ಅಣ್ಣಾ ಅನ್ನೋರು ಹಜಾರ ಮಂದಿ ಅದಾರ
ಆದರೆ ನಿನ್ನಾಂಗೆ ಅಣ್ಣಾ ಆಗೋದು
ಅಷ್ಟು ಸೋವಿ ಅಲ್ಲೊ ಮಾರಾಯ
ಯೋಧ ನಡೆದ ದಾರಿ ಅಷ್ಟು ಸಲೀಸು ಅಲ್ಲ
ಕಲ್ಲು ಮುಳ್ಳು ಕಗ್ಗಾಡು ಚಳಿ ಬಿಸಿಲು ಬೆಂಕಿ
ತುಟಿ ಕಚ್ಚಿ ಉಸಿರ ಬಿಗಿ ಹಿಡಿದು
ಮುನ್ನಡೆವ ಅಸಿಧಾರಾ ವೃತ
ದುರ್ಗಮ ದಾರಿಯನು ಹೆದ್ದಾರಿ ಮಾಡಿ
ಯುದ್ದ ಮಾಡಲು ಜನ ಬಲವ ಕರೆದೊಯ್ದೆ
ಮನೆ ಗೆದ್ದು ಮಾರು ಗೆಲ್ಲುವ ಛಲದಂಕ ಮಲ್ಲ
ರಾಳೆಗಾಣಸಿದ್ದಿ ಗ್ರಾಮಕ್ಕೆ ಜೀವ ಚೈತನ್ಯ ತುಂಬಿ
ಭಾರತದ ಪ್ರತಿ ಹಳ್ಳಿಗೂ ಮಂತ್ರ ದೀಕ್ಷೆ ನೀಡಿ
ಸಿದ್ಧಿಯಾಗಲು ಸತತ ಹೋರಾಟ ನಡೆಸಿದವ
ಆಗ ಪರದೇಶದವರೊಡನೆ ಯುದ್ದ
ಈಗ ದೇಶ ನುಂಗುವ ಭ್ರಷ್ಟಾಚಾರದ
ಮಹಾ ಮಾರಿಯೊಡನೆ ಕೂಟ ಯುದ್ದ
ಹೊಸ ಸೇನೆಯನೆ ಕಟ್ಟಿದೆ
ಹೊಸ ಹುರುಪನು ತುಂಬಿದೆ
ಆಳರಸರ ತಲೆಯ ಮೆಟ್ಟಿ ಜನ ಮನದಿ
ಆತ್ಮ ವಿಶ್ವಾಸವನು ತುಂಬಿದೆ
ಉಪವಾಸ ಕುಳಿತರೂ ಬತ್ತಲಿಲ್ಲ
ಸಾತ್ವಿಕ ಹೋರಾಟದ ಜೀವ ಜಲ
ಪ್ರಜಾ ಪ್ರಭುತ್ವದ ಹೆಸರಿನಲಿ
ಪ್ರಭುಗಳಾದವರಿಗೆ ನಿದ್ದೆ ಹತ್ತಲಿಲ್ಲ
ಸೇನೆ ಬೆಳೆಯುತ್ತ ಹೋಯ್ತು
ಶಾಲೆ ಕಾಲೇಜು ಮನೆಗಳಿಂದ
ದಂಡೆದ್ದು ಬಂದರು ಜನರು
ಸ್ವಂತ ಕೆಲಸವ ಮರೆತರು
ಜನಪಾಲ ಮಸೂದೆ ಬರಲಿ ಎಂದರು
ಕಳ್ಳ ಖದೀಮರಿಗೆ ನಡುಕ ಹುಟ್ಟಿಸಿದರು
ಅಣ್ಣಾ
ಸಂಭವಾಮಿಗೆ ಕಾಯುತ್ತಿದ್ದವರಿಗೆ
ನಿನ್ನ ಮುಖದ ಮಂದಹಾಸ ಕಂಗಳಲಿ
ಹೊರಹೊಮ್ಮಿದ ಆತ್ಮ ವಿಶ್ವಾಸದ
ತಿಂಗಳ ಬೆಳಕು ಜನಪಾಲ ಮಸೂದೆ
ಬಂದು ಬಡವ ಬಲ್ಲಿದನಾಗಲಿ
ಜನಹಿತದ ಶಕ್ತಿ ಅಕ್ಷಯವಾಗಲಿ.
ಶ್ರೀಪಾದ ಶೆಟ್ಟಿ
コメント