ಭಾರತ ಹಾಗೂ ಪಾಕಿಸ್ತಾನ ದೇಶಗಳ ನಡುವೆ ಈ ವರೆಗೂ ಅಖಂಡಿತವಾಗಿ ನಡೆಯುತ್ತಿರುವ ಹೋರಾಟವೆಂದರೆ ‘ಸೀಮೆಯ’ ಬಗ್ಗೆ. ಸೀಮೆ ಇದು ಎರಡು ದೇಶಗಳದ್ದಿರಬಹುದು, ರಾಜ್ಯಗಳದ್ದಿರಬಹುದು. ಆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ಈ ಸೀಮಾ ವಾದ ಕಾಣಿಸಿಕೊಳ್ಳುತ್ತದೆ. ಅಲ್ಲದೆ ಯಕೊಚ್ಚಿತ ಆ ಜಿಲ್ಲೆಯಲ್ಲಿರುವ ಪ್ರತಿ ಹಳ್ಳಿಗಳು, ಆ ಹಳ್ಳಿಗಳ ಪ್ರತಿ ಮನೆಗಳಲ್ಲಿಯೂ ಆ ಮನೆಗಳಲ್ಲಿ ವಾಸಿಸುವ ಜನರ ಮನೋ ಮಂದಿರಗಳಲ್ಲಿ ಸಹ ಈ ‘ಸೀಮಾ’ವಾದ ತಾಂಡವವಾಡುತ್ತಿರುತ್ತದೆ ಎಂದರೆ ಅತಿಶಯೋಕ್ತಿ ಎನಿಸಲಾರದು.
ಮಾನವ ನಡೆಯುವ ನೆಲ, ಕುಡಿಯುವ ನೀರು ಒಂದೇ. ಪ್ರೇಮಿಸುವ ಮನಸ್ಸು, ಮಿಡಿಯುವ ಹೃದಯ ಒಂದೇ ಆಗಿದ್ದರು ಆ ಹೃದಯಗಳಲ್ಲಿ ನೂರಾರು ಭಾವನೆಗಳನ್ನು ಬೆರೆಸಿ ವಿಧ ವಿಧದ ಆಟಗಳನ್ನು ಅಡಿಸುತ್ತಾನೆ ಆ ಬ್ರಹ್ಮ ಎನ್ನುವ ಕಾಲ್ಪನಿಕ ದೇವರು. ಮನುಷ್ಯನ ಪ್ರತಿ ಸಂಬಂಧಗಳಲ್ಲಿಯೂ ಒಂದಾದರೂ ಅಸ್ಪಷ್ಟವಾದ ನೋವಿನ ಸೀಮೆ ಸುತ್ತಿಕೊಂಡಿರುತ್ತದೆ. ಈ ಸೀಮೆ ಎಂಥೆಂಥವರನ್ನೂ ಜಗಳಕ್ಕೆ ಹಚ್ಚಿ ಪ್ರಾಣವನ್ನಾದರೂ ತೆಗೆದುಕೊಳ್ಳಲು ಹಚ್ಚಬಹುದು. ಅಥವಾ ಯಾವ ಜಾತಿ-ಮತ ಪಂಥಗಳ ಸೀಮೆಯನ್ನೆಣಿಸದೆ ಯಾರಿಗಾದರೂ ಪ್ರೇಮ ಪಾಶದಲ್ಲಿ ಸಿಲುಕಿಸಿ ಪ್ರೇಮಪಲ್ಲವಿಯಾಗಿಸಿ ಬಾಳಿಗೆ ಸಂಜೀವಿನಿಯೂ ಆಗಬಹುದು.
ಕರ್ನಾಟಕ-ಮಹಾರಾಷ್ಟ್ರ ರಾಜ್ಯದ ಸೀಮೆಯಲ್ಲಿ ನೆಲೆಸಿರುವ ಸುಮಾರು ಎರಡು ನೂರು ಮನೆಗಳಿರುವ ನಮ್ಮ ಸಣ್ಣ ಹಳ್ಳಿ. ಇಲ್ಲಿ ಅನೇಕ ಜನರು ಮಹಾರಾಷ್ಟ್ರದ ನಾಗರಿಕರಿದ್ದು ಇನ್ನೂ ಕೆಲವು ಜನ ಕರ್ನಾಟಕ ರಾಜ್ಯದ ನಾಗರಿಕತ್ವ ಪಡೆದುಕೊಂಡಿರುತ್ತಾರೆ. ಇನ್ನು ಕೆಲವರಂತೂ ಎರಡೂ ರಾಜ್ಯಗಳ ನಾಗರಿಕತ್ವವನ್ನು ಪಡೆದು ಎರಡೂ ಸರಕಾರದಿಂದ ದೊರೆಯುವ ವಿವಿಧ ಯೋಜನೆಗಳ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಕುರುಡ ಹಿಟ್ಟು ಬಿಸುತ್ತಿರಲು ಹಸಿದ ನಾಯಿಗಳಿಗೆ ಯಾವ ಸೀಮೆಯ ಹಂಗೇನು? ಈ ಹಳ್ಳಿಯಲ್ಲಿ ಕೆಲವು ರಾಜಕೀಯ ನಾಯಕರ ದರಬರವೋ ದರಬಾರ. ಶ್ಯಾಮರಾವ, ಬಾಳಪ್ಪ, ವಿಕಾಸ ಹಾಗೂ ಯಶವಂತ ಈ ಚೌಕಟ್ಟಿನ ಚಮತ್ಕಾರದ ಚಲುವಿನ ಚಿತ್ತಾರವೇ ಇಡೀ ಊರಿಗೆ ಮೋಡಿ ಮಾಡುತ್ತ ತಮ್ಮತ್ತ ಸೆಳೆಯುವಲ್ಲಿ ಸಫಲರಾಗಿದ್ದಾರೆ. ಇವರ ಮಾತುಗಳೆಂದರೆ ಜನರಿಗೆ ವೇದವಾಕ್ಯ. ಶಾಮರಾಯರು ಗ್ರಾಮ ಪಂಚಾಯತ ಅಧ್ಯಕ್ಷರು. ಸುಮಾರು ಹದಿನೈದು ವರ್ಷಗಳಿಂದ ಅವಿರೋಧವಾಗಿ ಆಯ್ಕೆಯಾಗಿ ಊರಿನ ವಿಕಾಸದ ಹೆಸರಿನಲ್ಲಿ ನಾನಾ ಯೋಜನೆಗಳನ್ನು ತಂದು ಕೆಲಸ ಮಾಡಿಯೂತಾನು ಮಾತ್ರ ಶ್ರೀಮಂತನಾಗಿ ಆರಾಮದಾಯಕ ಜೀವನ ನಡೆಸಲು ಸಾಧ್ಯವಾಗದೇ ಒದ್ದಾಡುತ್ತಿದ್ದಾನೆ. ಬಾಳಪ್ಪ ಸರ್ಕಾರಿ ನೋಕರನಿದ್ದು ಚುನಾವಣೆ ಬಂದೊಡನೆ ಮೆಡಿಕಲ್ ರಜೆಹಾಕಿ ತನ್ನ ಸೌಭಾಗ್ಯವತಿಗೆ ಚುನಾವಣೆಗೆ ನಿಲ್ಲಿಸಿ ಕಳೆದ ಹತ್ತು ವರ್ಷಗಳಿಂದ ಗ್ರಾಂ ಪಂಚಯಾತ ಸದಸ್ಯನಾಗಿದ್ದಾನೆ. ಒಂಬತ್ತು ತಿಂಗಳು ಡ್ಯೂಟಿಗೆ ಹೋಗದೆ ಎರಡು ಇನ್ಕ್ರಿಮೆಂಟುಗಳನ್ನು ಕಳೆದುಕೊಂಡ ನೃತದೃಷ್ಠ. ಊರಿಗೆ ಮಂಜೂರಾದ ಪ್ರಾಥಮಿಕ ಶಾಲೆಯ ಕಟ್ಟಡಕ್ಕಾಗಿ ತನ್ನ ಹೆಸನಿನಲ್ಲಿ ಇರುವ ತಂದೆಗಳಿಸಿಟ್ಟ ಎರಡು ಎಕರೆ ಹೊಲವನ್ನು ದಾನಪತ್ರಮಾಡಿಕೊಟ್ಟ ದಾನಶೂರ ಕರ್ಣನ ರೆಕಾರ್ಡ್ ಮುರಿದವನು. ಶಾಲೆಯ ಎಸ್.ಡಿ.ಎಮ್.ಸಿ. ಅಧ್ಯಕ್ಷ ನಾಗಿ ಕಟ್ಟಡವನ್ನು ತಾನೆ ಕಟ್ಟಿಸಬೇಕೆಂದು ಹೊಂಚು ಹಾಕಿದವನು. ಅರ್ಧ ಬಜೆಟಿನಲ್ಲಿ ಶಾಲೆ ಕಟ್ಟಿಸಿ ಅರ್ಧವನ್ನು ಗಿಟ್ಟಿಸಬೇಕೆಂದು ಹುನ್ನಾರದಲ್ಲಿದ್ದವನಿಗೆ ಬಿಲ್ಲು ಬರುವ ತನಕ ಖರ್ಚಿಗೆ ಆದ ಮೊತ್ತ ನೋಡಿ ಹೃದಯಬಡಿತವೇ ನಿಂತುಹೋಯಿತು. ಎಮ್.ಬಿ. ಮಾಡುವ ಇಂಜಿನಿಯರನ್ ಪಾಲು, ಅಧ್ಯಕ್ಷರ ಪರ್ಸೆಂಟ್, ತಾಲೂಕಿನ ಅಧಿಕಾರಿಗಳಿಗೆ ಇನಷ್ಟು ಎಂದು ಶೇ. ೫ ರಂತೆ ಸಾಲ ಮಾಡಿ ಆಯಾ ಅಧಿಕಾರಿಗಳಿಗೆ ಕೊಡಬೇಕಾದ ಪಾಲು ನೀಡಿ ತನ್ನ ಬಿಲ್ಲು ತೆಗೆದುಕೊಂಡು ತಾಳೆಹಾಕಿ ನೋಡಿದಾಗ ತಾನು ಶಾಲೆ ಕಟ್ಟಡಕ್ಕಾಗಿ ಮಂಜುರಾದ ಹಣದ ಎರಡುಪಟ್ಟು ಹಣವನ್ನು ಸಾಲಮಾಡಿಕೊಂಡಿರುವುದು ಗೊತ್ತಾದಾಗ ಬಾಯಿ ಮುಚ್ಚಿಕೊಂಡು ನೌಕರಿಗೆ ಹೊರಟುಹೋದ ಪುಣ್ಯಾತ್ಮ.
ವಿಕಾಸ ಬಿಎಸ್.ಸಿ. ಪಧವಿಧರ. ಇಡೀ ಊರಿನಲ್ಲಿಯೇ ತನ್ನಷ್ಟು ಶಿಕ್ಷಣ ಯಾರೂ ಪಡೆದಿಲ್ಲ ಎಂದು ತಿಳಿದುಕೊಂಡವ. ಕೃಷಿ ಖಾತೆಯಾಗಲಿ, ಊರಿನ ರಾಜಕಾರಣವಾಗಲಿ, ತಾಲೂಕಿನ –ರಾಜ್ಯದ ಎಲ್ಲ ಎಮ್ಎಲ್ಎ, ಎಮ್ಪಿ ಗಳ ಹೆಸರುಗಳನ್ನೂ ಪಕ್ಷದೊಂದಿಗೆ, ಮತದಾರ ಸಂಘಗಳ ಹೆಸರು ಕೂಡ ಮಗ್ಗಿ ಹೇಳುವ ಶಾಲೆಯ ವಿದ್ಯಾರ್ಥಿಯಂತೆ ಹೇಳುತ್ತಾನೆ. ತಾಲೂಕಿನ ಯಾವ ಕೆಲಸವಿದ್ದರೂ ಜನರು ಇವನಲ್ಲಿಗೆ ಬರುತ್ತಾರೆ. ಜಾತಿ ಪ್ರಮಾಣ ಪತ್ರ, ವಾಸಸ್ಥಳ ಆದಾಯಪತ್ರಗಳಂಥಹ ಕೆಲಸಗಳಿಗೆ ಇವನಿಗೆ ಮಾರುಹೋಗದ ವಿದ್ಯಾರ್ಥಿಗಳಿಲ್ಲ. ಯುವಕನಾದ ವಿಕಾಸ ಎಲ್ಲ ಯುವ ವರ್ಗದ ಕಣ್ಮಣಿ. ಊರಿನ ಯುವಾ ನಾಯಕನೆಂದು ಪ್ರತಿ ಕಾರ್ಯಕ್ರಮದಲ್ಲಿಯೂ ಮುಂದೆ ಇದ್ದು ಕೆಲಸ ನಿರ್ವಹಿಸುತ್ತಾನೆ. ಶಾಮರಾಯ ಮತ್ತು ಬಾಳಪ್ಪರ ರಾಜಕೀಯ ರಣರಂಗದ ವಿರೋಧಿ ನಿಲುವುಗಳಿಗೇ ಈತ ಸತ್ಯದ ಪರಿಪಾಲಕ. ಸುಳ್ಳು ಆಗಿ ಬರುವುದಿಲ್ಲ ಇವನಿಗೆ. ಅಷ್ಟೇ ಏಕೆ ಸುಳ್ಳು ಹೇಳುವವರ ಮಣ್ಣಿಗೂ ಬರಲಾರೆನೆಂಬುದು ಈತನ ಸ್ವಂತ ಅಭಿಪ್ರಾಯ. ಆದರೆ ಊರಿನವರ ಅಭಿಪ್ರಾಯವೇ ಬೇರೆ. ಉರಿನಲ್ಲಿ ಇವನಷ್ಟು ಸುಳ್ಳಿನ ಬುರುಡೆ ಬಿಡುವವನನ್ನು ಹಗಲಿನಲ್ಲಿ ದಿಪಹಚ್ಚಿ ಹುಡುಕಬೇಕು ಅಷ್ಟೇ.
ಇನ್ನು ಯಶವಂತ ಈ ತ್ರಿಮೂರ್ತಿಗಳ ಕಾಲಡಿಯಲ್ಲಿ ಒದ್ದಾಡಿಕೊಂಡು ಅಲೆದಾಡುವ ಫುಟಬಾಲಿನಂತೆ ಇವನ ಸ್ಥಿತಿ. ಯಾರು ಏನೇ ಹೇಳಿದರೂ ಬೇಗನೆ ನಂಬಿ ಮೋಸಹೋಗಿ ಬಿಡುವ ಅಮಾಯಕ ರಾಜಕಾರಣಿ. ಇವನಿಂದ ಮೇಲಿನ ಮೂವರಿಗೆ ಲಾಭವೇ ಆಗಿದೆಯೇ ಹೊರಟು ತನ್ನ ಲಾಭದ ಬಗ್ಗೆ ತಲೆ ಕೆಡಿಸಿಕೊಂಡವನಲ್ಲ. ತ್ರಿಮೂರ್ತಿಗಳು ತಮ್ಮ ಕೆಲಸವಿದ್ದಾಗ ಇವನನ್ನು ಹೊಗಳಿ ಉಬ್ಬಿಸಿ ಬಿಡುತ್ತಾರೆ. ಒಂದು ಪಾಕೆಟ್ ಮಾಲಿನ ಮಾಲಿಕ. ಒಂದೆರಡು ಪ್ಯಾಕು ಹೆಚ್ಚಿಗೆ ಹಾಕಿ ಬಿಟ್ಟರೆ ತನ್ನ ಹೃದಯವನ್ನೇ ಕಿತ್ತು ಕೊಡುವ ಉದಾರಿಯಾಗಿ ಬಿಡುತ್ತಾನೆ. ತನ್ನ ಮನೆಯಲ್ಲಿ ಗೊತ್ತಾಗದಂತೆ ಈ ಮೂವರಿಗೆ ಅನೇಕ ಜನರಿಂದ ತನ್ನ ಜವಾಬ್ದಾರಿಯ ಮೇಲೆ ಲಕ್ಷ್ಯ ಲಕ್ಷ್ಯ ಹಣ ಸಾಲ ಕೊಡಿಸಿರುತ್ತಾನೆ. ಮರಳಿ ಬರುವ ಆಶೆಯನ್ನು ಬಿಟ್ಟು ಹುಚ್ಚನಾಗಿ ಊರಿನಲ್ಲಿ ತಿರುಗುತ್ತಾನೆ.
ಈ ಚೌಕೊನವನ್ನು ಬಿಟ್ಟರೆ ಆಧಾರಕ್ಕೆಂದು ಊರಿನ ಹಿರಿಯರಾದ ರಾಮರಾಯರು, ಮುತ್ತಜ್ಜ, ಶಂಕರಪ್ಪ ಮಾಮ, ಧೇನು ಕಾರಭಾರಿ, ನಾಮು ನಾಯಕ ಮತ್ತು ನಾಮು ನಾಯಕನ ಹಿರಿಯ ಮಗ ನಾನು ನಾಯಕ. ಇವರಿಲ್ಲದಿದ್ದರೆ ಊರಿನವರ ಬಂಡಿಸಾಗುತ್ತಿದ್ದರೂ ಆ ಚೌಕಟ್ಟಿನವರ ಬಂಡಿ ಸಾಗದು. ಇವರು ಪ್ರಸನ್ನರಾದರೆ ಮಾತ್ರ ಕೊರಡು ಕೊನರಿದಂತೆ. ಬರಡು ಹಯನಿದಂತೆ. ಅದಕ್ಕಂತೆ ಇವರೆಲ್ಲರ ಕೃಪಾಪ್ರಸಾದದಿಂದ ತಾನೆ ಜನ ಎರಡೂ ರಾಜ್ಯಗಳಿಗೆ ಸುಣ್ಣ ಬಳಿಯುವಲ್ಲಿ ಯಶಸ್ವುಸಾಧಿಸಿದ್ದಾರೆ. ಇರಲಿ...
ಚೈತ್ರ ತಿಂಗಳಿನ ಬಿರು ಬಿಸಿಲು. ಶಂಕರ ಹೊಲಕ್ಕೆ ಬಂದಿದ್ದನು. ತೊಗರಿಯ ರಾಶಿ ಮಾಡಿ ಮುಗಿಸಿದ ಶಂಕರನ ಹೊಲ ಊರಿನ ಹಿಂದೆ ಎರಡು ಕಿಮೀ. ದೂರವಿರುವ ವಾರಿ ಗುಡ್ಡದ ಮೇಲಿತ್ತು. ಮಳೆಗಾಲದಲ್ಲಿ ಹರಿದು ಬಂದ ನೀರಿನಿಂದಾಗಿ ಪೂರ್ವದಲ್ಲಿರುವ ಇಳಕಲ್ಲಿನ ಬಂದಾರೆ ಒಡೆದು ಕೆಳಗಿನ ಸೋಮಪ್ಪನ ಹೊಲದಲ್ಲಿ ನೀರು ಹರಿದ್ದಿತ್ತು. ನೀರಿನೊಂದಿಗೆ ಮಣ್ಣು ಕೂಡ ಹರಿದುಹೋಗಿತ್ತು. ಎಲ್ಲ ಕಡೆಗೂ ರಾಶಿ ಯಾಗಿರುವುದರಿಂದ ನಾಲ್ಕು ಟ್ರಿಪ್ಪು ಕಲ್ಲು-ಗರಸ್ಸುಗಲ್ಲನ್ನು ಹೊಡೆಸಿ ಒದ್ದು ಕಟ್ಟಿಸಬೇಕೆಂದು ಶಂಕರನು ನಿಶ್ಚಯಿಸಿದನು. ಸೋಮಪ್ಪನು ತನ್ನ ಹೊಲದಲ್ಲಿ ಮಣ್ಣು ಹರಿದಿರುವುದರಿಂದ ಮನದಲ್ಲೇ ಹಿಗ್ಗುತ್ತ ಶಂಕರನಿಗೆ ಹೇಳಿದನು,
“ಏನು ಶಂಕರ, ಹೊಲ ನೋಡಲು ಬಂದಿಯಂತ ಕಾಣುತ್ತೆ?”
“ಹೌದು ಸೋಮಾ, ನೋಡು ಮಳ್ಯಾಗ ಹ್ಯಾಂಗ ಹೊಲದಾನ ಮಣ್ಣೆಲ್ಲ ಹರಿದು ಹೊಗೈತಿ. ಒಂದು ಸಿಮೆಂಟ್ ಪೈಪ್ ತಂದು ಕಲ್ಲಿನಿಂದ ಒಡ್ಡು ಕಟ್ಟಿ ಬಿಡಬೇಕೆಂದು ಎನ್ನುತ್ತಿರುವೆ.”
ತನ್ನ ಹೊಲದಲ್ಲಿ ನೀರು ಮತ್ತು ಮಣ್ಣು ಬರುವುದು ನಿಂತು ಹೋಗುವುದಲ್ಲ ಎಂದು ತಿಳಿದು ಸೋಮಪ್ಪನು , “ಇಲ್ಲಿ ಪೈಪು ಹಾಕಬೇಡ, ಶಂಕರ. ದಕ್ಷಿಣದ ಕಡೆಗಿರುವ ಅರಣಿ ಒಡೆದು ಪೈಪು ಹಾಕು. ಇಲ್ಲಿ ಗರಸ್ಸು ಹಾಕಿ ಬಂದಾರೆ ಹಾಕಿ ಬಿಡು.ನನ್ನ ಹೊಲದಿಂದ ಕೂಡ ಎಲ್ಲ ಮಣ್ಣು ಹರಿದು ಹೋಗುತ್ತಿದೆ. ನಿನೆನಾದರೂಇಲ್ಲಿ ಪೈಪು ಬಿಟ್ಟರೆ ನಮ್ಮ ಅಡವಿಯಿಂದ ಹಳ್ಳವೇ ಹರಿಯುತ್ತದೆ.”ಎಂದನು.
“ಇದೇನು ಸೋಮು, ಇದು ಇಳಕಲ್ಲು ಇರುವ ಜಾಗ. ದಕ್ಷಿಣದ ಕಡೆ ದಿನ್ನೆಯ ಮೇಲೆ ನೀರು ಹೇಗೆ ಹರಿಯುತ್ತದೆ?”
“ನನಗೇನು ಗೊತ್ತಿಲ್ಲ ನೀನು ದಕ್ಷಿಣದ ಕಡೇನೋ ಮತ್ತೆ ಯಾವ ಕಡೆಯೋ ಪೈಪು ತೆಗಿ. ಮಾತ್ರ ನಮ್ಮ ಹೊಲದಲ್ಲಿ ಬೇಡ.” ಎಂದು ಸಿಟ್ಟಿನಿಂದ ಸೋಮು ನುಡಿದನು. ದಕ್ಷಿಣದಲ್ಲಿ ಶಂಕರನ ತಮ್ಮರಾಜಪ್ಪನ ಹೊಲವಿರುವುದರಿಂದಸಹೋದರರಲ್ಲಿ ಜಗಳ ಹಚ್ಚುವ ಒಂದು ಉದ್ದೇಶ ಸೋಮಣ್ಣನದ್ದಾಗಿತ್ತು.
“ರಾಜುವಿಗೆ ಒಂದು ಮಾತು ಕೇಳಿ ನೋಡುವೆನು , ಅವನೇನಾದರೂ ಬೇಡವೆಂದರೆ ಇಲ್ಲಿಯೇ ಇಳಿಕಲ್ಲಿನಲ್ಲಿ ನಾನು ಪೈಪು ಹಾಕುವೆ.” ಎಂದು ಹೇಳಿ ಶಂಕರ ಮನೆಗೆ ತೆರಳಿದನು.
ನಾನೇನು ಬೇಕಾಗಿ ಇವನ ಹೊಲದಲ್ಲಿ ನೀರು ಬಿಡುತ್ತಿರುವೆನೇನು? ಮೇಲಿನ ಗುಡ್ಡದಿಂದ ಹರಿದು ಬರುವ ನೀರನ್ನು ಹೇಗೆ ತಾನೆ ತಡಿಯಬೇಕು? ರಾಜುವಿನ ಹೊಲದ ಅರಣೆಯು ಸ್ವಲ್ಪ ಎತ್ತರದಲ್ಲಿದೆ. ಈ ಅರಣಿಯನ್ನುಸಂಪೂರ್ಣ ಮುಚ್ಚಿ ಎತ್ತರಕ್ಕೆ ಪೈಪು ಹಾಕುವುದರಲ್ಲಿ ಯಾವ ಅರ್ಥವಿಲ್ಲ. ನೀರಿನ ಪ್ರವಾಹ ಹೆಚ್ಚು ಬಂದರೆ ಮತ್ತೆ ಇಲ್ಲಿಯೇ ಹೊಲವೆಲ್ಲ ಹಳ್ಳ ತುಂಬಿ ಅರಣಿ ಒಡೆಯುತ್ತದೆ. ನನ್ನ ಮೂಲೆಯಲ್ಲಿ ಯಾವ ಬೆಳೆಯು ಬರದಂತಾಗುವುದಿಲ್ಲವೇ? ಯೋಚಿಸುತ್ತ ಬರಲು ಮನೆ ಹೇಗೆ ಬಂದಿತು ಎಂಬುದೇ ತಿಳಿಯಲಿಲ್ಲ.
ಮಾರನೆಯ ದಿನ ಸೋಮಪ್ಪನಿಂದ ಸುದ್ಧಿ ತಿಳಿದ ರಾಜು ನನ್ನ ಹೊಲದಲ್ಲಿ ನೀರು ಬಿಡಲು ನಾನು ಬಿಡಲಾರೆ. ಮೊದಲು ಎಲ್ಲಿಂದ ಹರಿಯುತ್ತಿತ್ತೋ ಅಲ್ಲಿಂದಲೇ ನೀರು ಹೋಗುವುದು ಒಳ್ಳೆಯದಲ್ಲವೇ? ಎಂದು ಬಾಯಿ ಮಾಡತೊಡಗಿದ್ದನು. ರಾಜು ಬಾಯಿ ಮಾಡುತ್ತಿರುವುದರಿಂದ ಸೋಮು-ಸೋಮುವಿನ ಹೆಂಡತಿಯೂ ಧ್ವನಿ ಕುಡಿಸತೊಡಗಿದ್ದರು. ಯಾರ ಹೊಲದಿಂದ ನೀರು ಹೋಗಬೇಕಾಗಿತ್ತೋ ಆ ಶಂಕರಜ್ಜ ಬದಿಗೆ ಕುಳಿತನು. ಆದರೆ ರಾಜು-ಸೋಮು ತಮ್ಮ ಹೊಲದಲ್ಲಿ ಶಂಕರಜ್ಜನ ನೀರು ಬರಕೂಡದು ಎಂದು ವಾದಿಸತೊಡಗಿದ್ದರು. ಇವರಿಬ್ಬರ ಹೆಂಡರೂ ಗಂಡಸರಿಗೆ ತಕ್ಕ ಹೆಂಡತಿಯರಾಗಿ ಜಗಳಕ್ಕೆ ನಿಂತರು. ಸುತ್ತಮುತ್ತಲಿನ ಜನರೆಲ್ಲಾ ನೆರೆದು ತಮಾಷೆ ನೋಡತೊಡಗಿದ್ದರು. ಬೆಳ್ಳ ಬೆಳ್ಳಗೆ ಟೀಕೆಟಿಲ್ಲದ ಸಿನೇಮಾನೋಡಲು ಸಿಕ್ಕಿತ್ತು ಊರಿನವರಿಗೆ .
ನ್ಯಾಯ ಪಂಚಾಯತಿಗೆ ಹೋಯಿತು. ಮರುದಿವಸ ಎಲ್ಲ ಧಿಮಂತ ವ್ಯಕ್ತಿಗಳ ದಿಂಡು ಶಂಕರ-ಸೋಮು-ರಾಜುವಿನ ಹೊಲದ ಕಡೆಗೆ ಸಾಗಿತು.ಶಾಮರಾಯರು, ಯಶವಂತ, ರಾಮರಾಯ, ಮುತ್ತಜ್ಜ ಮತ್ತು ಇತರ ಜನರನ್ನು ಕರೆದುಕೊಂಡು ಗುಡ್ದವೇರಿ ಇದ್ದ ಹೊಲದ ಪರಿಸ್ಥಿತಿಯ ಅಭ್ಯಾಸವನ್ನು ಮಾಡಿದರು. ಯಾವ ಕಡೆ ನೀರು ಹರಿಯಬಿಟ್ಟರೆ ಒಳ್ಳೆಯದಾಗಬಹುದು? ಎಂಬುದು ಇವರೆಲ್ಲರ ಗಹನವಾದ ವಿಷಯವಿದ್ದಂತಿತ್ತು.
“ಸೋಮು, ನಿನ್ನ ಹೊಲದ ಕಡೆಯೇ ಇಳುಕಲು ಇರುವುದರಿಂದ ಈಗಿರುವ ಜಾಗಿನಲ್ಲಿಯೇ ಶಂಕರ ಪೈಪು ಬಿಡುವುದು ಒಳ್ಳೆಯದು ಎಂಬುದು ನನ್ನ ಅನಿಸಿಕೆ.” ಮುತ್ತಜ್ಜ ನಾಂದಿ ಹಾಡಿದನು.
“ಏನು ಹುಚ್ಚನಿದ್ದಿಯೋ ಮುತ್ತಜ್ಜ ನೀನು, ಇಡೀ ಗುಡ್ಡದ ನೀರು ನನ್ನ ಹೊಲದಾಗ ಬಂದ್ರೆ ನನಗೆ ಹೊಲ ಉಳಿದ್ದಿತ್ತೆನು? ಅಲ್ಲಿ ಅವನ ಖಾಸ ತಮ್ಮ ರಾಜುನ ಹೊಲದಾಗ ಹಾಕೋಕೆ ಹೇಳ್ರಿಯಲ್ಲ, ಅದ್ಯಾಕೆ ಬೇಡ?” ಸೋಮಣ್ಣ ಸಿಟ್ಟಿನಿಂದ ಹೇಳಿದನು.
ಶಾಮರಾಯರು ತಿಳಿಸಿ ಹೇಳುವಂತೆ, “ಸಮಾಧಾನ ಸೋಮಾ, ಶಂಕರನೇನು ಕೊಡದಿಂದ ಸುರುವುತಾ ಇಲ್ಲ ನಿನ್ನ ಹೊಲದಾಗ ನೀರು? ಪ್ರಕೃತಿ ನಿಯಮಕ್ಕ ನಾವು ಹ್ಯಾಂಗ ವಿರೋಧ ಮಾಡಕ ಬರ್ತದ? ಬುನಾದಿಯಿಂದ ಇದೇ ಮಾರ್ಗವಾಗಿ ನೀರ ಬರತ್ತಿಲ್ಲವೇ? ಈಗ ಹೇಗೆ ರಾಜುನ ಹೊಲಕ್ಕೆ ನೀರು ಬಿಡಕ ಬರ್ತದೆ. ಸುಮ್ಮನೆ ಒಪ್ಪಿಕೊ. ನೆರೆ ಹೊರೆಯವರು ಹೇಗೆ ಅಣ್ಣ-ತಮ್ಮರಿದ್ದಂಹಾಗ ಇರಬೇಕು ನೀವ?”
ಆದರು ಸೋಮಣ್ಣನು ಶಾಂತನಾಗದಿದ್ದಾಗ ವಿಕಾಸ ನಡುವೆ ಬಾಯಿ ಹಾಕಿದನು. “ನಾವು ಮೊದಲು ಈ ಸರ್ವೇ ನಂಬರ ತೆಗೆದುಕೊಂಡು ತಹಶಿಲ ಕಚೇರಿಗ ಹೋಗೋಣ. ಅಲ್ಲಿ ನಕ್ಷೆ ನೋಡಿ ನೀರು ಯಾವ ಕಡೆ ಹೋಗುತ್ತದೆ ಎಂಬುದನ್ನು ಚೌಕಾಶಿ ಮಾಡಿ ಆ ಮೇಲೆ ಇವರ ನ್ಯಾಯ ಮಾಡೋಣ ಏನಂತೀರಿ?” ವಿಕಾಸ ತನ್ನ ಜಾಣತನ ತೋರಿಸಿದ.
“ಹೌದು ಹೌದು, ತಹಶಿಲಕಚೇರಿಗೆ ಅರ್ಜಿ ಕೊಟ್ಟು ನೀರು ಹೇಗೆ ಹರಿಯಬೇಕೋ ಗೊತ್ತು ಮಾಡಿಕೊಂಡು ಮುಂದಿನ ವಿಚಾರ ಮಾಡೋಣ, ನಡೆಯಿರಿ ಮನೆಗೆ ಹೋಗೋಣ.” ಸಾಮಾ ನಾಯಕ ನುಡಿದರು.
“ಯಾಕೆ ಸಾಮಾ ನಾಯಕರೇ, ಅಕ್ಕ ದಾರಿ ಕಾಯುತ್ತಿದ್ದಾಳೆಯೇ ಮನೆಯಲ್ಲಿ?” ಧೇನು ಕಾರಭಾರಿ ಹಂಗಿಸಿದ್ದಾಗ ಎಲ್ಲರೂ ಖೊಳ್ಳಂತ ನಗತೊಡಗಿದ್ದರು.
“’ಹಾಗೇನಿಲ್ಲ ತಾಲೂಕಿಗೆ ಹೋಗೋಕೆ ತಡವಾಗುತ್ತದೆಯಲ್ಲ ಅದಕ್ಕೆ....” ಸಾಮಾ ಸಾವರಿಸಿಕೊಂಡನು. ಎಲ್ಲರೂ ಮನೆಗೆ ನಡೆದರು.ಗುಂಪು ಶಂಕರಜ್ಜ-ಸೋಮಣ್ಣರನ್ನು ಯಾವ ರೀತಿಯಲ್ಲಿ ಬುಟ್ಟಿಗೆ ಹಾಕಿಕೊಂಡರೆ ತಮಗೆ ಲಾಭವಾಗುವುದೆಂಬುದರ ಬಗ್ಗೆ ಲೆಕ್ಕ ಹಾಕುತ್ತ ಕಾಲು ಕಿತ್ತತೋಡಗಿದ್ದರು.
ದಿನೇಶ ಠಾಕುರದಾಸ ಚವ್ಹಾಣ
Comentários