ಸಂತನೆಂದರೆ ಹೀಗಿರಬೇಕು
ನಡೆದಾಡುವ ದೇವರಂತಿರಬೇಕು....
ಸಿದ್ಧಗಂಗೆಯ ಒಡಲು
ತಾಯಿಯ ಮಮತೆಯ ಮಡಿಲು
ಶಿವಕಾರುಣ್ಯವೇ ಧರೆಗಿಳಿಯತು
ಹೆಗಲಲ್ಲಿ ಹೊತ್ತು ಬಂದನು
ಪ್ರೀತಿ-ಮಮತೆ ವಾತ್ಸಲ್ಯಗಳ ಮೂಟೆ
ಇಟ್ಟನು ಅಲ್ಲಿ ಸಿದ್ಧಗಂಗೆಯಲ್ಲಿ.
ಹಸಿದ ಒಡಲಿಗೆ ಅನ್ನವಿಕ್ಕಿದ
ಜ್ಞಾನ ತೃಷೆಗೆ ಅಕ್ಷರ ನೀಡಿದ
ಬಡವ - ಬಲ್ಲಿದ ಬೇಧವಿಲ್ಲದೆ
ಎಲ್ಲರನ್ನೂ ತನ್ನವರೆಂದೆ ತಿಳಿದ
ಮಾನವತೆ ಮೆರೆದ ಮಹಾಯೋಗಿ
ದೀನ- ದಲಿತರ ಉದ್ಧಾರಕ.
ಸಂತನೆಂದರೆ ಹೀಗಿರಬೇಕು
ನಡೆದಾಡುವ ದೇವರಂತಿರಬೇಕು....
ಕಾಯಕವೇ ಕೈಲಾಸವೆಂದ
ನುಡಿದಂತೆ ನಡೆದ ದೇವಮಾನವ
ಶರಣರ ತತ್ವದಂತೆ ಬಾಳಿದ ವಿರಾಗಿ
ಜಗದಗಲ ಮುಗಿಲಗಲ
ಮೊಳಗುತಿದೆ ನಿನ್ನ ಕೀರ್ತಿ
ಮನುಕುಲಕೆ ದಾರಿದೀಪವಾದ.
ಹೊರಟನಲ್ಲಿಗೆ ಶಿವನಿರುವಲ್ಲಿಗೆ
ಮತ್ತೊಮ್ಮೆ ಧರೆಗಿಳಿದು ಬಾ
ನಿನ್ನ ಅಗಲಿಕೆಯಿಂದ ಗುರುವೇ
ಮೂಕವಾಯ್ತು ಭೂಮಿಯು
ಈ ನೆಲದ ಸಿರಿಯೇ ಅವತರಿಸು
ಆಲಿಸಲು ಇಳೆಯ ಕರೆಯ.
ಸಂತನೆಂದರೆ ಹೀಗಿರಬೇಕು
ನಡೆದಾಡುವ ದೇವರಂತಿರಬೇಕು....
- ಸುಭದ್ರಾ ಹೆಗಡೆ.
ಹೊನ್ನಾವರ ತಾಲೂಕಿನ ಕೆರೆಕೋಣ ಗ್ರಾಮದ ಸುಭದ್ರಾ ಹೆಗಡೆಯವರು ತಮ್ಮ ಶಿಕ್ಷಣವನ್ನು ಅನುಕ್ರಮವಾಗಿ ಕೆರೆಕೋಣ,ಅರೆಅಂಗಡಿ,ಹೊನ್ನಾವರ ಮತ್ತು ಕ.ವಿ.ವಿ. ಧಾರವಾಡದಲ್ಲಿ ಮುಗಿಸಿದರು.ನಂತರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕಿಯಾಗಿ,ಪ್ರಾಂಶುಪಾಲರಾಗಿ ಸೇವಾ ನಿವೃತ್ತಿ ಹೊಂದಿದರು.ಹೈಸ್ಕೂಲ ದಿನಗಳಲ್ಲಿಯೆ ಉತ್ತಮ ವಾಗ್ಮಿ ಮತ್ತು ಚರ್ಚಾಪಟುವಾಗಿದ್ದರು.ಓದು ಮತ್ತು ಬರವಣಿಗೆಯಲ್ಲಿ ಆಸಕ್ತರಾಗಿದ್ದ ಅವರ ಕವಿತೆ,ಕತೆ,ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಬೆಳಕು ಕಂಡಿವೆ.ಉತ್ತರಕನ್ನಡದ ಕವನಗಳು,ನಾಗರೀಕ,ಶೃಂಗಾರ ಮಾಸಪತ್ರಿಕೆ,ಮುಂಗಾರು ಪತ್ರಿಕೆಯಲ್ಲಿ ಅವರ ಕವನ ಮತ್ತು ಬರಹಗಳು ಪ್ರಕಟವಾಗಿವೆ.ಈಗ ಅವರು ಅಹ್ಮದಾಬಾದ್ ನಲ್ಲಿ ಮಗನ ಜೊತೆ ವಾಸವಾಗಿದ್ದಾರೆ. ಸಂಪಾದಕ
Comments