‘ಇದ್ನೋಡಿ, ಪ್ಲಾಸ್ಟಿಕ್ ಕೊಟ್ಟೆ ಸಿಂಬೆ ಸಿಂಬೆ ಆಗಿ ಕೂತದೆ. ಇಲ್ನೋಡ್ರೀ ಪರಮೇಸ್ರ ಹೆಗಡ್ರೆ, ಸಣ್ ಸಣ್ ಮೊಳೆ ಎಷ್ಟದೆ ಹೇಳಿ. ಪ್ಲಾಸ್ಟಿಕ್ಕು, ಮೊಳೆ ಗುಡಾಣವೇ ಆಗಿಬಿಟ್ಟದ್ಯಲ್ರೀ ಮಾರಾಯ್ರ ಇದರ ಹೊಟ್ಟೆ. ನೋಡಿ, ಈ ಮೊಳೆ ಕರಳೀಗೆ ಚುಚ್ಚಿ ಕರಳೇ ತೂತು ಬಿದ್ಹೋಗದೆ. ಮತ್ತೊಂದ್ ಬದೀಗೆ ಪ್ಲಾಸ್ಟಿಕ್ಕು ಸಿಂಬೆಯಾಗಿ ಸಿಕ್ಕಂಡು ಗೊಬ್ಬರಗುಂಡಿ ಆದಾಗ ಆಕಳು ಬದುಕೂದಾದ್ರೂ ಹ್ಯಾಂಗೆ?’ ಎಂದು ಪಶುವೈದ್ಯ ಡಾ. ರವಿಯವರು ಕೋಪಮಿಶ್ರಿತ ಕನಿಕರದಿಂದ ಹೇಳುತ್ತಿದ್ದರೆ ಪರಮೇಶ್ವರ ಹೆಗಡೆಯವರು ಅವನತಮುಖರಾಗಿ ನಿಲ್ಲದೇ ಇನ್ನೇನೂ ಮಾಡುವಂತಿರಲಿಲ್ಲ.
ಅವರ ಮತ್ತು ಅವರ ಹೆಂಡತಿ ಅಚ್ಚಕ್ಕನ ಪ್ರೀತಿಯ ಗಂಗೆ ಮಣಕ ಮೊನ್ ಮೊನ್ನೆವರೆಗೂ ತಪ್ಲೆ ತುಂಬ ಹಾಲು ಕೊಡ್ತಿತ್ತು. ನಿನ್ನೆ ಬೆಳಗಿನಿಂದ ಹುಲ್ಲು, ದಾಣಿ ತಿನ್ನೂದು, ಅಕ್ಕಚ್ಚು, ನೀರು ಕುಡಿಯೂದನ್ನು ನಿಲ್ಲಿಸಿ ಉಪವಾಸ ಸತ್ಯಾಗ್ರಹವನ್ನು ಹೂಡಿತ್ತು. ಅದರ ಆ ಚಾರಿತ್ರಿಕ ನಿರ್ಧಾರವು ಹೆಗಡೇರಿಗಿಂತಲೂ ಅಚ್ಚಕ್ಕಂಗೆ ರಾಶಿ ಬೇಜಾರಾಗ್ವಾಂಗೆ ಮಾಡಿತ್ತು. ಈ ಗಂಗೆ ಮಣಕ ಹೇಳೂದು ಯಾವ್ದೋ ಹಳೇಕಾಲ್ದಿಂದ ಇದ್ದ ಬಡಿ ಆಕಳ ಕರ. ಒನ್ನಮನಿ ಹೊಟ್ಟೆ ಜೊಳಕನ್ಹಾಂಗಿದ್ರೂ ಬಡಿ ಆಕಳು ರಾಶಿ ವರ್ಷ ಇವ್ರ ಮನೆ ಕೊಟ್ಗೆಲ್ಲಿ ಮಾಲಕ್ಷ್ಮೀ ಇದ್ಹಾಂಗಿತ್ತು. ಈಗ ಬಹುತೇಕ ಇವ್ರ ಮನೆ ಕೊಟ್ಗೇಲಿರೂ ಕರಮರಿ ಎಲ್ಲಾವ ಬಡಿ ಆಕಳ ಸಂತಾನವೇಯ. ಅಂತಪ್ಪ ವಯಸ್ಸಾದ ಬಡಿ ಆಕಳು ಈ ಗಂಗೆ ಮಣಕನ್ನ ಹೆತ್ತು ಕಣ್ಮುಚ್ಚಿಕೊಂಡಿತ್ತು. ಅಚ್ಚಕ್ಕನೇ ಆ ತಾಯಿ ಇಲ್ದ ತಬ್ಬಲೀಗೆ ಮದ್ಲ ಒಂದೆರಡ ದಿವ್ಸ ಬೂದ ಮಣಕನ ಹಾಲನ್ನು ಅಂಗೋಸ್ತ್ರ ಪಂಜೀಲಿ ಅದ್ದಿ ಕೊಡ್ತಿತ್ತು. ಚುರ್ಕಾಗಿದ್ದ ಕರುವೂ ‘ಪಚಗುಟ್ಟಕಂಡು’ ಪಂಜಿಯನ್ನು ಚೀಪುತ್ತಲೇ ಹೊಟ್ಟೆ ತುಂಬಕೊಳ್ಳುತ್ತಿತ್ತು. ಕಡೀಗೆಲ್ಲ ಗೊಟ್ಟದಲ್ಲಿ ಹಾಲು ಹೊಯ್ತಿತ್ತು; ಕರುವೂ ಯಾವ ತಕರಾರೂ ಇಲ್ದೆ ಕುಡಿಯೂದು ರೂಢಿ ಮಾಡ್ಕಂಡ್ತು. ಅದ್ರ ಚುರ್ಕತನ ಕಂಡ್ಕಂಡೇ ಅಚ್ಚಕ್ಕ ಅದ್ಕೆ ‘ಗಂಗೆ’ ಹೇಳಿ ಹೆಸರಿಟ್ಕಂಡು ಸಾಕಿ ದೊಡ್ಡಕ್ ಮಾಡಿತ್ತು. ದಿನ ಗಳ್ದಂಗೆ ಗಂಗೆ ಮಣಕ ಅಂಬೂದು ಅಚ್ಚಕ್ಕಂಗೆ ಸ್ವಂತ ಮಗಳಾಂಗೇ ಆಗಿತ್ತು. ಅಚ್ಚಕ್ಕ, ‘ಗಂಗೇ... ಎಲ್ಲಿದ್ಯೇ ಅಪೀ... ಬಾರೆ...’ ಹೇಳಿ ಕರದ್ರೆ ಯಾ ಮೂಲೇಲಿದ್ರೂ ಓಡಿ ಬರ್ತಿತ್ತು! ಅಷ್ಟ್ ಪ್ರೀತಿ ಅದ್ಕೂವ ಅಚ್ಚಕ್ಕನ್ನ ಕಂಡ್ರೆ.
ದನಕರಗಳ ಮೇಲಿನ ಅಚ್ಚಕ್ಕನ ಪ್ರೀತಿ ಅಂಬೂದು ಬರೀ ಗಂಗೆ ಮಣಕನ ಮೇಲೊಂದೇ ಅಲ್ಲ; ಯಾ ದನಕರ ಕಂಡ್ರೂ ಮಾರಾಶಿ
ಪ್ರೀತಿ ಮಾಡಿಕೊಳ್ಳುತ್ತಾಳೆ ಅವಳು. ಅಚ್ಚಕ್ಕಂಗೆ ಮನಷ್ರು ಬೇರೆ ಅಲ್ಲ, ದನಕರ ಬೇರೆ ಅಲ್ಲ. ಮನಷ್ರ ಹತ್ರಕ್ಕೆ ಮಾತಾಡ್ದಷ್ಟೇ ಸಲೀಸಾಗಿ ಗಂಟಿಗಳ ಹತ್ರೂ ಮಾತಾಡುತ್ತಾಳೆ ಅವಳು! ಅವಳಿಗೆ ಬೆಳಗಾಗುವುದೇ ಗಂಟಿಕರಗಳ ಹತ್ರ ಮಾತಾಡೂ ಮೂಲಕ. ದಿವ್ಸಾನೂ ಬೆಳ್ಗಾಗ ಎದ್ ಕೂಡ್ಲೆ ಕೊಟ್ಗೀಗ್ ಹೋಗಿ ಸಗಣಿ ಬಾಚುವುದರಿಂದ ಅಚ್ಚಕ್ಕನ ಮನೆವಾರ್ತೆ ಕೆಲ್ಸ ಶುರು ಆಗುತ್ತದೆ. ಅದೂ ಹ್ಯಾಂಗೆ? ‘ವಸುದೇವ ಸುತಂ ದೇವಂ ಕಂಸ ಚಾಣೂರ ಮರ್ಧನಂ...’ ಹೇಳಿ ಶುರುವಾಗಿ ಭಗವದ್ಗೀತೆಯ ಒಂದೆರಡು ಅಧ್ಯಾಯವೂ ಮುಗ್ದುಹೋಗುತ್ತದೆ ಸಗಣಿ ಬಾಚುತ್ತಲೇ! ಮುಂದಿನ ಒಂದೆರಡು ಹಾಲು ಕರೆಯಬೇಕಾದರೆ ಮುಗಿಯುತ್ತದೆ; ಕೊಟ್ಗೆ ಸಂತೆ ಮುಗ್ಸಿ ಆಸ್ರಿ ಸಂತೆನೂ ಮುಗಿಯಲ್ಲೀವರೆಗೆ ಎಂಟ್ಹತ್ತು ಅಧ್ಯಾಯ ಮುಗ್ಸೇಬಿಡುತ್ತಾಳೆ! ಅವಳಿಗೆ ಭಗವದ್ಗೀತೆಯ ಹದ್ನೆಂಟೂ ಅಧ್ಯಾಯ ಬಾಯ್ಗಟ್ಟಾಗಿದೆ! ಒಂದೊಂದ್ ಬಾರಿ ಅಚ್ಚಕ್ಕನ ಭಗವದ್ಗೀತೆ ಪಠಣ ಅಂಬೂದು ಮನೆ ಜನಕ್ಕೆಲ್ಲ ಕರಕರೆ ಹಿಡಿಸುವುದೂ ಉಂಟು!. ಅವಳು ಗೀತೆ ಹೇಳುತ್ತಲೇ ದೋಸೆ ಎರೆಯುವುದು, ಚಾ ಹನಿಸುವುದು ಮಾಡಬೇಕಾದರೆ ಕೈಸನ್ನೆ ಕಣ್ಸನ್ನೆ ಮಾಡಿಕೊಂಡು ಹೇಳುವುದೊಂದೂ ಉಳಿದವರಿಗೆ ಅರ್ಥವಾಗುವುದಿಲ್ಲ. ಅವರ ಮಾತು ಅದ್ಕೆ ಅರ್ಥ ಆದ್ರೂ ಭಗವದ್ಗೀತೆ ಹೇಳುವುದನ್ನು ಬಿಡಲು ಸಾಧ್ಯವೇ ಇಲ್ಲ. ಒಂದೊಂದ್ ಬಾರಿ ಅಂತೂ ಕೈಸನ್ನೆ ಮಾಡುತ್ತಲೇ ‘ವಾಸಾಂಸಿ ಜೀರ್ಣಾನಿ...ಹೂಂ.. ಹೂಂ...’ ಹೇಳೆಲ್ಲ ಕಣ್ಬಿಟ್ಟು ಹೆದರಿಸುತ್ತಾಳೆ!
ಪರಮೇಸ್ರ ಬಾವಂಗೆ ಅವಳು ಇಡೀ ದಿವ್ಸ ಏದುಸ್ರು ಬಿಡುತ್ತ ಭಗವದ್ಗೀತೆ ಹೇಳುವುದು ಅಷ್ಟಾಗಿ ಹಿಡಿಸುವುದಿಲ್ಲ. ಅದ್ಕೆ ಬಗೇಲಿ ದಮ್ಮಿನ ಲಕ್ಷಣ ಇರೂದ್ರಿಂದ ಅಂವ ಹೆದರುತ್ತಾನೆ. ‘ನಿಂಗೆಂತ ಮಳ್ಳ್ ಗಿಳ್ಳ್ ಹಿಡದ್ದನೆ ಮಾರಾಯ್ತಿ? ಒಂದ್ ಗಳೀಗೂ ಬಾಯಿ ತೆರಪಿಲ್ದೇ ಭಗವದ್ಗೀತೆ ಹೇಳ್ಕತ್ತ ತಿರಗ್ತೆ... ಕಂಡವ್ವೆಲ್ಲ ನೆಗ್ಯಾಡ್ತ ನೋಡು...’
‘ಯಾರು ನೆಗ್ಯಾಡವ್ವು ನಿಂಗ್ಳಂತವ್ವೇ ಆಗಿಕ್ಕು... ಮಳ್ಳರು...! ನಂಗೆ ಗುರುಗಳೇ ಹೇಳಿದ್ರು- ಅಚ್ಚಕ್ಕ ನೀನು ಬಗೇಲಿ ತಪ್ ತಪ್ ಹೇಳೀರೂವ ದೇವ್ರ ತಲೆ ಮೇಲಿನ್ ಹೂಗು ತಪ್ದೆ ಇದ್ಹಾಂಗೆ ದಿವ್ಸಾ ಭಗವದ್ಗೀತೆ ಹೇಳದಕ್ಕೆ ಕೊಡದೇಯ...! ನಿನ್ನ ಭಕ್ತಿ-ಭಾವದ ಮುಂದೆ ಬಗೇಲಿ ತಪ್ಪಾದ್ರೂ ನಡೇತು. ಮಾತೊಂದ್ ಬಂದಿದ್ರೆ ನಿಮ್ಮನೆ ಗಂಟಿಕರಗನೂ ಭಗವದ್ಗೀತೆ ಹೇಳತಿದ್ವ ಏನ..?! ಹೇಳ್ಕಂಡು ಅವ್ರೇ ಹೇಳಿರಕಾರೆ ನಿಂಗ್ಳದ್ದೆಂತದು ಮತ್ತೆ...? ಹೀಂಗೆ ಮುಂದರ್ಸು ಒಂದಿವ್ಸಾನೂ ಬಿಡಡ... ಹೇಳೂ ಹೇಳಿದ್ರು!’ ಯಾರು ಏನೇ ಹೇಳಿದರೂ ತಾನು ತನ್ನ ಭಗವದ್ಗೀತೆ ಪಠಣ ಮಾತ್ರ ಬಿಡುವವಳಲ್ಲ ಎನ್ನುವ ಧಾಟೀಲಿ ಹೇಳುತ್ತಾಳೆ ಅಚ್ಚಕ್ಕ!
ಯಾರು ನೆಗಾಡಿಕೊಳ್ಳಲಿ, ಯಾರು ಅತ್ತುಕೊಳ್ಳಲಿ ಅಚ್ಚಕ್ಕನ ಸಾಕುಮಗಳಂತಹ ಗಂಗೆ ಕರುವು ಮಾತ್ರ ತನ್ನ ಸಾಕು ತಾಯಿಯ ಗೀತಾಪಠಣವನ್ನು ಎರಡೂ ಕಿಮಿಗಳನ್ನು ನಿಮಿರಿಸಿಕೊಂಡು ಕೇಳುತ್ತದೆ. ಅದು ಮುಗಿದ ಕೂಡಲೇ ಬಾಲ ನಿಮಿರಿಸಿ ‘ಚಂಗೆಂದು...’ ನೆಗೆದು ಒಂದು ಸುತ್ತುಹಾಕಿ ಓಡೋಡುತ್ತಲೇ ಬಂದು ಅಚ್ಚಕ್ಕನ ಮಕಮುಸುಡನ್ನೂ ನೋಡದೆ ಮೂಸುತ್ತ ಕೊಮಣೆ ಮಾಡುತ್ತದೆ. ಅದಕ್ಕೆ ಪ್ರತಿಯಾಗಿ ಅಚ್ಚಕ್ಕನ ಅಚ್ಚೆಯೂ ಉಕ್ಕೇರಿ ಎರಡೂ ಕೈಗಳಿಂದ ಗಂಗೆಯ ಕೊರಳನ್ನು ತಬ್ಬಿಕೊಂಡು, ‘ಮಳ್ಳೂ...’ ಎನ್ನುತ್ತ ಮುದ್ದುಗರೆಯುತ್ತಾಳೆ! ನೋಡನೋಡುತ್ತಲೇ ಗಂಗೆ ಕರುವು ಬೆಳೆದು ಮಣಕವಾಗಿ ಗಬ್ಬ ಹೋಯಿತು. ಅಚ್ಚಕ್ಕನ ಖುಷಿಗೆ ಪಾರವೇ ಇಲ್ಲ; ಆರೈಕೆ ಮಾಡಿದ್ದೇ ಮಾಡಿದ್ದು. ಚಂದ ಹೆಂಗರುವನ್ನು ಈದ ಗಂಗೆ ಮಣಕವು ಅಚ್ಚಕ್ಕನ ಭಗವದ್ಗೀತಾ ಪಠಣವನ್ನು ಕೇಳುತ್ತಲೇ ಅದರಲ್ಲಿಯೇ ತಲ್ಲೀನವಾಗಿ ಮಣಗಟ್ಲೆ ಹಾಲು ಕೊಡುತ್ತಿತ್ತೆಂಬುದು ಅಚ್ಚಕ್ಕನ ಸ್ವಯಂ ಸಿದ್ಧಾಂತ!
ಇಡೀ ಕೊಟ್ಟಿಗೆಗೆ ಮಹಾಲಕ್ಷ್ಮೀಯಂತಿದ್ದ ಗಂಗೆ ಮಣಕವು ವರ್ಷಗಂಧಿ- ವರ್ಷಕ್ಕೊಂದು ಕರುವನ್ನು ಈಯುತ್ತ ತನ್ನ ತಾಯಿ ಬಡಿ ಆಕಳಿನಂತೆಯೇ ತನ್ನ ಕರುಮರಿಗಳಿಂದ ಇಡೀ ಕೊಟ್ಟಿಗೆಯನ್ನು ತುಂಬಿತ್ತು! ಅಚ್ಚಕ್ಕನ ಮಕ್ಕಳು, ಮೊಮ್ಮಕ್ಕಳೆಲ್ಲರೂ ಗಂಗೆ ಮಣಕದ ಹಾಲು ಕುಡಿದು ಬೆಳೆದವರೇ. ಇಂತಪ್ಪ ಗಂಗೆ ಮಣಕವು ಎಲ್ಲರ ಕಣ್ಣಲ್ಲಿಯೂ ನೀರು ತರಿಸಿ ಹೊರಟೇ ಹೋಗಿದ್ದು ಮಾತ್ರ ಅಚ್ಚಕ್ಕನಿಗೆ ರಾಶಿ ಬೇಜಾರು ಉಂಟುಮಾಡಿತ್ತು. ಅದು ಹೋದ ಕೆಲವು ದಿನ ಅನ್ನಪಾನಾದಿಗಳನ್ನೂ ಬಿಟ್ಟು ಅವಳು ಪಟ್ಟ ಹಿಂಸೆಯು, ಅವಳು ಅನುಭವಿಸಿದ ಮೂಕರೋದನವು ಇಡೀ ಮನೆಯವರನ್ನು ಚಿಂತೆಗೀಡುಮಾಡಿತ್ತು. ಎಷ್ಟೋ ದಿನ ಕೊಟ್ಟಿಗೆಯ ಕಡೆ ಸುಳಿಯದೇ ತನ್ನ ಪ್ರೀತಿಯ ಭಗವದ್ಗೀತೆಯನ್ನೂ ಪಠಿಸದ ಅವಳ ಮಹಾಮೌನವು ಇಡೀ ಮನೆಮಂದಿಯನ್ನು ಆತಂಕದಲ್ಲಿ ಮುಳುಗಿಸಿತು.
ಕ್ರಮೇಣ ಚೇತರಿಸಿಕೊಂಡ ಅಚ್ಚಕ್ಕನ ವರ್ತನೆಯಲ್ಲಿ ಯಾರೂ ಊಹಿಸದ ಪರಿವರ್ತನೆಯಾಯಿತು. ಭಗವದ್ಗೀತೆಯನ್ನು ಪಠಿಸುವ ಬಾಯಲ್ಲಿ, ‘ಯಾರೂ ಸಿಕ್ಕಸಿಕ್ಕಲ್ಲಿ ಪ್ಲಾಸ್ಟಿಕ್ ಬಿಸಾಡಬೇಡಿ. ಮೊಳೆಗಿಳೆ ಎಲ್ಲಾ ಒಂದ್ ಕಡೆ ಒಟ್ಹಾಕಿ ಗುಜರಿಯವರಿಗೆ ಕೊಡಿ... ದನಕರುಗಳು ಪ್ಲಾಸ್ಟಿಕ್‍ನಂತಹ ವಸ್ತುಗಳನ್ನು ತಿನ್ನದಂತೆ ನೋಡಿಕೊಳ್ಳಿ. ಇಲ್ಲವಾದರೆ ನಮ್ಮನೆ ಗಂಗೆ ಮಣಕದಂತೆಯೇ....!’ ಎಂದು ಸಶಬ್ದವಾಗಿಯೇ ಅಳುವ ಅಚ್ಚಕ್ಕ ಪರಮೇಸ್ರ ಬಾವನಿಗೆ ಬಿಡಿಸಲಾಗದ ಒಗಟಾಗಿದ್ದಾಳೆ!
ಪ್ರಿಯ ನಾಗಪತಿ ಅತಿ ಆಪ್ತವಾದ ಗಂಗೆಯ ಬದುಕಿನ ಭಾವಗಳು ಅಚ್ಚಕ್ಕನ ಭಾವ ವಿಭಾವಗಳಲ್ಲಿ ಹಾಸು ಹೊಕ್ಕಾಗಿರುವ ಆತ್ಮೀಯವಾದ ನೆಯ್ಗೆಯನ್ನು ಓದಿ ಆನಂದಿಸುವ ಮುದ ಮಹತ್ತಾದುದು.ಅಭಿನಂದನೆ ನಾಗಪತಿ.ಒಳ್ಳೆಯ ಬರವಣಿಗೆ ಭಳಿರೆ,ಶಹಬ್ಬಾಸ್ ಡಾ.ಶ್ರೀಪಾದ ಶೆಟ್ಟಿ