ಆಲೋಚನೆ ಡಾಟ್ ಕಾಂ. ಪತ್ರಿಕೆ ಆರಂಭವಾಗಿ ಎರಡು ವಾರಗಳು ಕಳೆದವು. ಪತ್ರಿಕೆಯನ್ನು ಆರಂಭ ಮಾಡುವಾಗ ಇದ್ದ ಆತಂಕ,ಹಿಂಜರಿಕೆ ಮತ್ತು ಅಸ್ಪಷ್ಟತೆಗಳು ಸಾವಕಾಶವಾಗಿ ಸರಿದು ಹೋಗುತ್ತಿದೆ.ಬರಹಗಾರರು,ಓದುಗರು ಮತ್ತು ಹಿತೈಷಿಗಳು ಇದು ನಮ್ಮದೆ ಪತ್ರಿಕೆ ಎಂಬ ಸಂಭ್ರಮದಲ್ಲಿ ಅದನ್ನು ಬರಮಾಡಿಕೊಂಡಿದ್ದಾರೆ.
ಜನರಿಗೆ ನಮ್ಮ ವಿಚಾರಗಳನ್ನು,ಸಾಹಿತ್ಯ,ಸಂಸ್ಕೃತಿ,ಕಲೆ,ಪರಿಸರ,ಆರೋಗ್ಯ ಮತ್ತು ವಿಜ್ಞಾನದ ಕುರಿತು ಅರಿವು ಮತ್ತು ಆಸಕ್ತಿಯನ್ನು ಹುಟ್ಟು ಹಾಕ ಬೇಕು ಎಂಬ ನಮ್ಮ ಹಂಬಲಕ್ಕೆ ದೊರೆತಿರುವ ನಿಮ್ಮೆಲ್ಲರ ಬೆಂಬಲ ಮನಕ್ಕೆ ಮುದವನ್ನು ನೀಡುತ್ತಿದೆ.ಒಳ್ಳೆಯ ವ್ಯಕ್ತಿಯ ವಿಚಾರಗಳು ಎಂದಿಗು ವ್ಯರ್ಥವಾಗುವುದಿಲ್ಲ.(A good man's thought never goes in vain) ಎಂಬ ನಂಬಿಕೆಯಿಂದ ಈ ಪತ್ರಿಕೆ ಆರಂಭ ಮಾಡಿದ್ದು ಅದನ್ನು ವಿಸ್ತರಿಸುವ,ಬಹುಜನರಿಗೆ ತಲುಪಿಸುವ ನಮ್ಮ ಆಶೆ ಫಲಿಸುತ್ತದೆ ಎಂಬ ಭರವಸೆಯ ಮಿಂಚೊಂದು ಮಿಂಚಿದೆ.
ಮೊದಲನೆ ವಾರಕ್ಕಿಂತ ಈ ವಾರ ಬರಹಗಾರರು ತಮ್ಮ ಬರಹಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಳಿಸಿದ್ದಾರೆ.ಇದರಲ್ಲಿಯ ಬಹಳಷ್ಟು ಬರಹಗಳು ತನ್ನ ಸ್ವೋಪಜ್ಞತೆಯಿಂದ ಓದುಗರ ಗಮನ ಸೆಳೆದಿವೆ. "ನಡೆದವರೆಡಹದೆ ಕುಳಿತವರೆಡಹುವರೆ" ಎಂಬ ಕವಿ ರಾಘವಾಂಕನ ಮಾತಿನಂತೆ ನಾವು ಅವರ ಕವನವನ್ನು ಪ್ರಕಟಿಸಿ ನೀಡುವ ಪ್ರೋತ್ಸಾಹ ಅವರ ಸೃಷ್ಟಿಕ್ರಿಯೆಯನ್ನು ಉದ್ದೀಪನಗೊಳಿಸುತ್ತದೆ ಎಂಬ ನಂಬಕೆ ನಮ್ಮದು. ನಾವು ನಮ್ಮ ನಿಲುಕಿಗೆ ಎಟಕ ಬಲ್ಲ ಲೇಖಕರಲ್ಲಿ ಕೇಳಿಕೊಂಡಾಗ ಅವರು ತಮ್ಮ ಬರಹಗಳ ಮೂಲಕ ಈ ಪತ್ರಿಕೆಯ ಆಯಾಮವನ್ನು ವಿಸ್ತರಿಸುತ್ತಿದ್ದಾರೆ.ನಾವು ಮುಗಿಲಿಗೆ ಏಣಿ ಹಾಕುವ ಸಾಹಸ ಮಾಡಿಲ್ಲ.ನಮ್ಮ ನಡುವಿನ ಶ್ರೀಸಾಮಾನ್ಯರು ತಮ್ಮ ಬರವಣಿಗೆಯ ಮೂಲಕ ಅಪಾರಕ್ಕೆ ತುಡಿಯ ಬಲ್ಲರು ಎಂಬ ನಂಬಿಕೆ ನಮಗೆ ಲಾಗಾಯ್ತಿನಿಂದ ಇದೆ.ಅದು ಸಾಧ್ಯ.
ಈ ಸಂಚಿಕೆ ನಿಮ್ಮ ಕೈ ಸೇರುವಾಗ ನಮ್ಮೆಲ್ಲರ ಪ್ರೀತಿಯ ಚೆಂಬೆಳಕಿನ ಕವಿ ಚೆನ್ನವೀರ ಕಣವಿಯವರು ೯೩ ಕ್ಕೆ ಪದಾರ್ಪಣ ಮಾಡಿದ್ದಾರೆ. " ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಘ ಮಘಿಸಲಿ" ಎಂದ ಸುಮನಸ ಕವಿ ಅವರು.ಅವರ ಜೊತೆಯ ಒಡನಾಟ ಹರಿವ ತೊರೆಯ ಬಳಿಯಲ್ಲಿ ಸುಮ್ಮನೆ ಅದರ ಹರಿವನ್ನು, ಜುಳು ಜುಳು ನಿನಾದವನ್ನು ಕೇಳುತ್ತ ಕುಳಿತ ಅನಿರ್ವಚನೀಯ ಸಂತಸ.ಕಣವಿ ಪದದಲ್ಲಿ ಕವಿ ಅಂತಸ್ಥವಾಗಿದ್ದಾನೆ.ಅವರು ಆರೋಗ್ಯವಂತರಾಗಿ ನೂರ್ಕಾಲ ಬಾಳಲಿ ಎಂಬುದು ನಮ್ಮ ಪತ್ರಿಕೆಯ ಹರಕೆ ಮತ್ತು ಹಾರೈಕೆ.
ನಮ್ಮೆಲ್ಲರ ಪ್ರೀತಿಯ ಕವಿ ಸುಬ್ರಾಯ ಚೊಕ್ಕಾಡಿಯವರಿಗೆ ಎಂಬತ್ತು ತುಂಬಿದೆ.ಆದರೆ ಇದನ್ನು ನಂಬುವುದು ಹೇಗೆ! ಅವರ ಕವಿತೆಗಳಿಗೆ ಹದಿನೆಂಟರ ಹರೆಯ.ಬರಹಗಳಿಗೆ ಇಪ್ಪತ್ತೈದರ ಏರುಂಜವ್ವನ. ಶಿಕ್ಷಕರಾದ ಅವರು ತಮ್ಮ ಬರವಣಿಗೆಯ ಮೂಲಕ ಲೋಕ ಶಿಕ್ಷಕರಾದವರು.ಅವರ ಒಡನಾಟ ಮಾತುಕತೆ ನಿಜಕ್ಕೂ ಚೇತೋಹಾರಿ.ಯವುದೆ ಹಮ್ಮು ಬಿಮ್ಮುಗಳಿಲ್ಲದ ಸಹಜತೆಯ ಸಾಕಾರ ಮೂರ್ತಿ. ನಮ್ಮೆಲ್ಲರ ಪ್ರೀತಿ ಮತ್ತು ಅಭಿಮಾನದ ಪ್ರಯೋಗಶೀಲ ಲೇಖಕ ಚೊಕ್ಕಾಡಿಯ ಸುಬ್ರಾಯರು ಕನ್ನಡ ನುಡಿತಾಯಿಯ ಮಡಿಲಿಗೆ ತಮ್ಮ ಬರಹಗಳ ಮಡಿಲಕ್ಕಿಯನ್ನು ತುಂಬುತ್ತ ಆರೋಗ್ಯವಂತರಾಗಿ ಬಹುಕಾಲ ಬಾಳಲಿ ಎಂದು ಮನಸಾರೆ ಹಾರೈಸುತ್ತೇವೆ.
ಲೇಖಕಿ ಗೀತಾ ನಾಗಭೂಷಣ ನಮ್ಮನ್ನೆಲ್ಲ ಅಗಲಿದ್ದಾರೆ.ಬಂಡಾಯ ಸಾಹಿತ್ಯದ ಕಣಜಕ್ಕೆ ತಮ್ಮ ಕತೆ,ಕಾದಂಬರಿಗಳ ಮೂಲಕ ಗಟ್ಟಿಕಾಳುಗಳನ್ನು ತುಂಬಿದ ದಿಟ್ಟ ಬರಹಗಾರ್ತಿ ಗೀತಾ ನಾಗ ಭೂಷಣ ಅವರು. ನಮ್ಮ ಆಲೋಚನೆ ಹೆಸರಾಂತ ಲೇಖಕಿ ಮತ್ತು ನಮ್ಮ ಆಲೋಚನೆ ಪತ್ರಿಕೆಯ ಹಿತೇಚ್ಚು ಸುನಂದಾ ಕಡಮೆಯವರು ಲೇಖಕಿ ಗೀತಾ ನಾಗಭೂಷಣಅವರ ಬಗ್ಗೆ ಬರೆದ ಬರಹ ಇಲ್ಲಿ ಲಭ್ಯ.
ಇಷ್ಟು ದಿನ ಆಗೊಮ್ಮ ಈಗೊಮ್ಮೆ ಬಂದು ಕಣ್ಣು ಮುಚ್ಚಾಲೆಯಾಡುತ್ತಿದ್ದ ಮಳೆ ಇನ್ನು ಸುಮ್ಮನಿರುವುದು ಸರಿಯಲ್ಲ ಎಂಬಂತೆ ಧೋ ಧೋ ಎಂದು ಸುರಿಯುತ್ತಿದೆ.ಆದರೆ ಯಾಕೊ ಈ ಕಾಲದ ಮಳೆಗೆ ಮೊದಲಿನ ಹುರುಪು ಮತ್ತು ದ್ರುತಗತಿ ಕಡಿಮೆಯಾದಂತೆ ಭಾಸವಾಗುತ್ತಿದೆ.ಮಳೆಯು ಬರಲಿ,ಹೊಳೆಯು ತುಂಬಲಿ.ಬಡ ಬಗ್ಗರಿಗೆ ಎರಡ್ಹೊತ್ತು ಅಂಬಲಿಯಾದರೂ ಸಿಗಲಿ ಶಿವನೆ.
ತಮ್ಮವ
ಡಾ.ಶ್ರೀಪಾದ ಶೆಟ್ಟಿ
ತಮ್ಮ ಆಲೋಚನೆ ಚೆನ್ನಾಗಿದೆ.. ಅಭಿನಂದನೆಗಳು.... ಜನರು ಹೆಚ್ಚು ಹೆಚ್ಚು ಆಲೋಚಿಸುವಂತೆ ಮಾಡಲಿ!
~ವಸಂತ ಅಣವೇಕರ್
'ಪತ್ರಿಕೆಗಳು ಈ ಕತ್ತಲ ಸಮಾಜಕ್ಕೆ ಒಂದು ಬೆಳಕಿನ ಟಾರ್ಚ ಇದ್ದ ಹಾಗೆ' ಅಂತ ಹೆಸರು ಮರೆತ ಆಂಗ್ಲ ಚಿಂತಕರೊಬ್ಬರು ಹೇಳಿದ್ದು ನೆನಪಿಸಿಕೊಳ್ಳುವುದಾದರೆ, ಆಲೋಚನೆ - ಸಮಾಜದ ಹಲವು ಮನಸ್ಸುಗಳ ವಿವಿಧ ಮಗ್ಗಲುಗಳ ಮೇಲೂ ತನ್ನ ಬೆಳಕನ್ನು ಚೆಲ್ಲುತ್ತ ಬೆಳಗುತ್ತಿದೆ, ಪತ್ರಿಕೆ ಇನ್ನೂ ಹೆಚ್ಚಿನ ಸಂಖ್ಯೆಯ ಮನಸ್ಸುಗಳನ್ನು ಒಟ್ಟಾಗಿಸುತ್ತ ನಿರಂತರವಾಗಿ ಸಾಗಲಿ ಸರ್.
ಅರ್ಥಪೂರ್ಣ ಕವನಗಳನ್ನು ನೀಡಿದ,ಕತೆಗಳನ್ನು ಕಳಿಸಿದ,ಪ್ರಬಂಧಗಳನ್ನು ಬರೆದು ಪತ್ರಿಕೆಯ ಆಕರ್ಷಣೆಯನ್ನು ಹೆಚ್ಚಿಸುತ್ತಿರುವ ಲೇಖಕ ಮಿತ್ರರಿಗೆ ಓದುಗ ಬಂಧುಗಳಿಗೆ ಆಲೋಚನೆ.ಕಾಂ ಪತ್ರಿಕೆಯ ಬಳಗದ ವಂದನೆಗಳು. ಡಾ.ಶ್ರೀಪಾದ ಶೆಟ್ಟಿ.
ಶುಭವಾಗಲಿ ಸರ್....ಆಲೋಚನೆಗಳು ಪ್ರತಿಯೊಬ್ಬರ ಮನ ತಟ್ಟಲಿ