ಅನ್ಯರಲಿ ಬೇಡುವದು ಮರಣಕ್ಕೆ ಸಮ!
ಮಾಂಗನ ಮರಣ ಸಮಾನ ಹೈ, ಮಾತಿ ಮಾಂಗೊ
ಕೋಯಿ ಭೀಕ/
ಮಾಂಗನ ತೆ ಮರನಾ ಭಲಾ, ಯಹ ಸದ್ಗುರು ಕೀ
ಸೀಖ //
ಕೆಲವರಿಗೆ ಕೈ ಕಾಲು ಗಟ್ಟಿಯಿದ್ದರೂ ದುಡಿಯದೇ ಬೇರೆಯವರ ಎದುರು ಕೈಚಾಚುವ ಚಟವಿರುತ್ತದೆ. ಅಸಹಾಯಕತೆಯ ನಾಟಕವಾಡುತ್ತ, ಭಿಕ್ಷೆ ಬೇಡುವ
ಇವರಿಗೆ ಕಷ್ಟವಿಲ್ಲದೇ ಜೀವನ ಸಾಗಿಸುವದು ರೂಢಿ. ಆದರೆ ಇಂಥ ಮನೋಭಾವನೆ ಆತ್ಮ ಸಂಮಾನಕ್ಕೆ ಧಕ್ಕೆ ತರುತ್ತದೆ ಎಂಬ ಸತ್ಯ ಅವರಿಗೆ ಅರ್ಥವೇ ಆಗುವದಿಲ್ಲ! ಸಾಧು, ಸಂತರು, ಫಕೀರರು ಭಿಕ್ಷೆ ಬೇಡುವದರ ಹಿಂದಿನ ಉದ್ದೇಶ ಅಹಂಕಾರ ತ್ಯಾಗ. ಅಲ್ಲದೇ ಆಯಾ ದಿನಕ್ಕೆ ಬೇಕಾದ ದವಸವನ್ನು ಮಾತ್ರ ಬೇಡುವ ಪರಿಕ್ರಮ ಅವರದ್ದಾಗಿರುತ್ತದೆ. ಇನ್ನು ಕೆಲವರು, ಶ್ರೀಮಂತರ, ಅಧಿಕಾರಿಗಳ ಮತ್ತು ರಾಜಕೀಯ ಮುಖಂಡರ ಅಡಿಯಾಳಾಗಿ ಹಲ್ಲು ಗಿಂಚುತ್ತ, ಅವರ ಕೃಪಾ ಕಟಾಕ್ಷ ಬೇಡುತ್ತ ತಮ್ಮ ಬೇಳೆ ಬೇಯಿಸಿಕೊಳ್ಳುವ ರೀತಿ ಹೇಸಿಗೆ ಹುಟ್ಟಿಸುತ್ತದೆ. ಆದರೆ ನಾಚಿಕೆಯನ್ನು ಬಿಟ್ಟು ಬೇಡುವ ಯಾಚಕರಿಗೆ ತಮ್ಮ ಆತ್ಮ ಸಂಮಾನಕ್ಕೆ ಗ್ರಹಣ ಬಡಿದದ್ದು ಗೊತ್ತಾಗುವದೇ ಇಲ್ಲ!
ಮೇಲಿನ ದೋಹೆಯಲ್ಲಿ ಸಂತ ಕಬೀರರು,
ಬೇಡುವದು ಮರಣಕ್ಕೆ ಸಮ, ಭಿಕ್ಷೆ ಬೇಡಲೇಕೆ ಮತ್ತೆ?/
ಬೇಡುವದಕ್ಕಿಂತ ಸಾವೇ ಮೇಲು, ಇದು ಸದ್ಗುರುವಿನ ಚಿತ್ತ //
ಎಂಬ ಕಿವಿಮಾತು ಹೇಳಿದ್ದಾರೆ. ವ್ಯವಹಾರ ಕ್ಷೇತ್ರದಲ್ಲಿ ಕೊಡುವ, ತೆಗೆದುಕೊಳ್ಳುವದು ಇದ್ದೇ ಇರುತ್ತದೆ. ಹಾಗೆಯೇ ನೆರೆ- ಹೊರೆಯವರು ಮಾಡುವ ವಸ್ತು ವಿನಿಮಯದ ಹಿಂದೆ ಪ್ರೀತಿ, ವಿಶ್ವಾಸ ಇರುತ್ತದೆ. ಆದರೆ ಆಲಸಿಗಳಾಗಿ ಬೇಡುವವರ ವಿರುದ್ಧ ಕಬೀರರು ಕಿಡಿ ಕಾರಿದ್ದಾರೆ. ಮನುಷ್ಯ ಪರಾವಲಂಬಿಯಾಗದೇ, ಸ್ವಾವಲಂಬಿ ಯಾಗಿ ಸ್ವಾಭಿಮಾನದಿಂದ ಬದುಕು ಸಾಗಿಸಬೇಕು.
ಇದಕ್ಕಾಗಿ ಸತತ ಪರಿಶ್ರಮ, ಸಹನೆ ಅತ್ಯಗತ್ಯ.
ಬಾಚುವದ ಬಿಡು, ಕೈ ಚಾಚುವದ ಬಿಡು
ನಾಚಿಕೆಯಿರಲಿ, ಹುಸಿ ದೀನತೆಯ ಬಿಡು/
ಬೇಡುತ್ತ ಬಾಳುವದಕಿಂತ ಸಾವನಪ್ಪಿಬಿಡು
ಬಿಡದಿರು ಆತ್ಮಗೌರವ - ಶ್ರೀವೆಂಕಟ //
ಶ್ರೀರಂಗ ಕಟ್ಟಿ ಯಲ್ಲಾಪುರ
Comments