ನಾಲ್ಕು ದಿನದಿ ಸಾಕೆನಿಸದಿರಲಿ ಬದುಕು
ಒಲವೆಂಬುದು ಜೊತೆಯಾಗಿರಲಿ ಬೆಳಕು
ಆದರಣೀಯತೆಯ ಸೂರಾಗಲಿ ಮನವು
ಸಾಧಾರಣದಲೂ ಶ್ರೀಮಂತಿಕೆಯ ಹೃದಯವು//
ಕೊಟ್ಟಿದ್ದು ಮಾತ್ರವೇ ಗಿಟ್ಟಿಸುವುದು ಹೆಸರನ್ನ
ಬಚ್ಚಿಟ್ಟು ಸಾಧಿತವಾಗುವುದು ಏನನ್ನು?
ಕೊಡು ಕೊಳ್ಳುವಿಕೆಯ ಸೂತ್ರದಲ್ಲಿ
ಬಿಡಿಸಲಾಗದ ಬಾಂಧವ್ಯವು ಬೆಳೆವುದಲ್ಲಿ//
ನಲುಮೆಯ ನುಡಿಯೊಳು ಗೆಲ್ಲು
ಚಿಲುಮೆಯಂತಾಗಿರಲಿ ಸೊಲ್ಲು
ಅರಿತರಿತು ಮತ್ತೆ ಅರಿಯಾಗದಿರಿ
ಮರೆತಾದರೊಮ್ಮೆ ಮನವ ಸಂಧಿಸಿರಿ//
ಸಂತಸವ ಹೆಚ್ಚಿಸಿ ಸಂಭ್ರಮದಲಿ
ಚಿಂತೆಯನೆ ಕಳೆವ ಸಂತೈಸಿಕೆಯಲಿ
ಹೊತ್ತೊಯ್ಯುವೆಯೇನ ಅಂತಿಮ ಯಾತ್ರೆಯಲಿ
ಬಿತ್ತಿ ಹೋಗೋಣ ಮೆಚ್ಚುಗೆ ಅಚ್ಚಳಿಯದಲಿ//
ಅಳಿಯದ ಜೀವಜಲಕಿಲ್ಲ ದ್ವೇಷ
ಸುಳಿಯುವ ಪ್ರಾಣದನಿಲಕಿಲ್ಲ ರೋಷ
ಬೆಳಗುವ ದಿನಕರನಿಗಿಲ್ಲ ಅನ್ಯ ರೀತಿ
ಅಳಿವ ಬಡ ಜೀವಕೇಕೆ ಅಹಂ ಭ್ರಾಂತಿ //
ಮುಗಿದು ಹೋಗುವ ಬದುಕ ದಾರಿಯ
ಸೊಗಸಾಗಿಸುವುದು ಸಹಬಾಳ್ವೆ ಹೆಜ್ಜೆಯು
ಹಗುರಾಗಿ ತಿಳಿಯದೆ ಎಲ್ಲರೊಳು ಬೆರೆಯುತ
ನಗುಮೊಗದಿ ಜಯಿಸೋಣ ಮನುಜ ಮತ//
ಭವಾನಿ ಗೌಡ (ಭುವಿ)
ವಿಜಯಪುರ
Comments