ಈ ಸಂಜೆಯೆಂದರೆ
ಮಾಗುವ ಬೆಳಕ ಕೊಳ್ಳಲು
ಬರುವ ಚಂದ್ರನ ಅಂಗಡಿ,
ರೈತನ ದುಡಿಮೆ ಸಾಕೆನ್ನುವ
ಕತ್ತಲಾಗುತ್ತಾ ಕರೆಗಂಟೆ ಬಾರಿಸೋ ಗಡಿಯಾರ.
ಹಕ್ಕಿ ಹಾರುವ ರೆಕ್ಕೆಯಲ್ಲಿ
ಮಧ್ಯಾಹ್ನದಲಿ ಕದ್ದಿಟ್ಟ
ಬೆಳಕನ್ನ ಗೂಡಿಗೆ ಕೊಂಡೊಯ್ಯುವ ನಿತ್ಯ ದಿನಚರಿ.......
ಮಕ್ಕಳು ಮಗ್ಗಿ ಬರೆದು
ಅಮ್ಮನ ಕೊನೆಯ ಜೋರುದನಿಯ ಕೂಗಿಗೆ
ಬಚ್ಚಲು ಮನೆಗೊಡುತ
ಬಿಸಿ ನೀರಲ್ಲೂ ತಪ್ಪು ಹುಡುಕುತ ನೀರು ಬೆರೆಸಲು ಅಮ್ಮನ ಮೇಲೆ ಸಣ್ಣ ಸೇಡು ತೀರಿಸಿಕೊಳ್ಳುವ ಮಹಾಮಂಟಪ......
ಮೀನಿಗೆ ಹೋದ ಯಜಮಾನನ ದಾರಿ
ಕಾಯುತ ದಣಪೆ ಮೇಲೆ
ಬೆಕ್ಕನ್ನು ಕುಂಟು ತಪಸ್ಸಿಗೆ ಕುಳಿಸುವ ರಂಗಸ್ಥಳ....
ಕೋಳಿಗಳು ಕೊನೆಯ
ಎರೆಗೆ ಆಸೆ ಪಡುತ
ಗೂಡಿನ ಬಾಗಿಲಲ್ಲೆ
ಪಟ್ಟಂಗ ಹೊಡೆವ ಮಹಾಮನೆ....
ಡ್ಯೂಟಿ ಮುಗಿಸಿ ಮನೆಗೊರಟ ಸೂರ್ಯ ಒದ್ದೆಗೈಯಿಂದ ಚಂದ್ರನಿಗೆ ಮಿಸ್ ಕಾಲ್
ಕೊಡುವ ಕೆಲಸದಾಟ...
ಯಾರಿಗೊ ದಿನದ ಸಂಬಳ ಜಮವಾಗುವ, ಮತ್ಯಾರಿಗೊ
ದಿನದ ಕೂಲಿ ದಿನಸಿ ಅಂಗಡಿಯಲ್ಲಿ ಚಿಲ್ಲರೆಯಾಗಿ
ರೂಪಾಂತರವಾಗುವ ಮತ್ಯಾರಿಗೋ ರಾತ್ರಿ ಊಟದ
ವ್ಯವಸ್ಥೆಗೆ ಅಣಿಗೊಳಿಸಬೇಕಾದ
ನಿತ್ಯದ ಸತ್ಯದ ಮುಗಿಯದ ದಿನಚರಿ......
✍ಮೋಹನ್ ಗೌಡ ಹೆಗ್ರೆ
Comments