ಯಾವ ಕಾಲದ ಮೂಟೆ
ಈಗ ಹೊತ್ತು ತಂದಿದ್ದೀರಿ?
ನೋಡಿ ಆ ನಿಮ್ಮ ಗೋಣಿತಾಟು
ಎಳೆಗಳೆಲ್ಲ ಹರಿದು
ಆ ಚಿಂದಿ ಹಳೆಯ ಕೊಳೆಯ
ಅಪರಿಮಿತ ಸೂಚ್ಯಂಕ!
ಅರರೆ...ಮೂಳೆಗಳ ಮೂಟೆ!
ಯಾವ ತಲೆಮಾರಿನ ಸ್ವತ್ತು --
ತಾತನವೋ
ಮುತ್ತಾತನವೋ
ಅಥವಾ ಇನ್ನೂ, ಇನ್ನೂ...?
ಹಾಗೆ ಎಷ್ಟು ದೂರದಿಂದ ಬಂದಿರಿ
ಎಂದು ಹೊರಟಿರಿ
ದಗಂತದಿಂದ ಅತ್ತತ್ತಲೋ
ಅಥವಾ
ಅತಳದಿಂದಲೇ ಏರಿ ಬಂದಿರೋ...!
ಹೌದು, ಇಲ್ಲೇಕೆ ತಂದಿದ್ದೀರಿ
ಹೊತ್ತು ಈ ಕಾಲಕ್ಕೆ
ವಿಲೇವಾರಿ ಎಂತು ಎಲ್ಲಿ!
ದೊರಕಲಿಲ್ಲವೇ ತಾವು ಎಲ್ಲೂ
ಅಥವ ದಾರಿತಪ್ಪಿಲ್ಲವೋ ಎಲ್ಲೂ!
ನಿಮಗೂ ಅಂದಿನ
ಭಗೀರಥನ
ಮೋಕ್ಷ ವ್ಯಾಮೋಹವೋ ಹೇಗೆ ಅದೂ ಬರಿದೆ ಮೂಳೆ ಮೂಟೆ!
ಆದರೀಗಿಲ್ಲಿ ಅದು ಹಳೇಪೇಪರ್
ಲೆಕ್ಕಕ್ಕೂ ಇಲ್ಲ!
ನೀವು ಎಲ್ಲಿಂದೆಲ್ಲಿ
ಯಾವ ಯಾವ ದಿಕ್ಕಿನಲ್ಲಿ
ನಡೆದರೂ ಇಲ್ಲೀಗ ಎಲ್ಲೆಲ್ಲೂ ನವ್ಯ
ನವ್ಯ ಭವ್ಯ!
ಮತ್ತು ಕಲಸುಮೇಲೋಗರ
ಅಸಹ್ಯ...!
ಆಯ್ತು...ನೀವು ಬಂದಿದ್ದೀರಿ
ಮೊದಲು ಹೆಗಲ ಹೊರೆ ಇಳಿಸಿರಿ...
ನಾವು ಇಲ್ಲಿಯ ಇಂದಿನವರು
ಶೋಧಿಸಿ ಬರುವೆವು...
ಅಂಥ ಜಾಗವೊಂದಿದ್ದರೆ
ಹೂತು ಬಿಡೋಣ
ಸರಿರಾತ್ರಿಯಲ್ಲಿ
ಇಲ್ಲ ಸುಟ್ಟು ಊದಿಬಿಡೋಣ
ಎಲ್ಲ ದಿಕ್ಕಿಗೂ ಬೂದಿ
ಸುಳಿವು ಎತ್ತೆತ್ತಲೂ ಸಿಗದಷ್ಟು
ಗುಮಾನಿಗೂ ಒಂದಿಷ್ಟು...
- ಡಾ. ಅರಕಲಗೂಡು ನೀಲಕಂಠ ಮೂರ್ತಿ
Comments