[ಮಿನಿ ಕಥೆ ]
ಆಫೀಸಿನ ಕೆಲಸಗಳ ಒತ್ತಡದಿಂದ ಈ ಭಾನುವಾರವಾದರೂ ತುಸು ವಿರಾಮ ಸಿಗಬಹುದೆಂದು ಮುಂಜಾನೆ ಚಹಾ ಕುಡಿದು ಖುರ್ಚಿ ಮೇಲೆ ಕುಂಡೆಯೂರುತ್ತಲೂ ಗಿರಜಕ್ಕನ ಪೋನ್ ಬಂದಿತ್ತು. ಭಾವನ ಕೋಣೆಯಲ್ಲಿನ ಕಾಗದ ಪತ್ರ ನೋಡಿ ವಿಲೇವಾರಿ ಮಾಡಿಕೊಡು ಮಾರಾಯಾ ಎಂಬುದು ಅವಳ ಒತ್ತಾಯ.. ಭಾವ ತೀರಿಕೊಂಡು ಇನ್ನೂ ತಿಂಗಳಾಗಿಲ್ಲ, ಹೆಂಡತಿ ಗಿರಿಜಕ್ಕನಿಗೆ ಅವನ ಕೋಣೆ ಸ್ವಚ್ಛ ಮಾಡುವ ಅವಸರ ಅಷ್ಟೆಂತದು ಎಂದು ಮನಸ್ಸಿನಲ್ಲೇ ಹೇಳಿಕೊಳ್ಳುತ್ತ ಅಂಗಿ ಏರಿಸಿ ಭಾವನ ಮನೆಯತ್ತ ಹೆಜ್ಜೆ ಹಾಕಿದೆ.
ನಮ್ಮಮನೆ ಕೇರಿಯ ಕೊನೆಯ ಮನೆ ಭಾವನದು. ಖರೆ ಹೇಳಬೇಕೆಂದರೆ ಅವನು ನಮಗೆ ಸಂಬಂಧದಲ್ಲಿ ಭಾವನಲ್ಲ. ಆದರೂ ಇಡೀ ಊರಿನಲ್ಲಿ ಹೊನ್ನಾವರ ಪೇಟೆಯೊಂದನ್ನು ಬಿಟ್ಟರೆ ಎಲ್ಲರಿಗೂ ಅವನು ಭಾವನಾಗಿದ್ದ. ಪೇಟೆಯಲ್ಲಿ ಗಣಪತಿ ಜೋಯೀಸರೆಂದೇ ಪ್ರಸಿದ್ಧಿ ಪಡೆದಿದ್ದ, ಗಿಡ್ಡ ದೇಹದ, ದಪ್ಪ ಹೊಟ್ಟೆಯ, ಅಗಲ ಕಿವಿಯ, ಸೂಕ್ಷ್ಮ ಕಣ್ಣಿನ ಅವನ ಅಂಗಾಂಗಗಳು ಹಾಗೆಯೇ ಇದ್ದವೆನ್ನಿ. ಪಿತ್ರಾರ್ಜಿತ ಎರಡೆಕರೆ ಒಳ್ಳೆಯ ತೋಟವನ್ನು ಬಿಟ್ಟರೆ ಭಾವ ಅಂತಹ ದೊಡ್ಡ ಜಮೀನುದಾರರ ಸಾಲಿಗೆ ಸೇರಿದವನಲ್ಲ. ಅಪ್ಪನಿಗೆ ಒಬ್ಬನೇ ಮಗ ಜೊತೆಗೆ ಸಂತಾನ ಭಾಗ್ಯ ಇಲ್ಲದಿರುವುದರಿಂದ ಜಮೀನಿನ ಉತ್ಪನ್ನ ಇಬ್ಬರಿಗೆ ಸಾಕಾಗುತ್ತಿತ್ತು. ಭಾವನಿಗೆ ಮೊದಲಿನಿಂದಲೂ ಸಮಾಜ ಸೇವೆಯ ಗೀಳು. ದಿನಾಲೂ ಒಂದಿಲ್ಲೊಂದು ಕೆಲಸ ಹುಡುಕಿಕೊಂಡು ಹೊನ್ನಾವರ ಪೇಟೆಯಲ್ಲೇ ಇರುತ್ತಿದ್ದ. ತಾಲೂಕಿನ ಯಾರೊಬ್ಬರು ಹೊಸ ಅಧಿಕಾರಿಗಳು ಬಂದರೂ ತನ್ನನ್ನು ಒಬ್ಬ ಸಮಾಜ ಸೇವಕನನ್ನಾಗಿ ಪರಿಚಯಿಸಿಕೊಂಡು ಮನೆಗೆ ಆಮಂತ್ರಿಸುತ್ತಿದ್ದ. ಆದರೆ ಮನೆಯ ಯಾವ ಕೆಲಸಕ್ಕೂ ಸಹಕರಿಸದ ತನ್ನ ಗಂಡನನ್ನು ಅವನ ಈ ಹಾಳು ಉಸಾಬರಿಗೆ ಬಿಟ್ಟು ಎಲ್ಲವನ್ನೂ ತಾನೇ ನಿಭಾಯಿಸುವಷ್ಟು ಗಟ್ಟಿಗಿತ್ತಿಯಾಗಿದ್ದಳು ಗಿರಿಜಕ್ಕ. ಮನೆಗೆಲಸಕ್ಕಾಗಿ ಇರುವ ಮಾದೇವ ಒಬ್ಬನಿದ್ದರೆ ಸಾಕು ಎನ್ನುತ್ತಿದ್ದಳು. ಗಂಡನ ಆಮಂತ್ರಣದ ಮೇರೆಗೆ ಮನೆಗೆ ಬಂದು ಹೋಗುವ ಅಧಿಕಾರಿಗಳಿಗೆಲ್ಲ ರುಚಿಯಾದ ಊಟೋಪಚಾರದ ಜೊತೆಗೆ ಬಿಳಿ ನಗು, ಬಳಕು ಸೊಂಟ ತೋರಿಸಿ ಮತ್ತೆ ಮತ್ತೆ ಬರುವಂತೆ ಆಸೆ ತೋರಿಸುವ ಮೂಲಕ ಗಂಡನ ವ್ಯವಹಾರಕ್ಕೆ ಅಪ್ರತ್ಯಕ್ಷವಾಗಿ ನೆರವಾಗಿದ್ದಳು.
ಮಧ್ಯಾಹ್ನದ ವರೆಗೂ ಭಾವನ ಖಾಸಗಿ ಕೋಣೆಯಲ್ಲಿನ ಹಾಳು ಮೂಳೆ ಕಾಗದ ಪತ್ರಗಳ ವಿಂಗಡಣೆಯ ಕೆಲಸ ನಡೆಸಿದೆ. ಕೋಣೆಯ ಮೂಲೆಯಲ್ಲಿಅವನ ಅದೆಷ್ಟೋ ಕಾಗದ ಪತ್ರಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಷ್ಟೇ ಏಕೆ ಅವನ ಇಡೀ ಕೋಣೆ ಅವನು ಬದುಕಿದ್ದಾಗ ಹೇಗಿತ್ತೋ ಹಾಗೆಯೇ ಇತ್ತು. ಅದೇ ಎಣ್ಣೆ ಕಮಟು ವಾಸನೆ, ಅವನು ಒರಗಿಕೊಳ್ಳುತ್ತಿದ್ದ ಬೂರಸಲು ಹಿಡಿದ ಲೋಡು, ಮುಗ್ಗಿದ ಲುಂಗಿ, ಮಾಸಿದ ಧೋತರ ಇತ್ಯಾದಿ, ಇತ್ಯಾದಿ…
ಗಿರಿಜಕ್ಕನಂತೂ ಕೋಣೆಯ ಬೀಗ ತೆಗೆದುಕೊಟ್ಟು ಒಂದು ಸಿಂಗಲ್ ಚಹಾ ಕೊಟ್ಟು ಈಗ ಬಂದೆ ಎಂದು ಮಾದೇವನ ಜೊತೆ ಗೋವೆ ಹಕ್ಕಲಿಗೆಂತ ಹೋದವಳ ಪತ್ತೆಯೇ ಇಲ್ಲ. ಕೆಲವರ ಆಧಾರ್ ಕಾರ್ಡು, ರೇಷನ್ ಕಾರ್ಡು, ವೃದ್ಧಾಪ್ಯ ವಿಧವೆ ಪೆನ್ಶನ್ ಅರ್ಜಿಗಳು ಟಿಂಬರ್ ಅರ್ಜಿ ಎನ್ನುತ್ತ ಹೊರೆಯೇ ಅಲ್ಲಿತ್ತು. ಮ್ಯಾಟ್ರಿಕ್ ವರೆಗಷ್ಟೇ ಓದಿಕೊಂಡಿದ್ದ ಭಾವ ರೆವಿನ್ಯು, ಪೊಲೀಸು, ಅರಣ್ಯ ಮುಂತಾದ ಇಲಾಖೆಗಳಲ್ಲಿ ಚಾಲ್ತಿಯಲ್ಲಿರುವ ಭಾಷೆಯ ಮಜಕೂರಿನಲ್ಲಿಯೇ ಬರೆಯುವುದನ್ನು ರೂಢಿಸಿಕೊಂಡಿದ್ದ. ಇವನ ಬ್ರಹ್ಮ ಲಿಪಿ ತಿಳಿಯದಿದ್ದರೆ ಸ್ವತಃ ಅಧಿಕಾರಿಗಳೇ ಕರೆಸಿ ಕೇಳುತ್ತಿದ್ದರು. ತುಸು ವಯಸ್ಸಾದ ಅಧಿಕಾರಿಗಳು ಅವನನ್ನು ಗೌರವದಿಂದ “ಜೋಯಿಸರೇ” ಎಂದು ಕರೆದರೆ ಇತ್ತೀಚೆಗೆ ಸರಕಾರಿ ಖೋಟಾದ ಮೇಲೆ ಬಂದ ಎಳೆಯ ಅಧಿಕಾರಿಗಳು “ ಏ ಭಟ್ಟಾ, ಏನ್ ಬರದಿದ್ದೀ, ನಿನ್ ತಲೀ” ಎಂದು ಅಪಹಾಸ್ಯ ಮಾಡುತ್ತಿದ್ದರು.
ಪದವಿ ಮುಗಿಯುತ್ತಲೇ ನಾನು ಒಂದೆರಡು ವರ್ಷ ಅವನಿಗೆ ಸಹಾಯ ಮಾಡುತ್ತಿದ್ದೆ. ಬಸ್ಸು ಸರಿಯಾದ ಸಮಯಕ್ಕೆ ಬರುವದಿಲ್ಲವೆಂದು ಭಾವ ಒಂದು ಸೆಕೆಂಡ್ ಹ್ಯಾಂಡ್ ಬಜಾಜ್ ಚೇತಕ್ ಸ್ಕೂಟರ್ ಕೊಂಡಿದ್ದ. ಆದರೆ ಅವನಿಗೆ ಓಡಿಸಲು ಬರುತ್ತಿರಲಿಲ್ಲ. ನಾನು ಓಡಿಸಿದರೆ ಆತ ಗಾಂಭೀರ್ಯದಿಂದ ಕೂಡ್ರುತ್ತಿದ್ದ. ಮಿಶನ್ನಿನಲ್ಲಿ ಹೊಡೆಸಿದ ತಲೆಗೊಂದು ಕಪ್ಪು ಟೋಪಿ, ನೊಸಲ ಮಧ್ಯ ಕೆಂಪು ಕುಂಕುಮ, ಚಡ್ಡಿ ಹಾಕದ ಅಡ್ಡ ಕತ್ತರಿ ಹಾಕಿ ಕಟ್ಟಿದ ಬಿಳಿ ಧೋತರ, ಗಂಜಿ ಪರಕಿನ ಮೇಲೆ ಬಿಳಿಯ ಉದ್ದ ಕೈ ಅಂಗಿಯ ದಿರಿಸಿನಲ್ಲಿ ಸುಂದರ ರಾವಣನಂತೆ ಕಾಣುತ್ತಿದ್ದ ಭಾವ. ಅವನೆಂದೂ ಪಂಚಾಯತಿ ರಾಜಕಾರಣಕ್ಕೆ ಬಿದ್ದವನಲ್ಲ. ಜನರ ಕೆಲಸ ಮಾಡಿಸಿಕೊಟ್ಟು ಇಲಾಖೆಯಲ್ಲಿ ಕೈ ಬಿಸಿ ಮಾಡಿ ತನ್ನ ತುಸು ಹಣದಲ್ಲಿ ನನಗೂ ನೀಡುತ್ತಿದ್ದ .
ನನಗೆ ಒಂದು ಸರಕಾರಿ ಕೆಲಸಕ್ಕೆ ಸಂದರ್ಶನಕ್ಕೆ ಕರೆ ಬಂದಿತ್ತು ಭಾವನಿಗೆ ಹೇಳಿದೆ. ಹಾಂ ನನಗೊಬ್ಬರ ಗುರ್ತ ಇದೆ, ಹೋಗುವಾಗ ನಿನಗೊಂದು ಪತ್ರ ಕೊಡುತ್ತೇನೆ. ಒಯ್ದು ಕೊಡು. ಅಂದಿದ್ದ ಅವಸರದಲ್ಲಿ ಪತ್ರ ಒಯ್ಯುವುದನ್ನು ಮರೆತಿದ್ದೆ. ಆದರೂ ಭಾವ ಅಲ್ಲಿ ಒಂದು ಮಾತು ಹೇಳಿಟ್ಟಿರಬೇಕೆಂದುಕೊಂಡೆ. ನನಗೆ ಸರಕಾರಿ ನೌಕರಿ ಸಿಕ್ಕಿತ್ತು. ಆ ಖುಷಿಯಲ್ಲಿ ಮಂಜುನಾಥ ಕೆಫೆಯಿಂದ ಅವನಿಗೆ ಮೈಸೂರು ಪಾಕ [ಕಡಿ] ಮತ್ತು ಗಿರಿಜಕ್ಕ.ನಿಗೆ ಹೂವಿನ ಬಾಳನಿಂದ ಎರಡು ಮೊಳ ಭಟ್ಕಳ ಮಲ್ಲಿಗೆ ಒಯ್ದು ಕೊಟ್ಟು ಇಬ್ಬರ ಕಾಲಿಗೂ ಎರಗಿದೆ. ಆಗ ಭಾವ, “ಒಹೋ ! ನಿಂಗೆ ಸಿಕ್ಕೇ ಹೋಯಿತಾ!” ಎಂದು ಕೇಳಿದ್ದ.
ಸುಸ್ತು ಎನಿಸಿ ಈ ಕೆಲಸ ಇಷ್ಟಕ್ಕೇ ನಿಲ್ಲಿಸಿ ಮುಂದಿನ ರವಿವಾರಕ್ಕೆ ಬಂದರಾಯಿತು ಎಂದು ಅಂದುಕೊಂಡೆ. ಪಾಪ, ತಾನು ಸಾಯುತ್ತೇನೆಂದು ತಿಳಿಯುವ ಮೊದಲೇ ಭಾವ ಒಂದು ದಿನ ಕುಸಿದು ಬಿದ್ದವ ಏಳಲೇ ಇಲ್ಲ. ಅಂದು ಅವನ ಶಿಷ್ಯ ವರ್ಗ ತುಂಬಾ ಸೇರಿತ್ತು. ಹೊನ್ನಾವರದಿಂದಲೂ ಒಂದೆರಡು ಸಾಹೇಬರು ಬಂದಿದ್ದರು .ಭಾವನ ಪ್ರಭಾವ ನೋಡಿ ನನಗೆ ಅವನ ಬಗ್ಗೆ ಅಬಿವ್ಯಕ್ತಿಸಲಾಗದ ಹೆಮ್ಮೆ ಮೂಡಿತ್ತು. ಅಷ್ಟೊತ್ತಿಗೆ ಭಾವನ ಖಾಸಾ ಚೀಲವೊಂದು ಕಣ್ನಿಗೆ ಬಿತ್ತು. ಅದನ್ನು ನೋಡಿ ಮುಗಿಸಿ ಬೀಡೋಣವೆಂದು ಬಿಚ್ಚಿದೆ. ಚಲಾವಣೆ ಮುಗಿಸಿದ ಕೆಲವು ನೋಟುಗಳು, ದೇವರ ಭಂಡಾರದ ಕೆಲವು ಪುಡಿಕೆ, ಉಪಚಾರ್ ಅಡಿಕೆ ಚೀಟು, ತನ್ನ ಸ್ವಯಂವರದ ಕಪ್ಪು ಬಿಳುಪು ಫೋಟೋ, ಗಿರಿಜಕ್ಕನ ಪ್ರಾಯದ ಕಾಲದ ವಿವಿಧ ಭಂಗಿಯ ಫೋಟೋ, ಹೀಗೆ ತರೆವಾರಿ ವಸ್ತುಗಳ ಖಣಜವೇ ಅಲ್ಲಿತ್ತು.
ಇದ್ದಕಿದ್ದಂತೆ ಅಂಟು ಹಚ್ಚಿ ಬಂದು ಮಾಡಿದ, ಹೆಸರು ಬರೆಯದ ಪುಟ್ಟ ಲಕೋಟೆ ನನ್ನ ಕಣ್ಣಿಗೆ ಬಿತ್ತು. ಅದನ್ನು ಎತ್ತಿ ಆ ಕಡೆ ಬೀಸಾಕೋಣವೆಂದು ಕೊಂಡೆ. ಆದರೆ ಏನೋ ಕುತೂಹಲ ಹುಟ್ಟಿತು. ಅದರಲ್ಲಿ ಏನಿರಬಹುದು? ಅದನ್ನು ಎತ್ತಿ ನೋಡಿದೆ. ಇದರಲ್ಲೇನಾದರೂ ಭಾವ ವಿಲ್ಲು-ಗಿಲ್ಲು ಏನಾದರೂ ಬರೆದಿರಬಹುದೇ ? ಪಿತ್ರಾರ್ಜಿತ ಆಸ್ತಿ ಬಿಟ್ಟರೆ ಅವನ ಬೊಜ್ಜ,! ಸ್ವಯಾರ್ಜಿತ ಎಂಬುದು ಏನೂ ಇಲ್ಲ- ಎಂಬುದು ನೆನಪಿಗೆ ಬಂದು ಒಳಗೊಳಗೆ ನಗು ಬಂತು. ಒಡೆದೇ ನೋಡೋಣ ಎಂದೆನಿಸಿ ಲಕೋಟೆಯನ್ನು ಬಿಡಿಸಿದೆ. ಒಳಗಡೆ ಮಡಚಿದ ಸಣ್ಣ ಪತ್ರವೊಂದಿತ್ತು. ತೆರೆದು ಓದಿದೆ. ಅವನದೇ ಕೋಳಿಕಾಲಿನ ಲಿಪಿಯಲ್ಲಿ ಬರೆದ ಮೂರಕ್ಷರದ ಸಾಲುಗಳು. ಸಾಹೇಬರೇ ಎಂಬ ಸಂಭೋದನೆಯೊಂದಿಗೆ ಪತ್ರ ಪ್ರಾರಂಬವಾಗಿತ್ತು. ಮುಂದಿನ ಒಕ್ಕಣೆ- ಈ ಚೀಟಿ ತಂದ ಅಭ್ಯರ್ಥಿಯ ಚಾರಿತ್ರ್ಯ ಸರಿ ಇಲ್ಲ. ಅವನ ಆಯ್ಕೆ ಸೂಕ್ತವಲ್ಲ ಎಂಬುದು ನನ್ನ ಅಭಿಮತ . ತಾರೀಕು ಬರೆದು ಗ.ವೆಂ.ಜೋ ಎಂದು ತನ್ನ ಕಿರು ಸಹಿಯನ್ನು ಅದರ ಮೇಲೆ ಹೊಡೆದಿದ್ದ.
ನನಗೆ ಇದ್ದಕಿದ್ದಂತೆ ಆ ದಿನದ ನೆನಪಾಯಿತು. ಅಂದು ನನಗೆ ನೌಕರಿ ಸಿಕ್ಕಿತೆಂದು ಅಪಾರ ಖುಷಿಯಿಂದ ನಾನು ಮೈಸೂರು ಪಾಕ ಮತ್ತು ಭಟ್ಕಳ ಮಲ್ಲಿಗೆ ಹಿಡಿದು ಭಾವನ ಮನೆ ಬಾಗಿಲಿಗೆ ಬಂದಾಗ ಭಾವ ಕೇಳಿದ್ದ, “ನಿಂಗೆ ಸಿಕ್ಕೇ ಹೋಯಿತಾ!” ಎಂದು. ಅಂದು ಅರ್ಥವಾಗದ ಭಾವನ ಮಾತಿನ ಹಿಂದಿನ ಭಾವ ಈಗ ಸ್ಪಷ್ಟವಾಗತೊಡಗಿತು. “ ಯಲಾ ಭಾವಾ!’ ಎಂಬ ಉದ್ಗಾರ ನನ್ನ ಅಂತರಂಗದಿಂದ ಹೊರಬಂತು.
ಇನ್ನು ಅಲ್ಲಿ ಕೂಡ್ರುವ ಮನಸ್ಸಾಗಲಿಲ್ಲ. ಗಿರಿಜಕ್ಕನಿಗೂ ಹೇಳದೆ ಕೋಣೆಯ ಬಾಗಿಲನ್ನೂ ಹಾಕದೆ ಅಲ್ಲಿಂದ ಕಾಲ್ಕಿತ್ತೆ.
- ಸುರೇಶ ಹೆಗಡೆ , ಹುಬ್ಬಳ್ಳಿ
ಸುರೇಶ ಹೆಗಡೆ, ಹುಬ್ಬಳ್ಳಿ : ಕರ್ನಾಟಕ ವಿದ್ಯುತ್ ನಿಗಮದಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯ ಬಳಿಕ ಹುಬ್ಬಳ್ಳಿಯಲ್ಲಿ ನೆಲೆನಿಂತಿರುವ ಸುರೇಶ ಹೆಗಡೆಯವರು ತಮ್ಮ ವೃತ್ತಿ ಪ್ರಪಂಚಕ್ಕಷ್ಟೇ ಬದುಕನ್ನು ಸೀಮಿತಗೊಳಿಸಿಕೊಂಡವರಲ್ಲ. ಬರವಣಿಗೆ, ನಾಟಕ, ಆಕಾಶವಾಣಿಗಳಲ್ಲಿ ಕಥಾವಾಚನ, ವ್ಯಕ್ತಿತ್ವ ವಿಕಸನ ಉಪನ್ಯಾಸ ಹೀಗೆ ಹಲವು ಹತ್ತು ಪ್ರವೃತ್ತಿಗಳಲ್ಲಿ ತೊಡಗಿಸಿಕೊಂಡ ಇವರದು ಕ್ರಿಯಾಶೀಲ ವ್ಯಕ್ತಿತ್ವ. ಸುಧಾ, ಮಯೂರ, ತುಷಾರ, ಉತ್ಥಾನ ಮುಂತಾದ ಪತ್ರಿಕೆಗಳಲ್ಲಿ ಅವರ ಕತೆ, ನಗೆಬರೆಹಗಳು ಪ್ರಕಟಗೊಂಡಿವೆ. ಅವರು ಬರೆದ ಕತೆಗಳಿಗೆ ಬಹುಮಾನಗಳು ದೊರೆತಿವೆ. ಇತ್ತೀಚೆಗೆ ಸುರೇಶ ಹೆಗಡೆಯವರ ಚೊಚ್ಚಲ ಕಥಾಸಂಕಲನ ‘ ಇನಾಸ್ ಮಾಮನ ಟಪಾಲು ಚೀಲ’ ಪ್ರಕಟಗೊಂಡಿದ್ದು ಅದು ಬಹುಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅವರ ಕತೆಗಳಲ್ಲಿ ಮಾನವಿಯ ಮೌಲ್ಯಗಳನ್ನು ಗುರುತಿಸುವ ಮತ್ತು ಅದರ ಮೇಲೆ ನಡೆಯುವ ದಾಳಿಯ ವಿವಿಧ ಮುಖಗಳ ಮೇಲೆ ಬೆಳಕು ಚೆಲ್ಲುವ ಪ್ರಕ್ರಿಯೆ ಸದಾ ನಡೆದಿರುತ್ತದೆ. ಪ್ರಸ್ತುತ ಕತೆಯೂ ಅದಕ್ಕೊಂದು ಕಿರು ಉದಾಹರಣೆ.
’ಭಾವ’ ಮಿನಿಗತೆ ಮನುಷ್ಯರೊಳಗಿರುವ ಮನಸ್ಸಿನ ಹಲವು ಸಣ್ಣ ಪುಟ್ಟ ವಿಕೃತಿಗಳ ಆಳವನ್ನು ನಯವಾಗಿ ಹಿಡಿದಿಡುತ್ತಲೇ, ಕೆಲಬಾರಿ ಅದನ್ನು ದಾಟಲಾರದೇ ಅಲ್ಲೇ ಸ್ಟ್ರಕ್ ಆಗಿಬಿಡುವ ಸಣ್ಣ ಅಸೂಯೆಯ ಮುಳ್ಳೊಂದು ಓದುಗರ ಮನಸ್ಸಿಗೂ ಚುಚ್ಚುವ ಅನುಭವ ನೀಡಿದಂತಿದೆ ಸರ್..