top of page

ಅಸಂಗತ


ಜಗದ ಜಾತ್ರೆಯ ಗದ್ದಲದಿ

ಕಳೆದು ಹೋಗಿಹೆವು

ಅಪರಿಚಿತ ನಗರದ ಅನಾಮಿಕರಂತೆ

ಕಡಲ ಕಿನಾರೆಯಲಿ ಬಿಗಿದು ಕಟ್ಟಲು

ಮರೆತ ಹಗ್ಗವಿಲ್ಲದೇ ನಿಂತ ದೋಣಿಯಂತೆ

ಪರಿಚಿತರೊಂದಿಗೆ ಸಂವಹನಕೆ

ಸರಳ ಪದಗಳು ದೊರೆಯದೆ

ತಬ್ಬಿಬ್ಬಾಗಿ ಗಲಿಬಿಲಿಗೊಂಡು

ನಿಂತ ಕ್ಷಣಗಳಂತೆ

ಹೇಳಲಿನ್ನೇನೂ ಇಲ್ಲದೆ ಖಾಲಿಯಾದಂತೆ

ಮಧ್ಯಾಹ್ನದ ಉರಿಬಿಸಿಲ ನೀರವ

ಮೌನದ ಆಕಳಿಕೆಯ ಜೊತೆಗೂಡಿದ

ನಿಟ್ಟುಸಿರ ಬಿಸಿಯಂತೆ

ನುಡಿಗಳೆಲ್ಲವೂ ಮೌನದ ಮುಸುಕು

ಹೊದ್ದು ಅಡಗಿರುವಂತೆ

ಹೆಪ್ಪುಗಟ್ಟಿದ ಮೌನಕೆ

ಉಸಿರ ಬಿಸಿತಾಗಿ ಮಾತಿನ ಹೊಳೆ

ಹರಿದೀತೆಂಬ ನಂಬಿಕೆಯಲೇ

ಸಾಗುವುದು ಬಾಳು ಅದೇ ರಾಗ ತಾಳದಲಿ

ಕೈಗೆಟುಕದ ಚಂದಿರನ ತಬ್ಬುವ ಭ್ರಮೆಯಲಿ

ನುಡಿಯ ಬೇಕೆಂದರೆ ಪದಗಳಿಗೆ

ಅರ್ಥವಿರಬೇಕಲ್ಲ

ಬರಿದೆ ಹೇಳುವುದಾದರೂ ಏನು

ಹೇಳಿದ್ದೇ ಹೇಳುವ ಕಿಸಬಾಯಿದಾಸ

ಎಂಬ ನುಡಿಯ ಪುನರುಕ್ತಿಯಂತೆ

ಏನನ್ನೂ ವ್ಯಕ್ತಪಡಿಸದೆಯೂ

ಮೌನದಲಿ ಸ್ಪಂದಿಸುವ ಕೆಲವು

ಸಂವೇದನಾಶೀಲರು ಇರುವರು

ಇನ್ನು ಹಲವರು ಇದ್ದೂ ಇರದಂತವರು

ಅಸಂಗತ ಪದಗಳಂತೆ


ಶಾಂತಲಾ ರಾಜಗೋಪಾಲ್







102 views1 comment

1 Comment


Ramakrishna Gundi
Ramakrishna Gundi
May 07, 2024

ಮುಕ್ತವಾಗದಿದ್ದರೆ..ಈ ಆತ್ಮಗತ ಕೊರಗು ಸದಾ ಸಾಧಿಸುವುದೇ...

Like
bottom of page