೇ ನನಗೆ ಗೊತ್ತಾಗಿತ್ತು.. ಒಬ್ಬನೇ ಮಗ ಇರುವ ನಾನು ನಮ್ಮ ಮನೆಗೆ ಮೊಮ್ಮಗಳು ಹುಟ್ಟಿ ಬಂದಾಗ ಅದೆಷ್ಟು ಸಂತೋಷ ಪಟ್ಟಿದ್ದೆ..
ಅವಳು ಸ್ವಲ್ಪ ದೊಡ್ಡವಳಾದಾಗ..ಪ್ರತಿದಿನ ಮೊಗ್ಗಿನ ಜಡೆ ಹಾಕಿ.. ಬೇರೆ ಬೇರೆ ಬಣ್ಣದ ಅಂಗಿ ಹಾಕಿ,, ಅವಳನ್ನ ನೋಡುವುದೇ ಹಬ್ಬವಾಗಿತ್ತು ...ಬೆಳ್ಳಿಯ ಗೆಜ್ಜೆ ಅವಳ ಪುಟ್ಟ ಕಾಲುಗಳಿಗೆ ತೊಡಿಸಿ ಅವಳು ಓಡಾಡುತ್ತಿದ್ದರೆ ಅದೇ ಸಂಭ್ರಮವಾಗಿತ್ತು ನನಗೆ ..ಅವಳಿಗೂ ನಾನು ಅಂದರೆ ಪ್ರಾಣವಾಗಿತ್ತು..ಈಗ ಪಾಪ ಓದು, ಓದು ಅಂತಾ ಸಮಯವೇ ಇಲ್ಲಾ ಅವಳಿಗೆ.. ಅವಳ 'ಮದುವೆ' ನಾನು ಕಣ್ಣ ತುಂಬಾ ನೋಡ್ಬೇಕು..!!
ಇದೊಂದು ಕೊನೆಯ ಆಸೆಗೆ ನನಗೆ ಬದುಕುವ ಆಸೆ..
ನನ್ನ ಒಳ ಮನಸ್ಸು’ಆಸೆಬುರುಕಿ ನೀನು ಕಣ್ಣು, ಕಿವಿ ಎರಡೇ ಕೆಲಸ ಮಾಡುವ ನಿನಗೆ ಯಾಕೆ ಇನ್ನೂ ಬದುಕುವ ಆಸೆ..?? ಬದುಕಿ ಎನು ಮಾಡ್ತೀಯ..??' ಅಂದ ಹಾಗಾಯಿತು..
ನೋಡಲು ನನ್ನ ಹಾಗೇ ಕಾಣುವ ನನ್ನ ಮೊಮ್ಮಗಳನ್ನ ವಧುವಿನ ಅಲಂಕಾರ ದಲ್ಲಿ ನಾನು ನೋಡಲೇ ಬೇಕು ಅಂತಾ ಒಳ ಮನಸ್ಸಿನ ಜೊತೆ ಜಗಳವಾಡುವ ಮನಸ್ಸಾದರು ಸುಮ್ಮನಾದೆ...
ಹಂಗಿಸುವ ಒಳಮನಸ್ಸನ್ನು ದೂರ ಸರಿಸಿ ನೆನಪುಗಳನ್ನೇ ಎಳೆದುಕೊಂಡೆ..ಆ ಸಮಯಕ್ಕೆ ನೆನಪುಗಳೇ ವಾಸಿ ಅನ್ನಿಸಿತು..
ನನ್ನ ಮದುವೆಯ ದಿನ ಬಂದೇ ಬಿಟ್ಟಿತು.. ತುಂಬಾ ಚಂದನೆಯ ಕಡುನೀಲಿ ಬಣ್ಣದ ಸೀರೆ ಯಲ್ಲಿ ನನ್ನ ಮೈ ಬಣ್ಣ ದಂತದಬಣ್ಣದ ಹಾಗೆ ಎದ್ದು ಕಾಣುತ್ತಿತ್ತು.. ಸುಂದರವಾದ ನನ್ನ ಕಣ್ಣಿಗೆ ಹಾಕಿದ ಕಣ್ಣುಗಪ್ಪು ತನ್ನ ಕೆಲಸವನ್ನು ತುಂಬಾ ಅಚ್ಚು ಕಟ್ಟಾಗೇ ನಿರ್ವಹಿಸಿತ್ತು...ನನ್ನ ಉದ್ದನೆಯ, ಒತ್ತನೆಯ ಕೂದಲನ್ನ ವಿಶೇಷವಾಗಿ ಹೆಣೆದಿದ್ದಳು ನನ್ನ ಗೆಳತಿ.. ಮೈ ತುಂಬು ವಷ್ಟು ಬಂಗಾರ ಮಾಡಿಸಿದ್ದ ನನ್ನಪ್ಪ..ಅದನ್ನೆಲ್ಲ ಧರಿಸಿ ತುಂಬಾ ಮನಸ್ಸಿಟ್ಟು ಅಲಂಕರಿಸಿ ಕೊಂಡಿದ್ದೆ ನಾನು..!
ವಧುವಿನ ಕೋಣೆಗೆ ಬಂದು ನೋಡಿದವರೆಲ್ಲ ಎಷ್ಟು ಹೊಗಳಿದ್ದರು ಅಂದು ನನ್ನಂದವನ್ನ.!
ನನ್ನನ್ನೇ ನೋಡುತ್ತಾ ಕನ್ನಡಿಯ ಮುಂದೆ ನಾನು ನನ್ನ ಮುಖ ಸವರಿಕೊಳ್ಳುತ್ತಿದ್ದೆ..
ಕೈಗೆಲ್ಲಾ ಏನೋ ಸುಕ್ಕು ಸುಕ್ಕು ಮುಟ್ಟಿದಂತಾಯಿತು.. ಅದು ನನ್ನ ಸುಕ್ಕುಗಟ್ಟಿದ ಮುಖ ಎಂದು ಅರ್ಥವಾಗಲು ನನಗೆ ಸ್ವಲ್ಪ ಸಮಯ ಬೇಕಾಯಿತು..
ಅರ್ಥವಾದಾಗ ನೆನಪಿನಲ್ಲಿ 'ಮದುವೆಯ ವಧು ಪದ್ಮಳಾಗಿದ್ದ ನಾನು ಹಸೆಯಾಳಾಗಿರುವ ಪದ್ಮಮ್ಮನಾಗಿ ಬಿಟ್ಟಿದ್ದೆ.. ಅಂದರೆ ದೇಹಕ್ಕಾಗುವ ವಯಸ್ಸು ಮನಸ್ಸಿಗೆ ಆಗುವುದೇ ಇಲ್ಲವೇ ಅಂತಾ ನನಗೆ ಆಶ್ಚರ್ಯವಾಯಿತು... ಪಾಪ ಮುದುಕಿ ನಾನು.. ನನಗೆ ಗೊಂದಲವೂ ಆಯಿತು..
ವಧುವಿನಂತೆ ಅಲಂಕರಿಸಿಕೊಂಡ ಸಂಭ್ರಮ,
ನನ್ನ ಪತಿಯನ್ನು ಮೊದಲ ಸಲ ನೋಡುವ ಆತುರ... ಹುಟ್ಟಿ ಬೆಳೆದ ಮನೆಯನ್ನು ಬಿಟ್ಟು ಬೇರೆಲ್ಲೋ ಹೋಗಬೇಕಲ್ಲ ಅನ್ನುವ ಬೇಸರ...
ಆ ದಿನದ ನನ್ನ ಮನಸ್ಸು ಒಮ್ಮೆ ಹರ್ಷ ಪಡುತ್ತಾ, ಒಮ್ಮೆ ಅಳುತ್ತ ಇರುವಾಗಲೇ..
ದಿಬ್ಬಣ ಬಂದ ಸದ್ದು..ಒಮ್ಮೆ ಹೃದಯ ಸ್ತಬ್ಧವಾಯಿತೇನೋ ಅನ್ನಿಸಿತ್ತಲ್ಲ ಆ ಕ್ಷಣ.. ಅಂದುಕೊಳ್ಳುತ್ತ ಗಟ್ಟಿ ಮುಚ್ಚಿರುವ ತನ್ನ ಕಣ್ಣನ್ನು ತೆರೆದು.....
ಕೆಲ ಕಾಲ ತಿರುಗುತ್ತಿರುವ ಫ್ಯಾನ್ ನ್ನೇ ದಿಟ್ಟಿಸಿ ನೋಡಿ... ಮತ್ತೆ ನೆನಪಿನ ಚಕ್ರವನ್ನು ತಿರುಗಿಸಿದೆ..
ಪದ್ಮಾ... ದಿಬ್ಬಣ ಬಂತು...ರಾಜಕುಮಾರ ಬಂದಾ ಕೂಗುತ್ತಾ ಬಂದ ನನ್ನ ಗೆಳತಿ ನನ್ನನ್ನ ಎಳೆದು ನನ್ನ ಕೋಣೆಯ ಕಿಟಕಿಯಲ್ಲಿ ನಿಲ್ಲಿಸಿದಳು.. ಮುಖವೆತ್ತಿ, ಕಣ್ಣೆತ್ತಿ ಅವರ ನೋಡುವುದರಲ್ಲೇ ನಾನು ಬೆವರಿ, ನಾಚಿ ನೀರಾಗಿದ್ದೆ...
ಅಬ್ಬಾ ಅಪ್ಪನ ರಾಜಕುಮಾರ... ಅಲ್ಲ ನನ್ನ ರಾಜಕುಮಾರ ಅವನನ್ನು ನೋಡಿದ ಮರುಕ್ಷಣವೇ, 'ಅಪ್ಪನ ರಾಜಕುಮಾರ'.. 'ನನ್ನ ರಾಜಕುಮಾರ' ನಾಗಿದ್ದನಲ್ಲ.. ನೆನಪಿಸಿಕೊಳ್ಳುತ್ತಾ ನಾಚಿದ ಹಾಸಿಗೆಯ ಮೇಲೆ ಮಲಗಿದ್ದ ನನಗೆ 'ಇದು ನಿಜವಲ್ಲ ಬರೀ ನೆನಪು' ಅನ್ನುವುದು ಅರಿವಾದಾಗ.. 'ಅಯ್ಯೋ ನಾಚುತ್ತಿರುವ ನನ್ನನ್ನ ನೋಡಲು ಇಲ್ಲಿ ಯಾರಿಲ್ಲ ಸಧ್ಯ' ಅಂದುಕೊಂಡೆ...
ಅಬ್ಬಾ..! ಹೇಗಿದ್ದ ಅವನು ಸುರಸುಂದರಾಂಗ..
ಎತ್ತರದ ನಿಲುವು, ಆ ಠೀವಿ, ಕಿರುಮೀಸೆ, ಕಿರುಮೀಸೆಯಡಿಯಲ್ಲಿ ಅವನ ಕಿರುನಗೆ ನೋಡಿ ಮೈ ಮರೆಯುತ್ತಿದ್ದ ನನ್ನನ್ನು ತಿವಿದು ಎಚ್ಚರಿಸಿದ್ದು ನನ್ನ ಗೆಳತಿ...
ಎಲ್ಲಿಂದ ಹುಡುಕಿದನೋ ನನ್ನಪ್ಪ, ಎಷ್ಟು ಕಷ್ಟ ಪಟ್ಟನೋ..!! ನಿಜವಾಗ್ಲೂ ಎಲ್ಲಾ ರೀತಿಯಲ್ಲೂ ರಾಜಕುಮಾರನನ್ನೇ ನನಗಾಗಿ ಹುಡುಕಿದ್ದ..!!
ಎಷ್ಟು ಪ್ರೀತಿಸುತ್ತಿದ್ದರು ಅವರು ನನ್ನನ್ನ ... ನನ್ನಪ್ಪನಷ್ಟೇ ಕಾಳಜಿ ಅವರಿಗೆ ನಾನು ಅಂದರೆ..ನಾನು ಬೇರೆ ಯಾವ್ದೋ ಮನೆಗೆ ಬಂದ ಹಾಗೇ ಒಂದು ಕ್ಷಣಕ್ಕೂ ನನಗನಿಸಲು ಅವರು ಬಿಟ್ಟಿರಲಿಲ್ಲ..
'ಇಡೀ ದಿನ ಪದ್ಮ.. ಪದ್ಮ..ಅಂತಾ ಹೆಂಡತಿ ಹಿಂದೇ ತಿರಗ್ತಿರ್ತಾನೆ' ಅಂತಾ ಮನೆಯವರೆಲ್ಲ ಗೇಲಿ ಮಾಡಿದ್ರೂ ಇಡೀ ದಿನ ನನ್ನ ಹಿಂದೆ ಮುಂದೆ ತಿರುಗುತ್ತಾ ನನ್ನ ಉದ್ದನೆಯ, ದಪ್ಪ ಜಡೆ ಹೆಣೆದು, ಹೂ ಮುಡಿಸುತ್ತ, ನನ್ನ ಜೊತೆ ಜೊತೆಗೆ ಇರ್ತಿದ್ದರು..'ನನ್ನ ಪ್ರೀತಿಯ ಅಪ್ಪ' ಅಂದರೆ ತುಂಬಾ ಗೌರವವಿತ್ತು ಅವರಿಗೆ.. 'ಹುಡುಗಿಯರನ್ನು ಶಾಲೆಗೇ ಕಳಿಸದ ಜನರ ನಡುವೆ ನಿನಗೆ 7ನೇ ತರಗತಿಯ ತನಕ ಕಲಿಸಿದ ನಿನ್ನಪ್ಪ.. ನನ್ನ ಮಾವ ಎನ್ನುವುದು ನನಗೆ ತುಂಬಾ ಹೆಮ್ಮೆ' ಅಂತಾ ಹೇಳುತ್ತಲೇ ಇರಿತ್ತಿದ್ದರು.. ನನ್ನ ಪ್ರೀತಿಯ ಅಪ್ಪನ್ನ ಅವರು ಹೊಗಳ್ತಾ ಇದ್ದರೆ 'ಇಬ್ಬರೂ ನನ್ನವರು' ನಾನು ಎಷ್ಟು ಅದ್ರಷ್ಟವಂತೆ ಎಂದು ನನಗೆ ಸೊಕ್ಕೇ ಬಂದ ಹಾಗೆ ಆಗ್ತಾ ಇತ್ತು..
ಇಬ್ಬರ ಮೇಲೂ ಪ್ರೀತಿ, ಗೌರವ ಹೆಚ್ಚು ಹೆಚ್ಚಾಗುತಾ ಇತ್ತು...
ಅವರು ಕೆಲಸ ಕಾರ್ಯ ಅಂತಾ ಮನೆಯಿಂದ ಹೊರಗೆ ಹೋದರೆ ಮಾತ್ರ ನನಗೆ ಹೊತ್ತೇ ಹೋಗ್ತಾ ಇರ್ಲಿಲ್ಲ..
ಮದುವೆ ಆಗಿ ಎರಡು ವರ್ಷದ ನಂತರ ಹುಟ್ಟಿದ ನಮ್ಮ ಒಬ್ಬನೇ ಮಗ ಶ್ರೀಹರಿ..ಮುಂದಿನ ನೆನಪುಗಳು ಬೇಡವೇ ಬೇಡ ಅನ್ನಿಸಿದಾಗ ನನಗೆ ನಿದ್ರಾದೇವಿಯನ್ನ ಕಾಡಿ ಬೇಡಿ ಯಾದರೂ ಒಲಿಸಿಕೊಳ್ಳುವ ಮನಸ್ಸಾಯಿತು... ಆದರೆ ನೆನಪುಗಳಾಗಲಿ, ನಿದ್ರಾದೇವಿಯಾಗಲಿ ನನ್ನ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲಾ...
ಒಂದು ದಿನ ಕೆಲಸದ ಕೆಂಚ ಓಡಿ ಬಂದು ಅಮ್ಮಾವರೇ..ಯಜಮಾನ್ರಿಗೆ ಹಾವು ಕಚ್ಚಿದೆ ಅಂತಾ ಕೂಗಿ ಹೇಳಿದ್ದು ಮತ್ತೆ ಈಗ ಕೇಳಿಸಿ ಬಿಡಬಹುದು ಅನ್ನುವ ಹಾಗೆ ಕಿವಿಯನ್ನು ಗಟ್ಟಿಯಾಗಿ ಮುಚ್ಚಿಕೊಂಡೆ..
ಕಣ್ಣಿಂದ ಹರಿದ ನೀರು ದಿಂಬನ್ನೆಲ್ಲ ನೆನೆಸಿತ್ತು..
ಅಷ್ಟು ಸಿಹಿಯಾದ ನನ್ನ ಜೀವನ ವಿಷದಷ್ಟು ಕಹಿಯಾಗಲು ಯಾವ ಮನುಷ್ಯರ ಕೆಟ್ಟ ದ್ರಷ್ಟಿ ಕಾರಣವೋ, ಯಾವ ಗ್ರಹಗಳ ಕ್ರೂರ ದ್ರಷ್ಟಿ ಕಾರಣವೋ..
ಸತ್ತ ಗಂಡನ ಮುಖವನ್ನು ಆವತ್ತೇ ನೋಡಲು ತುಂಬಾ ಕಷ್ಟದಲ್ಲಿ ಒಪ್ಪಿಕೊಂಡ ನನಗೆ ಈ ನೆನಪುಗಳು ಆ ದಿನವನ್ನ ಮತ್ತೆ ಕಣ್ಣ ಮುಂದೆ ತಂದು ನನ್ನನ್ನು ಹೆದರಿಸಲು ಬಿಡಬಾರದು ಎಂದು ಘಟ್ಟಿ ನಿರ್ಧಾರ ಮಾಡಿದಂತಿತ್ತು ನಾನು...
ನನ್ನ ಮೊಮ್ಮಗಳ ಜೀವನ ತುಂಬಾ ಚೆನ್ನಾಗಿಯೇ ಇರುತ್ತದೆ.. ನನ್ನ ಆಶೀರ್ವಾದ ಅವಳ ಜೊತೆಗೆ ಯಾವಾಗಲೂ ಇರುತ್ತದೆ.. ಇಷ್ಟು ದಿನ ಯಾಕೆ ನನಗೆ ಹೀಗೆ ಅನಿಸಲೇ ಇಲ್ಲಾ... ನನ್ನದೆಲ್ಲಾ ಹುಚ್ಚು ಆಸೆ.. ಯಾವಾಗಲೂ 'ಒಳ ಮನಸ್ಸು' ನನಗೆ ಹೇಳುತ್ತಾ ಇರುತ್ತಿದ್ದ ಮಾತೇ ಸರಿ ಅನಿಸಿದಾಗ ಮನಸ್ಸು ನಿರಾಳ ಅನಿಸಿತು... ಒಳ ಮನಸ್ಸಿನ ಜೊತೆ ಮನಸ್ಸು ರಾಜಿಯಾದಂತೆನಿಸಿತು..
.
ನಿದ್ರಾದೇವಿಯ ಜೊತೆಗಿನ ಪ್ರತಿ ದಿನದ ಜಗಳ ನಿಲ್ಲಿಸುವ ಮನಸ್ಸಾಯಿತು.. ನೆನಪುಗಳನ್ನ ಸೋಲಿಸಲು ಶಕ್ತಿ ಬಂದಂತಾಯಿತು... ಗಂಟಲು ಗದ್ಗದವಾಯಿತು.. ಗಂಟಲಿನಲ್ಲಿ ಗೊರಗೊರ ಸದ್ದು ಆದ ಹಾಗಾಯಿತು ನನಗೆ ಅಷ್ಟೇ...
ನಂತರ ಯಾವತ್ತೂ ನಿದ್ರಾದೇವಿಯಾಗಲಿ..ಕೆಟ್ಟ ನೆನಪಾಗಲಿ..ಒಳ್ಳೆಯ ನೆನಪಾಗಲಿ..ನನ್ನ ಮನಸ್ಸಾಗಲಿ.. ಒಳಮನಸ್ಸಾಗಲಿ ನನ್ನನ್ನು ಕಾಡಲೇ ಇಲ್ಲಾ.
..
ನಿದ್ರಾದೇವಿ, ನೆನಪುಗಳು, ಮನಸ್ಸು, ಒಳಮನಸ್ಸು, ಮಗ, ಸೊಸೆ ಯಾರೂ ನನ್ನ ಮಾತು ಕೇಳಲಿ ಅಂತಾ ಮತ್ತೆ ಯಾವತ್ತೂ ನನಗೆ ಅನ್ನಿಸಲೇ ಇಲ್ಲಾ..!
ಆದರೆ ನನ್ನ ನೆನಪುಗಳು ಮಾತ್ರ ‘ ನೀನು ಸೋತೆ: ನಾನು ಗೆದ್ದೆ’ ಎಂದು ಬೀಗುತ್ತ ದೂರ ದೂರ ಸರಿದು ಹೋಯಿತು.
ನಾನು ಕುಸಿದೆ.!
=000=
- ಕವಿತಾ ಗಿರೀಶ, ಶಾರ್ಜಾ
Comments