top of page

ಕಳೆದುಕೊಂಡಿದ್ದು

ರೇಡಿಯೋಗೊ ಬ್ಯಾಟರಿಗೋ

ಹಾಕಿದ್ದ ದೊಡ್ಡ ಶಲ್ ಸುಟ್ಟು

ಹುಲ್ಕಟ್ಟು ಬಿಚ್ಚಿ ಸಗಣಿ ಬೆರೆಸಿ

ಮನೆ ಒಳ ಹೊರ ಅಂಗಳವೆಲ್ಲಾ

ಸಾರಿಸಿದ ನಂತರ ಈಗ ಏನೋ

ಕಳೆದುಕೊಂಡಿದ್ದಿದೆ…...


ಬಣ್ಣ ಬಣ್ಣದ ಗಾಜಿನ ಬಳೆಗಳ

ಚೂರುಗಳ ಆಯ್ದು ಬಳೆ ಆಟ

ಆಡುವಾಗ ಸಿಗುವ ಖುಷಿಯಲ್ಲಿ

ತೂಕ ಕಳೆದುಕೊಂಡ ಪ್ಲಾಸ್ಟಿಕ್

ಬಳೆಗಳು ಕೂಡಾ ಮೌನವಾಗಿರುವಾಗ ಈಗ ಏನೋ

ಕಳೆದುಕೊಂಡಿದ್ದಿದೆ…..


ಹಳ್ಳಾಟ ಆಡಿ ಮಳೆ ಬರಿಸುವ

ಉಮೇದಿಗೆ ತಿರುಕಲೆಗೆ ಹಳ್ಳು

ಹಣೆಗೊಡೆದಾಗ ಹಿತ್ತಲ ಅರಿಶಿನ

ಅಗೆದು ನಾಟಿ ವೈದ್ಯರಾದದ್ದರ ಹಿಂದೆ ಈಗ ಏನೋ ಕಳೆದುಕೊಂಡಿದ್ದಿದೆ….


ಅಮವಾಸ್ಯೆ, ಹಬ್ಬದ ದಿನ

ಓಣಿಯ ಹೆಣ್ಮಕ್ಕಳೆಲ್ಲಾ

ಮಾವಿನ ಮರದ ನೆರಳಲ್ಲಿ

ಎಂತತದ್ದೋ ಮಾತಾಡಿ ನಗುವ

ನಗುವಿನ ಹಿಂದೆ ಈಗ ಏನೋ ಕಳೆದುಕೊಂಡಿದ್ದಿದೆ…


ಮದುವೆ, ಅಮ್ಮೆಪಾಯಸದಂತ

ಕಾರ್ಯಕೆ ಮಸಾಲೆ ರುಬ್ಬಲು

ಮನೆಮನೆಯ ಅರುಕಲ್ಲುಗಳಿಗೆ

ಹೋಗುವಾಗಿನ ಹಿಂದೆ ಈಗ

ಏನೋ ಕಳೆದುಕೊಂಡಿದ್ದಿದೆ…


ಹಾಣೆಗೆಂಡೆ, ಗೋಟಿ, ಕಿಟ್ಟಾಟ

ಬಲೆಯಾಟ, ಗ್ಯಾರಬೀಜದಾಟ, ಹೆಡೆಮೊಟೆ ಬೇಟು, ಅಡಿಕುಟೆ ಆಟ ಆಡಿ ಬಯಲ ಮಣ್ಣ ಬರಿಮೈಗೆ ಮೆತ್ತಿಕೊಂಡು

ಕಾದ ಅಡಕಲ ನೀರ ಮೀಯುವಾಗ ಈಗ ಏನೋ ಕಳೆದುಕೊಂಡಿದ್ದಿದೆ…


ಕಳೆದುಕೊಂಡಿದ್ದು ವಿವರಕ್ಕೆ ಸಿಗುತ್ತಿಲ್ಲ…ಕೇಲವು ಮಣ್ಣ ಒಳಗೆ, ಕೇಲವು ಗೋಡೆಗೆ

ಹಲವು ಹಳಬರ ತಲೆಯಲ್ಲಿ

ಬರಿ ನೆನಪ ಮೆಲಕಿನ ಗುರುತುಗಳಾಗಿ

ಆಪ್ತರು ಸಿಕ್ಕಾಗ ಗುಂಯ್ ಗುಟ್ಟು ಹಿತವಾಗಿ ನಗುವ ನಗುವಿನ ಹಿಂದೆಯೂ ಕಳೆದುಕೊಂಡಿದ್ದಿದೆ.....


@ ಮೋಹನ್ ಗೌಡ ಹೆಗ್ರೆ

24 views1 comment

1 comentario


goudasatu
goudasatu
30 oct 2020

ಸೂಪರ್ ಆಗಿದೆ.ತಮ್ಮ ಕವನ ರಚನೆ👌👌💐💐

Me gusta
bottom of page