top of page

ದೇವರೇ

ನೀ ಬರುವೆಯೆಂದು

ಬಾಲೆಯರು ಸಡಗರಗೊಂಡು

ಬೆರಳ ಲೀಲೆಯಲಿ ರಂಗೋಲಿ

ಬಿಡಿಸಿ ಮುದಗೊಂಡಿದ್ದಾರೆ

ಬಣ್ಣಗಳ ಬೆರಸದೆಯೆ ಒಂದೊಂದು

ಬಣ್ಣಗಳ ಸಂಬಾಳಿಸಿ ನವುರಾದ

ಭಾವಗಳ ಮೊಳಕೆಗಳ

ಹಿಟ್ಟಿನಲಿ ಒಟ್ಟಾಗಿ ಸೇರಿಸಿ ಬಾಲೆಯರು

ಬರೆದರು ಎಂಥ ಚಿತ್ರ ವಿಚಿತ್ರ

ಟೊಂಗೆ ಟಿಸಿಲು ಮರ ಹಕ್ಕಿ

ಹಕ್ಕಿ ಸಾಲು ತಾಯಿ ಮಗು

ಸೂರ್ಯ ಚಂದ್ರಾಮ ದನ ಕರು

ಪಲ್ಲಕ್ಕಿ ಹೊಳೆ ಮೀನು ಬಾಸಿಂಗ

ಅಲ್ಲಿ ಇಲ್ಲಿ ಮೊಸಳೆಯ ಹಲ್ಲು

ಹಸಿರಾಗಿ ಹೊಮ್ಮಿದ ಭಕ್ತಿಯ ಸೊಲ್ಲು

ಎಂಥ ಭಾವ ನೋವಿರದ ಜೀವ

ನವುರಾಗಿ ಬಿಡಿಸಿದ ರಂಗವಲ್ಲಿ

ದೇವರೇ

ನೀನು ಬಂದೆ ಸಿಂಗರದ ಪಲ್ಲಕ್ಕಿಯಲಿ

ಭಕ್ತಿಯ ಮಹಾಪೂರವ ತಂದೆ

ಜನರ ಪರೀಸೆ ಪೂಜೆ ಆರತಿ

ಜಾಗಟೆ ಗಂಟೆ ಪಟಾಕ್ಷಿ

ತೂಗುತಿಹ ಭಟ್ಟರ ಜುಟ್ಟು ಗಂಟೆ

ಪ್ರಸಾದ ವಿತರಣೆ ನೂಕು ನುಗ್ಗಲು

ಓಡೋಡಿ ಬಂದ ಜನ ಸಂದಣಿ

ನಿನಗೆ ಖುಷಿಯೊ ಸಂಭ್ರಮವೊ

ಪಲ್ಲಕ್ಕಿ ಹೊತ್ತವರು ಹೊಂತಗಾರರು

ಭಾರ ಬಂದವರಂತೆ ತೂಗಾಡಿ

ಜನರು ಕಾಯಿಕಡಿಗಾಗಿ ಬಡಿದಾಡಿ

ಆವೇಶದಲಿ ನುಗ್ಗುತಿರೆ ಒಸರಿದ ರಕುತ

ದೇವರೇ

ಮಿದು ಬೆರಳ ಶಿಲ್ಪ

ಚೆದುರಿ ಚಲ್ಲಾಪಿಲ್ಲಿ ರಂಗೋಲಿ

ಮರೆಯಾಗಿ ಹಿಟ್ಟುಗಳು ಕಲೆತು

ಹೊಟ್ಟೆ ತೊಳೆಸಿ ರಂಗೋಲಿ

ಬಿಡಿಸಿದ ಕನ್ನೆಯರು ಸುಮಂಗಲಿಯರಾಗಿ

ಮಿದುವಾದ ಭಾವನೊಂದಿಗೆ

ಮರೆಯಾಗಿದ್ದಾರೆ

ಮರೆತು ಹೋಗಿದ್ದಾರೆ.


ಶ್ರೀಪಾದ ಶೆಟ್ಟಿ

25 views0 comments

Comments


bottom of page