ನಾಡಿನ ಶ್ರೇಷ್ಠ ಕತೆಗಾರರಲ್ಲೊಬ್ಬರಾಗಿ ಪರಿಗಣಿಸಬೇಕಾದ ಹೆಸರು ಶ್ರೀಮತಿ ಶ್ವೇತಾ ನರಗುಂದ ಅವರದು. ಮೂರು ಕಥಾಸಂಕಲನಗಳ ಸಹಿತ ಹನ್ನೆರಡು ಕೃತಿಗಳನ್ನು ನೀಡಿರುವ ಅವರು ಮೊದಲ ಕಥಾಸಂಕಲನ " ಕಾತ್ಯಾಯನಿ ಅಮ್ಮನೂ ವೇಲು ಪಕ್ಷಿಯೂ" ಮೂಕವೇ ವಿಮರ್ಶಕರ ಗಮನ ಸೆಳೆದವರು. ಎರಡನೆಯದು " ಗಾಜಿನ ಮನೆ".
ಕನ್ನಡ ಕಥಾಸಾಹಿತ್ಯ ಸಮೃದ್ಧವಾದದ್ದಷ್ಟೇ ಅಲ್ಲ, ಅದು ಯಾವತ್ತೂ ತನ್ನ ಶ್ರೇಷ್ಠತೆಯನ್ನೂ ಉಳಿಸಿಕೊಂಡುಬಂದಿದೆ. ಗೊಳ್ಳು ಇಲ್ಲವೇ ಇಲ್ಲ ಎಂದಲ್ಲ. ಇರುವಂತಹದೆ. ಆದರೆ ಉತ್ತಮ ಕತೆಗಾರರ ಬಹಳ ದೊಡ್ಡ ಪರಂಪರೆ ಕನ್ನಡಕ್ಕಿದೆ ಎನ್ನುವದು ಹೆಮ್ಮೆಯ ವಿಚಾರ.
ಶ್ವೇತಾ ನರಗುಂದರ ಈ ಮೂರನೆಯ ಸಂಗ್ರಹ ಹದಿನೈದು ಕತೆಗಳನ್ನೊಳಗೊಂಡಿದೆ. ಗಟ್ಟಿಯಾದ ಶೈಲಿ , ಹದವಾದ ನಿರೂಪಣೆ, ಮನುಷ್ಯಬದುಕಿನ ಒಳಹೊರಗುಗಳನ್ನು ಸೂಕ್ಷ್ಮವಾಗಿ ಗುರುತಿಸಬಲ್ಲ ಸಾಮರ್ಥ್ಯ ಅವರ ಕತೆಗಾರಿಕೆಯ ಮೂಲ ಬಂಡವಳು. ಈ ಸಂಕಲನಕ್ಕೆ ಬೆನ್ನುಡಿ ಬರೆದ ಹಿರಿಯ ಬರೆಹಗಾರರಾದ ಪ್ರೇಮಶೇಖರ ಅವರು " ಶ್ವೇತಾ ನರಗುಂದರ ಲೇಖನಿಯಲ್ಲಿ ಅನಾವರಣಗೊಂಡಿರುವ ಸ್ತ್ರೀ ಅಂತರಾಳದ ವೈವಿಧ್ಯಮಯ ಚಿತ್ರಗಳು ಈ ಸಂಕಲನವನ್ನು " ಹೆಣ್ಣಿನ ಒಳತೋಟಿಯ ಬಗೆಗೊಂದು ಶ್ವೇತಪತ್ರ" ವನ್ನಾಗಿಸಿವೆ" ಎಂದಿರುವದು ಅತ್ಯಂತ ಸೂಕ್ತ ಅಭಿಪ್ರಾಯವೇ ಸರಿ. ಮನ: ಶಾಸ್ತ್ರ, ವೈದ್ಯವಿಜ್ಞಾನ, ಸಂಗೀತ, ಕೃಷಿ, ಗ್ರಾಮೀಣ ಬದುಕು, ರಾಜಕೀಯ ಸಾಮಾಜಿಕ ಸಂಗತಿಗಳು ಯಾವುದೇ ವಿಷಯ ಇರಲಿ , ಅವುಗಳ ಅಂತರಂಗವನ್ನು ಜಾಲಾಡುವ ಮತ್ತು ಅವುಗಳನ್ನು ಕತೆಯಾಗಿಸುವ ಕುಶಲ ಕಲಾವಂತಿಕೆ ಅವರಲ್ಲಿದೆ.
ಪುಸ್ತಕದ ತಲೆಬರೆಹವಾಗಿರುವ ಮೊದಲ ಕತೆ " ಮನಸು ಮಾಯೆ" - ತನ್ನ ಪತಿಯನ್ನು ಕಳೆದುಕೊಂಡ ಯುವತಿ ಮಾನಸಿಕ ಆಘಾತಕ್ಕೊಳಗಾಗಿ ಆತ ಸತ್ತಿಲ್ಲ, ಇನ್ನೂ ಬದುಕಿದ್ದಾನೆ ಎಂಬ ಭ್ರಮೆಯಲ್ಲೇ ಕಾಲ ಕಳೆಯುತ್ತಿರುವಾಗ ಮನ: ಶಾಸ್ತ್ರಜ್ಞರಾದ ವೈದ್ಯರು ಮೊಬೈಲ್ ನಲ್ಲಿ ಅವಳ ಪತಿಯ ಸಂದೇಶಗಳನ್ನು ಕಳಿಸುವ ಮೂಲಕ ಅವಳು ಹೊಸ ಬದುಕನ್ನು ಕಂಡುಕೊಳ್ಳಲು ಸಾಧ್ಯವಾಗುವಂತಹ ಒಂದು ತಂತ್ರ ಗಮನ ಸೆಳೆಯುತ್ತದೆ.
" ವಿಮಲಮ್ಮನೂ ರವಾನೆ ಯಂತ್ರವೂ" ಎಂಬ ಕತೆ ಸ್ವಲ್ಪ ಲಘುವಾದ ಸ್ವರೂಪದಲ್ಲಿದ್ದು ತಾಯಿಗೆ ಮಕ್ಕಳ ಕುರಿತು ಇರುವ ಕಾಳಜಿ ಒಂದು ಮಿತಿಯನ್ನು ಮೀರಿದಾಗ ಅದು ಹೇಗೆ ಸಮಸ್ಯೆಗೂ ಕಾರಣವಾಗಬಲ್ಲುದೆನ್ನುವದನ್ನು ಚಿತ್ರಿಸುತ್ತದೆ.
" ಉತ್ತರವನರಸುತ" ಮೂರನೆಯ ಕತೆ. ಗೆಳೆತನ ಎನ್ನುವದು ರಕ್ತಸಂಬಂಧಕ್ಕಿಂತ ಹೆಚ್ಚು ಹತ್ತಿರದ್ದು ಎನ್ನುವದನ್ನು ಬಿಂಬಿಸುವ ಕತೆ. ಆಸ್ಪತ್ರೆಯಲ್ಲಿ ಯಮಯಾತನೆಯಿಂದ ನರಳುತ್ತ ಮಲಗಿದ ತನ್ನ ಗೆಳತಿಗಾಗಿ ಮಿಡಿಯುವ ಮತ್ತೊಂದು ಜೀವ, ಈ ನರಳುವಿಕೆಗೆ ಕಾರಣವಾದರೂ ಏನು, ಪೂರ್ವಜನ್ಮದ ಪಾಪ ಕರ್ಮವೇ ಅಥವಾ ಇನ್ನೇನು ಎಂಬ ಉತ್ತರವಿಲ್ಲದ ಪ್ರಶ್ನೆಯ ಹುಡುಕಾಟ ಇಲ್ಲಿದೆ.
" ಕನ್ನಡಿ ತೋರಿದ ಅಪರಿಚಿತ" - ಖ್ಯಾತಿವೆತ್ತ ಸಂಗೀತ ಕಲಾವಿದನೊಬ್ಬನ ಮನಸ್ಸಿನ ತೊಳಲಾಟ,. ತಾನು ಮಾಡಿದ ತಪ್ಪು ತನ್ನನ್ನೇ ತಿನ್ನುವಂತಹ ಒಳಸಂಘರ್ಷ, ಒಳ್ಳೆಯ ಗಾಯಕನಾದರೂ ಒಳ್ಳೆಯ ಮನುಷ್ಯನಾಗದೆ ಸೋಲು ಕಂಡ ಗಾಯಕನ ಕತೆ.
" ವಿಪ್ಲವ" ಕೊರೊನಾ ಕಾಲದ ಕತೆ. ವಿವೇಕನೆಂಬ ವೈದ್ಯ ಕೊರೊನಾ ರೋಗಿಗಳ ಚಿಕಿತ್ಸೆ ಮಾಡುತ್ತ ತಾನೇ ಆ ಸೋಂಕಿಗೊಳಗಾಗಿ ಮಲಗುವ ಪರಿಸ್ಥಿತಿ ಬಂದಾಗ ಉಂಟಾಗುವ ಮಾನಸಿಕ ತೊಳಲಾಟವನ್ನು ಬಹಳ ಪರಿಣಾಮಕಾರಿಯಾಗಿ ಚಿತ್ರಿಸುತ್ತದೆ.
" ಅಂದೇಗೌಡನ ಹೊಸ ಹೃದಯ " - ಇದೂ ಒಂದು ರೀತಿಯಲ್ಲಿ ಮನ:ಶಾಸ್ತ್ರೀಯ ಸಮಸ್ಯೆಯ ಕತೆಯೇ. ಅಂದೇಗೌಡನಿಗೆ ಹೃದಯಸಂಬಂಧಿ ಕಾಯಿಲೆ. ಸಮಯಕ್ಕೆ ಸರಿಯಾಗಿ ಬೇರೆ ಜೀವಂತ ಮನುಷ್ಯ ಹೃದಯ ಸಿಗದೇ ಇದ್ದಾಗ ಹಂದಿಯ ಹೃದಯ ಜೋಡಿಸಲಾಗುತ್ತದೆ. ತನ್ನದು ಹಂದಿಯ ಹೃದಯ ಎನ್ನುವದು ಗೊತ್ತಾಗಿ ಅಂದೇಗೌಡನ ವರ್ತನೆಯೂ ಹಂದಿಯಂತೆ ಆಗಿಬಿಡುತ್ತದೆ. ಒಂದುವೇಳೆ ಆ ವಿಷಯ ಅವನಿಗೆ ಗೊತ್ತಾಗದೇ ಇದ್ದಿದ್ದರೆ ಆಗ ಅವನ ಸ್ವಭಾವ ಹೇಗಿರುತ್ತಿತ್ತೋ ಎಂಬ ಕುತೂಹಲ ಹುಟ್ಟಿಸುವಂತಹದು.
" ಶಾಪಗ್ರಸ್ತೆ" ಯಯಾತಿಯ ಮಗಳು ಮಾಧವಿಗೆ ಸಂಬಂಧಿಸಿದ ಪೌರಾಣಿಕ ಕಥಾವಸ್ತು ಹೊಂದಿದ್ದರೂ ಇಲ್ಲಿರುವದು ಹೆಣ್ಣನ್ನು ಮನಸ್ಸಿಗೆ ಬಂದಂತೆ ಬಳಸುವ ಪುರುಷರ ಮನಸ್ಥಿತಿ ಮತ್ತು ಅದನ್ನು ಪ್ರತಿಭಟಿಸಿ ನಿಲ್ಲುವ ಮಾಧವಿಯ ನಿಲುವು ಇಲ್ಲಿ ಮುಖ್ಯವೆನಿಸುತ್ತದೆ.
" ಅವನಿ ಮತ್ತು ಕಾದಂಬರಿ" - ಮಾತೃಹೃದಯದ ಕಾದಂಬರಿಕಾರ್ತಿಯೊಬ್ಬಳಿಗೆ ಅವಳ ಕತೆಕಾದಂಬರಿಗಳು ಅಭಿಮಾನಿಯೊಬ್ಬಳ ಬದುಕಿನ ಮೇಲೆ ಬೀರುವಂತಹ ಪರಿಣಾಮದ ಬಗ್ಗೆ ಯೋಚಿಸುವಂತೆ ಮಾಡಿದ ಸನ್ನಿವೇಶವನ್ನೊಳಗೊಂಡಿದೆ.
ಕಾಡಿನ ಮನೆಯೊಂದರ ಬಗ್ಗೆ ವಿಶೇಷ ವರದಿ ಮಾಡಲು ಕಾಡಿಗೆ ಹೋದ ಯುವ ಪತ್ರಕರ್ತೆ ಅಲ್ಲೇ ತನ್ನ ಮೆಚ್ಚಿನ ವರನನ್ನು ಕಂಡುಕೊಂಡ ಕತೆ " ಬೆಟ್ಟದಾ ಮೇಲೊಂದು.... ".
ತಮ್ಮ ಮನೆಯ ಹಿತ್ತಿಲದಲ್ಲೇ ಇರುವ ಗಂಧದ ಮರವನ್ನು ಕಡಿಸಲು ಅನುಮತಿ ಪಡೆಯುವದಕ್ಕೆ ಸಂಬಂಧಿಸಿ ಸರಕಾರಿ ಕಚೇರಿಯ ಲಂಚಕೋರರಿಂದ ಸುಸ್ತಾಗುವ ತಂದೆಯ ಮೂಲಕ ಭ್ರಷ್ಟ ವ್ಯವಸ್ಥೆಯ ಕತೆ ಹೇಳುತ್ತದೆ 'ಮಹಾವೃಕ್ಷ".
ಗಂಡು ಹೆಣ್ಣಿನ ದೈಹಿಕ ಸಂಪರ್ಕ ನಿಸರ್ಗ ಸಹಜವಾದ ಪ್ರಕ್ರಿಯೆ. ಅದರಿಂದ ಬುಳ ಕಾಲ ಯಾರೂ ದೂರವಿರಲು ಬರುವದಿಲ್ಲ. ಹಾಗೆ ದೂರವಿದ್ದರೆ ಆಗಬಹುದಸದ ಸಮಸ್ಯೆಯತ್ತ ಗಮನ ಸೆೞೆಯುವ ಕತೆ " ಸರಿಯೋ ತಪ್ಪೋ?"
ಹಳ್ಳಿಗಳೂ ಇಂದು ರಾಜಕೀಯದ ವಿಷವರ್ತುಲದಲ್ಲಿ ಸಿಲುಕಿ ಹದಗೆಟ್ಟುಹೋಗಿವೆ. ಅಂತಹ ಒಂದು ಹಳ್ಳಿಯ ದುರಂತ ಕತೆ " ಮೂಕಸಾಕ್ಷಿ" .
" ಮುಳ್ಳ ಮೇಲಿನ ಕೆಂಪು ಪುಷ್ಪ" ರೋಮ್ ದೇಶದ ದೇವತೆ ವೀನಸ್ ಮೂಲಕ ಕೆಂಪು ಗುಲಾಬಿ ಪ್ರೇಮದ ಸಂಕೇತವಾ ಕತೆ. ವರ್ಣನೆಯ ಭಾರ ಹೆಚ್ಚಾಗಿದ್ದರೂ ತುಂಬ ಸೊಗಸಾದ ಶೈಲಿಯಿಂದ ಗಮನ ಸೆಳೆಯುತ್ತದೆ
ಕತೆಗಳು ಯಶಸ್ವಿಯೆನಿಸುವದು ಕೇವಲ ಕಥಾವಸ್ತುಗಳಿಂದಲ್ಲ. ಅವುಗಳನ್ನು ನಿರೂಪಿಸುವ ರೀತಿಯಿಂದ. ಅವು ನಮ್ಮ ಮನಸ್ಸಿನ ಮೇಲೆ ಬೀರುವ ಪರಿಣಾಮ ಬಹಳ ಮುಖ್ಯ. ಕತೆಗಳನ್ನು ಓದಿದ ನಂತರವೂ ಅವು ನಮ್ಮನ್ನು ಬಹಳ ಕಾಲ ಕಾಡಬೇಕು. ಈ ದೃಷ್ಟಿಯಿಂದ ಶ್ವೇತಾ ನರಗುಂದರ ಕತೆಗಳನ್ನು ಯಶಸ್ವೀ ಕತೆಗಳ ಸಾಲಿಗೆ ಸೇರಿಸುವದಕ್ಕೆ ಅನುಮಾನ ಪಡಬೇಕಾಗಿಲ್ಲ. ಕನ್ನಡ ಕಥಾ ಸಾಹಿತ್ಯಕ್ಕೆ ಇದೊಂದು ಉತ್ತಮ ಕೊಡುಗೆ. ಅವರಿಗೆ ಅಭಿನಂದನೆಗಳನ್ನು ಹೇಳುತ್ತ ಅವರ ಕಥೆಗಳಿಗೆ ಉತ್ತಮ ವಿಮರ್ಶೆ , ಸ್ಥಾನಮಾನ ಸಿಗುವಂತಾಗಲಿ ಎಂದು ಹಾರೈಸುತ್ತೇನೆ.
ಪುಟಗಳು : ೧೬೪
ಬೆಲೆ:೧೫೦ ರೂ.
ಸಾಹಿತ್ಯ ಸುಧೆ ಪ್ರಕಾಶನ , ಮೈಸೂರು.
ಕತೆಗಾರರ ಮೊ. ನಂ. ೯೮೮೦೨೯೮೮೪೦
- ಎಲ್. ಎಸ್. ಶಾಸ್ತ್ರಿ
Comments