ನಿನ್ನ ನೆನಪೆಂದ್ರ ಹೀಂಗ..
ಚಿಗರಿ ಕಂಗಳ ಚೆಲುವಿ ನಕ್ಕೋತ
ತನ್ನೆಡೆಗೆ ಬರಸೆಳ್ದ್ಹಾಂಗ..
ಆಕೀನ ' ಏನೂ ಅಂದ್ರೆ..'
ಅನ್ಕೋತ ಮೈ ಸೋಕಿ
ಬಳುಕುತ್ತ ಬಂದ್ಹಾಂಗ..
ಘಮ ಘಮ ಘಮಾಡ್ಸಿ..
ಬೇಂದ್ರೆ ಹಾಡದ್ಹಾಂಗ..
ಸುತ್ತಲಿನ ಸಾಧನಕೇರಿಲಿ..
ಎತ್ತರದ ಕಳಸದ ಗಡಿ
ಯಾರ ಹೊಳ್ಳಿ ಹೊಳ್ಳಿ
ಅಕಸ್ಮಾತ್ ನಿಂತ್ರೂ..
ನಿಲ್ಲೋವಲ್ದು ನೆನಪು..
ಪ್ಯಾಟಿ ಸಾಲು ಬೆಳ್ದೂ ಬೆಳ್ದ್ರೂ
ವಿದ್ಯಾವರ್ಧಕದ ಆಜು ಬಾಜು
ಪಕ್ಕದ ಕಲಾಮಂದಿರದಾಗಾಗ
ಮೊಳಗ್ತಾವ ..ತಾನಭಾಜ್..
ಹಂಗ ಮಾರ್ಕೆಟಿಗ್ ಬಂದ್ರ
ಯಾರಿಗೆ ಬೇಡಾ..
ಠಾಕೂರ್ ಪೇಢಾ?
ಬಿಸಿ ಬಿಸಿ ಸಕ್ರಿಪಾಕದಂಥಾ ಚಹಾದ ಜೋಡಿ ಚೂಡಾ
ಸಂತಿ ಸುತ್ತಿ ಸಂಜಿಮುಂದ
ಸಮಾಜ ಪುಸ್ತಕಾಲಯಕ
ಹ್ವಾದ್ರ ಯಾವ್ದು ಕೊಳ್ಳೋದ್ರಿ
ಯಾವ್ದು ಬಿಡೋದ್ರಿ?
ಓಲ್ಡ್ ಈಸ್ ಗೋಲ್ಡ್ ಅಂಥ
ಮೋಡಕಾ ಬಾಜಾರಿಗ್ಬಂದ್ರ..
ಕಾಂಪ್ಲಿಮೆಂಟರಿ ಕೊಟ್ಟೋರ್ಗೇ
ಕೈಕೊಟ್ಟು ಬಂದವುಗಳ..
ಚೌಕಾಸಿ ಮಾಡಿ ಮಾಡಿ
ಹ್ಯಾಗ್ರಿ ಕೈ ಹಿಡಿಯೋದು?
ಕಾಲ ಕಾಲದ ತಿಕೀಟ್ ತೆಗ್ಯೋ
ಕಂಡಕ್ಟರ್ಗಲ್ಲದೆ ಮಂದೀಗೂ
ಗೊತ್ತು..ಎಲ್ಲಾರೂ ಇಳ್ಯಾಕ
ಹತ್ತೀವಿ..!
ಅಂದ್ಹಾಂಗ ಇದು
ಸಪ್ತಾಪುರ ಭಾವಿರಿ..
ಸಾವಕಾಶ ಇಳೀರಿ!
ನಾಗರಾಜ ಹೆಗಡೆ ಅಪಗಾಲ
ಕವಿ ನಾಗರಾಜ ಹೆಗಡೆ ಅಪಗಾಲ ನಮ್ಮ ನಡುವಿನ ಪ್ರಜ್ಞಾವಂತ ಬರಹಗಾರ.ಕನ್ನಡ ಸಾಹಿತ್ಯದ ಗಂಭೀರ ವಿದ್ಯಾರ್ಥಿಯಾಗಿರುವ ಅವರು ಅಧ್ಯಯನ ಅಧ್ಯಾಪನ ಹಾಗು ಬರವಣಿಗೆಗೆ ತಮ್ಮ ಬಹುಪಾಲು ಸಮಯವನ್ನು ಮೀಸಲಾಗಿಟ್ಟ ಸದುವಿನಯದ ಸಂಭಾವಿತ ವ್ಯಕ್ತಿ.ಪ್ರಭಾವಿ ಅಧ್ಯಾಪಕರಾಗಿ,ವಿದ್ಯಾರ್ಥಿಗಳ ನಲ್ಮೆಯ ಗುರುವಾಗಿ,ಸಾಂಸ್ಕೃತಿಕ ಕಾಳಜಿಯ ಸಂಘಟಕರಾಗಿ ಚಿರ ಪರಿಚಿತರಾಗಿರುವ ನಾಗರಾಜ ಹೆಗಡೆ ಅವರು ಪ್ರೊ.ಜಿ.ಎಸ್.ಅವಧಾನಿಯವರ ಖಾಸಾ ಶಿಷ್ಯರಾಗಿ ಜಾತ್ಯತೀತ ನಿಲುವನ್ನು ರೂಢಿಸಿಕೊಂಡಿರುವ ನಾಗರಾಜ ಹೆಗಡೆಯವರ, ದೀಪವಿಲ್ಕಲದಇರುಳಲ್ಲಿ ಕಣ್ಣಂಚಿನ ಕಡಲು,ಸಣ್ಣ ಬೆಂಕಿ ಕವನ ಸಂಕಲನಗಳು ಹೊಸಗನ್ನಡ ಕಾವ್ಯ ಸಲಿಲದಲ್ಲಿ ತನ್ನದೆ ಆದ ಅಲೆಗಳನ್ನು ಸೃಷ್ಟಿಸಿದೆ.ಹಲವಾರು ಕೃತಿಗಳನ್ಅನು ಸಂಪಾದಿಸಿರುವ ಅವರು 1997 ರಿಂದ ಎಸ್.ಡಿ.ಎಂ.ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ "ಧಾರವಾಡ " ಎಂಬ ಧಾರವಾಡ ಭಾಷೆಯಲ್ಲಿ ಬರೆದ ಕವಿತೆ ನಿಮ್ಮ ಓದು ಮತ್ತು ಸಹಸ್ಪಂದನಕ್ಕಾಗಿ. ಡಾ.ಶ್ರೀಪಾದ ಶೆಟ್ಟಿ ಸಂ.ಆಲೋಚನೆ.ಕಾಂ
Comentarios