ಈ ಕ್ಷಣಕ್ಕೆ ನೆನಪು ಮಾಡಿಕೊಳ್ಳುತ್ತೇನೆ
ಆಗ ನಾನು ಹಚ್ಚಹಸುರಾಗಿದ್ದೆ
ನನ್ನ ರೆಂಬೆಕೊಂಬೆಗಳನ್ನು
ಯಾರೊ ಕಡಿದುಬಿಟ್ಟರು
ಈಗ ಎಲೆಗಳೆಲ್ಲ ಒಣಗುತ್ತಿವೆ
ನಾನೆ ತೊಟ್ಟ ಹೂಗಳಿಗೆ
ಚಿಗುರುಗಳ ಪ್ರಶ್ನೆಗಳಿಗೆ ಬನ್ನಿ ಉತ್ತರಿಸಿ
ನನ್ನ ಹೃದಯ ಕಿತ್ತವರಲ್ಲವೆ ನೀವು
ನನ್ನ ಹಣ್ಣಿನ ರುಚಿ
ನಾನೇ ಕೊಡಬೇಕೆಂದೇನಿಲ್ಲ
ನನ್ನ ಹಸಿರು
ಲೋಕಕ್ಕೇ ಹೊಸಬಗೆಯದೇನಲ್ಲ
ಆದರೆ
ನನ್ನ ಯೋಗ್ಯತೆ ಮತ್ತು ಸಾವನ್ನು
ತೀರ್ಮಾನಿಸಲು ನೀವು ಯಾರು
ಆಗ ವಾಟೆಗೆ ಮಣ್ಣ ಹೊದಿಸಿದವರ?
ನಾನು ಮಾತನಾಡದೆ ಉಳಿದದ್ದಕ್ಕೆ
ಈಗ ಮಾತು ಬಂದಿವೆ
ನೀವು ಯಾರು
ನಿಮ್ಮ ಊರು ಯಾವುದು
ಕನಿಷ್ಠ ಪಕ್ಷ ನನ್ನ ರೆಂಬೆಯಲ್ಲಿ ಗೂಡುಕಟ್ಟಿ
ಎಷ್ಟೋ ರಾತ್ರಿ ಅಪ್ಪಿಕೊಂಡವರ?
ನನ್ನನ್ನು ಬೀಳಿಸುವ ಮೊದಲೇ
ನಿಮ್ಮ ಹೃದಯದಲ್ಲೊಂದು ಅಲೆ ಇದ್ದಿದ್ದರೆ
ನನ್ನ ಮೌನವನ್ನು ಆಲಿಸಿದ್ದರೆ
ನಾನು ಗಟ್ಟಿಯಾಗಿದ್ದಾಗಲೇ ಬೀಳುತ್ತಿರಲಿಲ್ಲ
ಇನ್ನ ಕೇವಲ ಎರಡು ವರ್ಷಕ್ಕೆ
ನಿಮ್ಮ ಪುಟ್ಟನಿಗೆ ಮಾತು ಬರುತ್ತವಲ್ಲ
ಅವನು ಲೋಕ ನೋಡುತ್ತಾನಲ್ಲ
ಆಗ ಇಲ್ಲಿ ನಮ್ಮ ಮಾವಿನ ಮರ ಇತ್ತು
ಎಂದು ಹೇಳುವ ನಿಮ್ಮ ತನುವಲ್ಲಿ
ನನ್ನ ನೆರಳು ಉದಯಿಸುತ್ತದೆ ಅಷ್ಟೆ
ನೀವು ಅಷ್ಟೇನು ನೊಂದುಕೊಳ್ಳುವುದಿಲ್ಲ
ಉಪ್ಪೆಸರಿಗೆ ನೆಂಚಿಕೊಂಡಿರಿ
ಪುಡಿಗಾಸಿಗೆ ಟ್ರೇನಿನಲ್ಲಿ ಮಾರಿದಿರಿ
ಆಗೆಲ್ಲ ಹೆಮ್ಮೆ ಪಟ್ಟುಕೊಂಡೆ
ಹೊಲಕ್ಕೆ ಬರುವ ನಿಮ್ಮ ದೂರದಿಂದ ಸ್ವಾಗತಿಸಿದೆ
ನೀವು ನನ್ನ ಮಕ್ಕಳಂತೆಯೇ ಕಂಡಿರಿ
ನನಗಾಗ ಜೀವವಿತ್ತು
ಸಣ್ಣ ಕಡ್ಡಿಯ ಗೂಡಿನ ಹಕ್ಕಿಗೆ
ಈ ವಿಳಾಸ ಮರೆಯಲು ಹೇಳಿ
ಇಲ್ಲಿಂದ ಹೊರಟ ಇರುವೆಗೆ
ಸಾಧ್ಯವಾದರೆ ನೀವು ತಕ್ಷಣಕ್ಕೆ ಕಡಿಯದ ಮರದ ದಾರಿ ತೋರಿಸಿ
ಒಂದು ಮಾತು
ನಾನು ಉರುಳಿ ಬಿದ್ದ ಜಾಗದಲ್ಲಿ ನೀವು ಮತ್ತೆ ಮತ್ತೆ ಓಡಾಡಬೇಡಿ
- ಚಂದ್ರು ಎಂ ಹುಣಸೂರು
Comentários