ದೊಡ್ಡಪ್ಪನ ದೊಡ್ಡಸ್ತಿಕೆ
ಪ್ರತಿವರ್ಷದಂತೆ ಈ ವರ್ಷವೂ ಹೋಳಿ ಹಬ್ಬದ ಸಂಭ್ರಮ. ಅದರಲ್ಲಿ ಸುಗ್ಗಿಯ ಕಾಲ. ರೈತರಿಗೆಲ್ಲ ಹಿಗ್ಗುವ ಕಾಲ. ಹೊಲಗಳಲ್ಲಿಯ ರಾಶಿಗಳೆಲ್ಲ ಮನೆಗೋ ಮರ್ಕೆಟಿಗೋ ಹಾಕಿ ಬಂದ ಹಣದಿಂದ ಕೈ ಬಿಸಿಯಾಗಿ ಜನರು ಹೋಳಿ ಹಬ್ಬವನ್ನು ಅತೀ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಹೊಲಗಳಲ್ಲಿ ದುಡಿದು ಬರುವ ಹೆಣ್ಣು ಮಕ್ಕಳು ಹಿಂಡು ಹಿಂಡಾಗಿ ಹಾಡುತ್ತ ಕುಣಿಯುತ್ತ ಮನೆಗೆ ಬರುತ್ತಿದ್ದಾರೆ. ಹೋಳಿ ಹಬ್ಬದಲ್ಲಿ ತಾರುಣ್ಯದಲ್ಲಿಕಾಲಿಟ್ಟ ಕಮಿನಿಯರ ಸೊಗಸೇ ಸೊಗಸು. ಅಂಥದರಲ್ಲಿ ಪಟ್ಟಣದಿಂದ ನಮ್ಮ ದೊಡ್ಡಪ್ಪನ ಮಗ ಸೊಸೆ ಹಬ್ಬಕ್ಕೆಂದು ಬಂದಿದ್ದು ಮನೆ ತುಂಬಾ ಮೊಮ್ಮಕ್ಕಳು ಓಡಾಡಿ ಮನೆಗೊಂದು ಹೊಸ ಕಳೆ ಬಂದಂತಾಗಿದೆ. ಆದರೂ ಹೊಲದಿಂದ ಬಂದ ದೊಡ್ಡಮ್ಮಳ ಮುಖದಲ್ಲಿ ಗಾಢವಾದ ಚಿಂತೆಯೊಂದು ಮನೆ ಮಾಡಿದೆ. ಹೌದು, ಅವಳಿಗೆ ಚಿಂತೆ ಮಾಡದೇ ಬೇರೆ ದಾರಿ ಇಲ್ಲ. ಮುಂಜಾನೆ ಜಗಳ ಮಾಡಿಕೊಂಡು ಹೋದ ದೊಡ್ಡಪ್ಪ ಸಾಯಂಕಾಲವಾದರೂ ಮನೆಗೆ ಬಂದಿರಲಿಲ್ಲ. ಹಿರಿಯ ಸೊಸೆ ಕಮಲಾ ಮನೆಯಲ್ಲಿ ಇದ್ದರೂ ಮಾವನನ್ನು ಕರೆದು ಊಟ ಮಾಡಿಸುವ ಸ್ವಭಾವದವಳಲ್ಲ ಎಂಬುದು ಅವಳಿಗೆ ಗೊತ್ತು. ಕಮಲ ದೊಡ್ಡಮ್ಮಳ ಹಿರಿಯ ಮಗ ರಾಮುವಿನ ವಿಧವೆ. ಹತ್ತು ವರ್ಷಗಳ ಹಿಂದೆ ಅದ್ಯಾವುದೋ ಗುಣವಾಗಲಾರದ ಕಾಯಿಲೆಗೆ ರಾಮು ತುತ್ತಾಗಿದ್ದ. ಇನ್ನೂ ಹಸುಳೆಯರಾದ ಅವನ ಮಕ್ಕಳನ್ನು ತನ್ನ ಮಡಿಲಲ್ಲಿಟ್ಟು ಸಾಕಿ ಸಲುಹಿದ್ದಳು ದೊಡ್ಡಮ್ಮ . ತುಂಬಾ ಕಷ್ಟ ಪಟ್ಟಿದಳು. ಕಮಲೆಗೆ ಎಂದಿಗೂ ಹೊಲದ ಕೆಲಸಕ್ಕೆ ಕಳುಹಿಸಿರಲಿಲ್ಲ. ತಾನು ಮಾತ್ರ ಮಳೆ ಇರಲಿ ಚಳಿ ಇರಲಿ ಕೆಲಸಕ್ಕೆ ಹೋಗುತ್ತಿರುತ್ತಾಳೆ. ಕಾಯಿಲೆ ಬಂದರೂ, ಮೊಳಕಾಲುನೋವು, ಸೊಂಟ ನೋವು ಇದ್ದರೂ ಒಂದು ದಿನ ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ತಾನು ದುಡಿದರೆ ಮಾತ್ರ ಮನೆಯಲ್ಲಿ ಎಲ್ಲರಿಗೂ ಕೂಳು ಸಿಗುತ್ತದೆ ಎಂದು ನಂಬಿದ್ದಾಳೆ. ಏಕೆಂದರೆ ಪಟ್ಟಣ ಸೇರಿದ ಪ್ರಕಾಶ ತಾನಾಯಿತು ತನ್ನ ಕುಟುಂಬವಾಯಿತು ಎಂಬಂತೆ ಇರುತ್ತಾನೆ. ಇನ್ನೂ ಮದುವೆಯಾಗದ ಸಣ್ಣ ಮಗ ವಿಕಾಸ ಕೆಲಸವಿಲ್ಲದೇ ಅಲೆಯುತ್ತಿದ್ದಾನೆ. ಜೋಳದ ರಾಶಿ ಮಾಡಿದ ಮೇಲೆ ಕಣ ಹಾಗೆಯೇ ಬಿದ್ದಿದೆ, ಹೊಲಕ್ಕೆ ಬಂದಿದ್ದರೆ ಎಲ್ಲ ವಾರಾವರಿ ಮಾಡುತ್ತಿದ್ದರು. ಆದರೆ ಹೊಲಕ್ಕೂ ಬರಲಿಲ್ಲ. ತಾನೊಬ್ಬಳೇ ಹೊಟ್ಟವನ್ನು ವಟ್ಟಿ ಬಡಿದಾಡಿ ಕಣಕಿ ಹಚ್ಚಿ ಸಂಜೆಗೆ ಮನೆಗೆ ಬಂದರೆ ಇತ ಇನ್ನೂ ಮನೆಗೆ ಬಂದಿಲ್ಲವೆಂದರೆ? ಅವಳಿಗೆ ಗಾಬರಿಯಾಯಿತು. ಕಮಲಾ ಅಡುಗೆ ಮನೆಯಲ್ಲಿ ಏನೋ ಸದ್ದು ಮಾಡುತ್ತಿರುವವಳನ್ನು ಉದ್ದೇಶಿಸಿ ಕೇಳಿದಳು, “ “ನಿನ್ನ ಮಾಮ ಬಂದಿಲೇನ ಮನಿಗಿ?”” “ “ಅವರೆಲ್ಲಿ ಬರ್ತಾರತ್ತೆ, ಮನೆ ಐತಿ ಅನ್ನೋ ಖಬರ್ ಇದ್ರೆ ತಾನೆ? ಕುಂತಿರ್ಬೇಕು ಶೇರಿ ಅಂಗಡ್ಯಾಗ ವದರ್ಯಾಡ್ಕೊತು. ಮುಂಜಾನೆ ಮಾಡಿದ್ದು ಸಾಲದು ಅಂತ ಮತ್ತ ಸುರು ಮಾಡ್ತಿರಬೇಕು ಪುರಾಣ.” ”ಹಿರಿ ಸೊಸೆ ನಿಟ್ಟುಸಿರು ಬಿಟ್ಟು ಹೇಳಿದಳು. ಪೆಚ್ಚಾದಳು ಮುದಕಿ. ಅವಳಿಂದ ಮತ್ತೇನು ಅಪೆಕ್ಷೆ ಇಡುವಂತಿಲ್ಲ. ವಿಕಾಸ ಊರು ತುಂಬಾ ತಿರುಗಾಡಿ ತಂದೆಯನ್ನು ಹುಡುಕಿ ಬೇಸತ್ತು ಬಂದನು. ಒಂದು ಕಡೆ ಹೋಳಿ ಹಬ್ಬಕ್ಕಾಗಿ ಕೂಳು ಕಟ್ಟಿಗೆ ಸಂಗ್ರಹಿಸಲು ಯುವಕರೆಲ್ಲ ಹುರುಪಿನಿಂದ ಅಡವಿಗೆ ಹೊರಟಿರುವಾಗ ನಾನು ಮಾತ್ರ ಇಲ್ಲಿ ಕುಡುಕ ತಂದೆಯನ್ನು ಹುಡುಕುತ್ತ ಬೀದಿ ಬೀದಿಗಳಲ್ಲಿ ಇರುವ ದಾರು ಅಂಗಡಿಗಳಲ್ಲಿ ಅಲೆಯುತ್ತಿರುವೆ ಎಂದು ನಾಚಿಕೆ ಪಟ್ಟನು. ಕೆಲಸಮಾಡಿ ಬಳಲಿ ಬಂದು ನರಳುತ್ತ ಮುದುಕನ ಚಿಂತೆಯಲ್ಲಿ ಕುಳಿತ ಅಮ್ಮನನ್ನು ವಿಕಾಸ ಹೇಳಿದನು, ““ಯಾಕ ನರಳ್ತಿ ಬೇ, ಹೋಗಬ್ಯಾಡ ಅಂತ ಎಷ್ಟೇ ಹೇಳಿದರೂ ಹೊಲಕ್ಕ ಯಾಕ ಹೋಗ್ತಿ? ಬೇಡ ಅಂದ್ರೆ ಸುಮ್ಮನೆ ಮನ್ಯಾಗ ಇರ್ಬೇಕು”.” ವಿಕಾಸ ಎಷ್ಟೇ ಕೆಲಸಕ್ಕೆ ಹೋಗಬೇಡವೆಂದು ಹೇಳಿದ್ದರೂ ತಾನು ಮಾತ್ರ ಕಾಡಿಗೆ, ಅಡವಿಗೆ, ಅಲ್ಲಿ ಇಲ್ಲಿ ಕಣದ ಮೇಲೆ ಹೋಗುತ್ತಿರುತ್ತಾಳೆ. ಹಕ್ಕಲ ಸೆಂಗವನ್ನೂ, ಕಡಲಿಯನೋ ಆಯ್ದು ಗಂಟು ಕಟ್ಕೊಂಡು ಹೊತ್ಕೊಂಡ ಬರ್ತಾಳೆ. ಪ್ರಕಾಶ ತನ್ನ ಮಕ್ಕಳ ವಿಧ್ಯಾಭ್ಯಾಸಕ್ಕೆಂದು ಸಿಟಿಯಲ್ಲಿ ಮನೆಮಾಡಿಕೊಂಡು ವಾರಕ್ಕೋ-ಹದಿನೈದು ದಿನಕೋ ಬಂದು ತಾಯಿ-ತಂದೆಯರ ಕ್ಷೇಮ ಸಮಾಚಾರ ವಿಚಾರಿಸಿಕೊಂಡು ಹೋಗುತ್ತಿರುತ್ತಾನೆ. “ “ನೀ ಏನ್ ನಮ್ಮ ಕ್ಷೇಮ ವಿಚರಸ್ತಿಯಪ್ಪ, ಇದ್ದವರೆಲ್ಲ ಸತ್ತ ಹೋದರು ನಮ್ಮ ಪಾಲಿಗೆ. ನೀ ನಿನ್ನ ಹೆಂಡತಿ ಕಟ್ಕೊಂಡು ಶೆರದಾಗ ಮಜವಾಗಿ ಇರಿ. ಇಲ್ಲಿ ನಮ್ಮ ಪಾಡಿಗೆ ನಮಗ ಬಿಟ್ಟು ಬಿಡಿ.”” ಎಂದು ದೊಡ್ಡಪ್ಪ ರಾಗ ಎಳೆದರೆ ಅವನ ಕೈಯಲ್ಲಿ ನೂರು-ಇನ್ನೂರುರ ನೋಟು ಇಟ್ಟು ಪ್ರಕಾಶ ಹೋಗಿಬಿಡುತ್ತಿದ್ದ. ದೊಡ್ಡಪ್ಪನಿಗೆ ಮೂರು ಗಂಡು ಮಕ್ಕಳು ಹಾಗೂ ಐದು ಜನ ಹೆಣ್ಣು ಮಕ್ಕಳು. ಎಲ್ಲ ಹೆಣ್ಮಕ್ಕಳ ಮದುವೆಯಾಗಿ ಗಂಡನ ಮನೆಯಲ್ಲಿ ಸುಖ ಸಂಪತ್ತಿನ ಸುಪ್ಪತ್ತಿಗೆಯಲ್ಲಿ ಇರದಿದ್ದರೂ ತಮ್ಮ ತಮ್ಮ ಮನೆ ಮಕ್ಕಳು ಗಂಡ ಹೀಗೆ ಸಂಸಾರದ ತಾಪತ್ರಯಗಳಲ್ಲಿ ಸೆಣಸಾಡುತ್ತಿದ್ದಾರೆ. ಹಿರಿಯ ಮಗಳು ಶೀಲಾ ತನ್ನ ಏಕೈಕ ಪುತ್ರಿಯನ್ನು ಕಿರಿಯ ತಮ್ಮ ವಿಕಾಸನಿಗೆ ಕೊಟ್ಟು ಮದುವೆ ಮಾಡಿಕೊಡುವ ವಿಚಾರವಾಗಿ ಮಾತಾಡಲು ದಂಪತಿಗಳಿಬ್ಬರೂ ಪುಣೆಯಿಂದ ಸಮಯ ತೆಗೆದು ಬಂದಿದ್ದಾರೆ. ‘ಹಳೆಯದೇ ಹೊನ್ನು’ ಎಂಬಂತೆ ಹಳೆಯ ಸಂಬಂಧ ಹೊಸವಾಗಿರಿಸಿ ತವರಿಗೆ ಬರು-ಹೋಗುವ ಹಾದಿ ಸುಗಮವಾಗಿಸಬೇಕೆಂದು ಹಿರಿಯಕ್ಕಳ ಮನದಿಂಗಿತವಿದೆ. ಹೋಳಿ ಹಬ್ಬದಲ್ಲಿ ಸಂಬಂಧ ಗಟ್ಟಿ ಮಾಡಿ ಬಿಟ್ಟರೆ ಬರುವ ದಸರಾ ಹಬ್ಬಕ್ಕೆ ಮದುವೆ ಮಾಡಿ ಕೊಡುವ ವಿಚಾರವಾಗಿ ತಂದೆಯ ಜೊತೆ ಮಾತಾಡಲು ಬಂದರೆ ಇಲ್ಲಿ ಅರ್ಧ ರಾತ್ರಿ ಸರಿದರೂ ಯಜಮಾನನ ಸುಳಿವು ಇಲ್ಲ. ರಾತ್ರಿ ಹತ್ತರ ಸುಮಾರಿಗೆ ದೊಡ್ಡಪ್ಪ ಬಂದ. ಕುಡಿದುಕೊಂಡು ತುರಾಡುತ್ತಲೇ ಬಂದ. ದಿನನಿತ್ಯ ಕುಡಿಯುವವನು ಹೋಳಿ ಹಬ್ಬದ ದಿನ ಹೇಗೆ ಬಿಟ್ಟಾನು? ಜೋಳದ ರಾಶಿ ಮಾಡುವಾಗ ಭಣಿವೆ ವಟ್ಟಲು ನೆರವಾಗಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ದೊಡ್ದಮ್ಮಳೊಂದಿಗೆ ಜಗಳ ಮಾಡಿಕೊಂಡು ಮುಂಜಾನೆ ಊಟ ಮಾಡದೇ ಮನೆ ಬಿಟ್ಟವನು ಈಗ ರಾತ್ರಿಯಲ್ಲಿ ದರ್ಶನ ನಿಡುತ್ತಿದ್ದಾನೆ. ಇಗಲೂ ಬೈಯುತ್ತಲೇ ಬರುತ್ತಿದ್ದಾನೆ. ಅವನ ಬೈಗುಳಗಳೆಂದರೆ ಗಾಯತ್ರಿ (ಕು)ಮಂತ್ರವಿದ್ದಂತೆ. ಊರಿಗೇ ಮಾದರಿಯಾದ ಅಶ್ಲೀಲ ಶಬ್ದಗಳಿಂದ ಮನೆ ಪ್ರತಿಧ್ವನಿತವಾಗುತ್ತಿತ್ತು. ಒಂದೇ ಸವನೆ ಸುರುಹಚ್ಚಿದನ್ನು ಕೇಳಿ ಓಣಿಯ ಜನರೆಲ್ಲ ಮನೆಮುಂದೆ ತಮಾಷೆ ನೋಡಲು ನಿಂತ ಪ್ರೇಕ್ಷಕರಂತೆ ಒಟ್ಟುಗುಡಿದರು. ಬೇಸಿಗೆಯ ಬಿರು ಬಿಸಿಲಿನಲ್ಲಿ ಕೆಲಸ ಮಾಡಿ ದಣಿದ ಹಣ್ಣು ಜೀವಕ್ಕೆ ವಿಶ್ರಾಂತಿ ಬೇಕಾಗಿತ್ತು. ಮುದುಕನ ಕಿರಿಕಿರಿಯಿಂದಾಗಿ ಮುಂಜಾನೆಯ ಊಟ ಮಾಡದೇ ಹೊಲಕ್ಕೆ ಹೋಗಿದ್ದಳು. ಅತ್ತೆ ಊಟ ಮಾಡಿಲ್ಲವೆಂದು ಬುತ್ತಿ ತೆಗೆದುಕೊಂಡು ಹೋಗಬೇಕೆಂಬ ಉದಾರ ಅಂತ:ಕ್ಕರಣವುಳ್ಳ ಸೊಸೆಯಂದಿರು ಮನೆಯಲ್ಲಿ ಇರಲಿಲ್ಲ. ಇದ್ದವರಿಗೆ ಅಂತಹ ಅಂತ:ಕ್ಕರಣವಿಲ್ಲ. ಇದು ನಮ್ಮ ಹಣೆಬರಹ ಎಂದುಕೊಂಡು ಸುಮ್ಮನೆ ಮೂಲೆಯಲ್ಲಿ ಕುಳಿತಳು ದೊಡಮ್ಮ. ಈಗ ಮುದುಕ ಊಟ ಮಾಡದೇ ಯಾರೂ ಊಟ ಮಾಡುವಂತಿಲ್ಲ. ಇತನ ಕೆಂಧುಳಿಯಿಂದ ಎಲ್ಲರೂ ವಿಶ್ಮಿತರಾಗಿದ್ದರು. ಅವನ ಶಾಂತವಾಗುವಿಕೆಯನ್ನು ಕಾಯುತ್ತ ಕುಳಿತರು. ಆದರೆ ದೊಡ್ಡಪ್ಪ ತನ್ನ ಆಟ, ದೊಡ್ಡಾಟ ನಿಲ್ಲಿಸಲೇ ಇಲ್ಲ. ಸುತ್ತ ನೆರೆದ ಜನರನ್ನು ನೋಡಿ ಅವನ ಬೈದಾಟದ ಬಯಲಾಟಕ್ಕೆ ರಂಗೇರಿತ್ತು. ಪ್ರಕಾಶ ಸಮೀಪ ಬಂದು ಸಮಜಾಯಿಸುವ ಧ್ವನಿಯಲ್ಲಿ ಹೇಳಿದ, “ “ಅಪ್ಪ, ಸ್ವಲ್ಪು ಶಾಂತನಾಗು. ಮುಂಜಾನೆಯಿಂದ ರಾತ್ರಿವರ್ಗು ಬರೀ ಕುಡ್ದ ನಿಷೆದಾಗ ಇರ್ತಿ, ನಿನ್ನ ಆರೋಗ್ಯದ ಗತಿ ಏನು? ಏನಾದರೂ ತಿನ್ನು.”” “ “ಲೇ ಕತ್ತೆ,”” ದೊಡ್ಡಮ್ಮನ ಕಡೆಯಿಂದ ಈಗ ಪ್ರಕಾಶನ ಕಡೆ ಹೊರಳಿತು ಬೈಗುಳದ ಉಗಿಬಂಡಿ. “ “ಏನೋ ನನಗೆ ಹುಟ್ಟಿ ನನಗಬುದ್ಧಿ ಹೇಳಾಕ ಬರ್ತಿಯಾ ಬೋಳಿ ಮಗನೆ. ದಿನಾ ಕುಡಿಯಕ ಏನು ನಿಮ್ಮ ತಾತಕೊಡ್ತಾನೇನೋ ದುಡ್ಡ? ಯಾವ ನನ್ನ ಮಗ್ನು ತಗೋ ಈ ಹತ್ತ ರೂಪಾಯಿ ಕುಡಿಲಿಕ ಅಂತ ಕೊಟ್ಟಿರೆನಲೇ? ಹೇಳೋಕ ಬರ್ತಾನೆ ಬಾಹುಬಲಿ!” ಎನ್ನುತ್ತ ಮಕ್ಕಳಿಗೂ, ಅವರ ಹೆಂಡತಿಯರಿಗೂ ಮಂಗಳಾರತಿ ಎತ್ತತೊಡಗಿದ. ತಾಯಿ ತಂದೆ ಮೇಲೆ ಎಷ್ಟೇ ಮಮತೆ ಪ್ರೀತಿ ಇದ್ದರೂ ತಮ್ಮ ಹೆಂಡರನ್ನು ಸಿಕ್ಕಂತೆ ಬೈಯ್ಯುವ ಕುಡುಕ ತಂದೆಯನ್ನು ಯಾವ ಮಗನೂ ಸಹಿಸಿಕೊಳ್ಳುವುದಿಲ್ಲ. ಪ್ರಕಾಶ ಹೇಳಿದ, “ “ಅಪ್ಪ, ನಿನಗೆ ನಷೆ ಹೆಚ್ಚಗ್ಯಾದ. ಸುಮ್ಮನಿದ್ದು ಊಟ ಮಾಡೇಳು ರಾತ್ರಿ ಆಗ್ಯಾದ.”” “ “ರಾತ್ರಿ ಬೆಳಗನ ಕುಡಿತಿನೋ, ಯಾವ ಕೇಳೋಕೆ ಬರ್ತಾನೆ ನೋಡೇ ಬಿಡ್ತೀನಿ. ನೀನು ನಿನ್ನ ಹೆಂಡತಿನ ಕರ್ಕೊಂಡು ಊರ ಬಿಟ್ಟವನು ಮತ್ಯಾಕ ಮರಳಿ ನನ್ನ ಮನೆಗೆ ಬಂದೆ? ತೊಲಗಿ ಹೋಗು, ಸತ್ತು ಹೋಗು, ಹೋಳಿಯಲ್ಲಿ ಸುಟ್ಟು ಭಸ್ಮಾಗಿ ಹೋಗು.”” ಎಲುಬಿಲ್ಲದ ನಾಲಿಗೆ ಏನು ನುಡಿಯುತ್ತಿದೆ ಎಂಬುದರ ಅರಿವು ದೊಡ್ದಪನಿಗಿರಲಿಲ್ಲ. ಹೋಳಿಯ ದಿನದಂದು ತನ್ನ ಗಂಡನಿಗೆ ಅಶುಭ ಶಾಪಕೊಡುತ್ತಿದ್ದಾನಲ್ಲ ಈ ಮುದಿಯಾ ಎಂದು ಪ್ರಕಾಶನ ಹೆಂಡತಿ ಲಕ್ಷ್ಮಿಯ ಕಣ್ಣು ಸಿಟ್ಟಿನಿಂದ ಕೆಂಪಾದವು. ಊಟಕ್ಕೆ ಬೇಡುತ್ತಿದ್ದ ಮಕ್ಕಳನ್ನು ದರದರನೆ ಒಳಗೆ ಎಳೆದುಕೊಂಡು ಧಪ್ಪ ಧಪ್ಪ ಅಂತ ಹೊಡೆಯತೊಡಗಿದ್ದಳು. “ “ತಿನ್ನೋಕೆ ಏನು ಕೊಡಬೇಕು, ವಿಷ ಗಿಷ್ಯಾ ತಿಂದು ಸತ್ತು ಹೋಗೋಣ ಬರ್ರಿ. ಬೇಡ ಬೇಡ ಅಂದ್ರೂ ಕೇಳದೆ ಅಜ್ಜಿ ಮನೆಗೆ ಹೋಗುವ ಅಂತ ಬಂದ್ರಲ್ಲಾ, ಹೊಳಿಯೊಳಗೆ ಹಾಕಿ ಭಸ್ಮ ಮಾಡ್ತಾನಂತೆ. ಏನಿದೆ ಈ ದರಿದ್ರ ಮನ್ಯಾಗ.” ಎಂದು ಗೋಳಾಡುತ್ತ ಮಕ್ಕಳನ್ನು ಹೊಡೆಯುವುದನ್ನು ನೋಡಿ ಪ್ರಕಾಶ ಒಳಗೆ ಬಂದು, “ ಹೊರಗೆ ನಡಿಯೋ ಪಾರಿಜಾತ ಕಮ್ಮಿಯಾಯಿತು ಅಂತ ನೀ ಬ್ಯಾರೆ ಚಾಲು ಮಾಡಿದೆಯಾ ತಿಳಿಗೇಡಿ” ಎನ್ನುತ್ತ ಕಪಾಳಕ್ಕೆರಡು ಕೊಟ್ಟೆಬಿಟ್ಟ. ಲಕ್ಹ್ಮಿ ದೊಡ್ಡದಾಗಿರಾಧಾಂತ ಮಾಡಿದಳು. ಅವಳನ್ನು ಸಂತೈಸಲು ಕಮಲಾ ಒಳಗೋಡಿ ಬಂದಳು. ಅಳುತ್ತಿರುವ ಮಗುವನ್ನು ಎತ್ತಿಕೊಂಡು, “ “ಪ್ರಕಾಶ, ಅಪ್ಪ ಕುಡಿದು ಹುಚ್ಚನಂತಾದ್ರೆ ನೀನು ಕುಡಿಯದೇ ಹುಚ್ಚನಂತೆ ಮಾಡ್ತಿಯೇನು. ನೀ ಹೊರಗೆ ಹೋಗು.”” ಅವನನ್ನು ಹೊರಗೆ ಕಳಿಸಿ ಲಕ್ಷ್ಮಿಗೆ , “ “ನೀ ಯಾಕ ಮನಸ್ಸಿಗೆ ಹಚ್ಚಕೊಂತಿಯೇ ಅದರ ಪಾಡಿಗೆ ಅದು ವದರ್ಯಾಡಿ ಸುಮ್ಮ್ಕಿರತೈತಿ. ಬಾಯಿ ಮುಚ್ಚಿ ಸುಮ್ಕಿರು.”” ಎಂದು ಹೇಳಿ ಮಗುವನ್ನು ಎತ್ತಿಕೊಂಡು ಅಡುಗೆ ಮನೆಗೆ ಹೋದಳು. ಮುದುಕ ಇನ್ನೂ ರಾಗ ಮಾಡುತ್ತಿದ್ದನು. ವಿಕಾಸ ಅವನನ್ನು ಹುಡುಕಿ ಬೇಸತ್ತಿದ್ದನು. ಅಲ್ಲದೇ ಅವನಿಗೆ ಗೆಳೆಯರ ಜೊತೆಗೆ ಕುಳ್ಳ ಕಟ್ಟಿಗೆ ತರೋಕೆ ಅಡವಿಗೆ ಹೊಗಬೇಕಾಗಿತ್ತು ಆದರೆ ಊಟ ಇನ್ನೂ ಮಾಡಿರಲಿಲ್ಲ. ತನ್ನ ಅಕ್ಕ ಹಾಗೂ ಭಾವನೂ ಊಟಮಾಡದೇ ಇರುವುದನ್ನು ಕಂಡು ಸಿಟ್ಟಿಗೆ ಬಂದನು. ಇವನಿಂದಲೇ ಇದೆಲ್ಲ ಆಗಿದ್ದು, ಅಣ್ಣನೂ ಅತ್ತಿಗೆಗೆ ಹೊಡೆದು ಬಿಟ್ಟ ಎಂದು ಬಂದವನೇ “ನೀನೇನು ಬಾಯಿ ಮುಚ್ಚತಿ ಏನ ತಿಂತಿ ಏಟು” ಎಂದವನೇ ಎರಡು ಕಪಾಳಕ್ಕೆ ಬಾರಿಸಿ ಬಿಟ್ಟ. “ “ಸತ್ನೋ ಯಪ್ಪಾ ಕೊಂದ್ನೋ,”” ದೊಡ್ಡಪ್ಪ ಕಿರುಚಾಡಿದನು. ಶೀಲಕ್ಕ ಬಿಡಿಸಿ ವಿಕಾಸನನ್ನು ದೂರ ಸರಿಸಿದಳು. ನನಗೆ ತುಂಬ ಕೆಟ್ಟದೆನಿಸುತ್ತಿತ್ತು. ಅದರೂ ದೊಡ್ಡಪ್ಪನ ಬೈಗುಳಗಳಿಗೆ ನೊಂದು ಹೋಗಿದ್ದೆ. ವಿಕಾಸನ ಕೈ ಹಿಡಿದುಕೊಂಡು, “ನಿಷ್ಯದಾಗ ವದರ್ತಾನೆ ಕೈ ಮಾಡಬೇಡ. ಈ ಏಟಿಗೆ ಸತ್ತ ಹೋದ್ರೆ? ಅವನನ್ನು ಯಾರೂ ಮಾತಾಡ್ಸಿಬೇಡಿ, ಹೋಗಿ ನೀವೆಲ್ಲ, ಜನರೀಗ ನೋಡಿ ಹೆಚ್ಚಿಗೆ ಮಾಡ್ತಾನೆ.” ಎಂದು ಹೇಳಿದೆ. ವಿಕಾಸ ಕೇಳುವ ಮನಸ್ಥಿತಿಯಲಿ ಇರಲಿಲ್ಲ. ತಿರುಗಿ ನನಗೆಯೇ, “ಅಣ್ಣ, ನಮ್ಮ ಮನೆಯ ಕರಭಾರ್ದಾಗ ನೀನು ತಲೆ ಹಾಕಬ್ಯಾಡ. ಇವನನ್ನು ಸಲಿಗೆ ಕೊಡುತ್ತಿರುವುದರಿಂದಲೇ ದಿನ ನೋಡಂಗಿಲ್ಲ ವ್ಯಾಳಿ ನೋಡಂಗಿಲ್ಲ ಹಬ್ಬಿಲ್ಲ ಹುಣ್ಮಿಇಲ್ಲ ಯಾರ ಬಂದಾರ ಬಿಟ್ಟಾರ ನೋಡದೇ ಬರೀ ನಾಟಕ ಮಾಡ್ತಾನ. ಇವನ ಹಲ್ಲು ಮುರಿದು ತೆಪ್ಪಗಿರಿಸ್ತಿನು ಸರಿ ನೀನು.”ಎಂದು ತಂದೆಗಿಂತ ಹೆಚ್ಚು ಬಾಯಿ ಮಾಡತೊಡಗಿದನು. ನನಗೆಯೇ ಗದರಿಸಿದಂತಾಗಿ ಅಪಮಾನಗೊಂಡು ನಾನು ಅವರ ತಮಾಷೆಯನ್ನು ನೋಡಲಾಗದೆ ಅಲ್ಲಿಂದ ಕಾಲು ಕಿತ್ತಿದೆ. ಹೊರಗೆ ಹೋಗುವಾಗ ಹೆಣ್ಣುಮಕ್ಕಳ ದ್ವನಿಗಳು ಕೇಳಿಸಿದವು. “ “ಇವನೇ ಕುಡಿತಾನೇನು ಜಗತ್ನಾಗ?ಬೇರೆ ಯಾರು ಕುಡಿಯುವುದಿಲ್ಲವೇ?ಏನ್ ಬೈಗುಳ ಯವ್ವ ಇವು?”” “ “ಇಂಥವರೇ ಹತ್ತೆಂಟು ಜನ ಆದ್ರ ಹ್ಯಾಂಗವ್ವ ಮಕ್ಕಳು ಖದ್ದಿ ಕಡಿಬೇಕು?”” “ “ನಮ್ಮವ ಎಷ್ಟೇ ಕುಡಿದರೂ ಖಮ್ಮಗೆ ತಿಂದು ತೆಪ್ಪಗೆ ಬಿದ್ದಿರ್ತಾನವ್ವ”” ಮೂಲಿ ಮನೆಯ ಮಲವ್ವ ಬಾಯಿ ಹಾಕಿದಳು ನಾನೇನು ಕಮ್ಮಿ ಎಂಬಂತೆ. “ “ತೆಪ್ಪಗೆ ಬಿದ್ದಾವಾ ಬೆಪ್ಪಾಗಿ ಕಳ್ಳ ಬೆಕ್ಕಿನಂತೆ ಹಿಂದ ಬಂದಾನ ನೋಡಲ್ಲಿ ಮಲ್ಲಿ, ನಿನ್ನ ಕರಿತ್ತಿದ್ದಾನೆ.”” ಬದಿಯಲ್ಲಿದ್ದ ಹೆಂಗಸೊಬ್ಬಳು ಮರೆಯಲ್ಲಿ ನಿಂತು ಇದೆಲ್ಲ ನೋಡುತ್ತಿದ್ದ ಇನ್ನೊಬ್ಬ ಕುಡುಕನನ್ನು ತೋರಿಸುತ್ತ ಕಣ್ಸನೆ ಮಾಡಿದಳು. ಮಲ್ಲಿ ಗಂಡನನ್ನು ನೋಡಿ ಮನೆಗೆ ಓಡಿದಳು. ಅವಳನ್ನು ಹಿಂಬಾಲಿಸಿ ದುರ್ಗಪ್ಪ, “ನಿಲ್ಲೇ ಸೋಗಲಾಡಿ ನನ್ನ ಮನ್ಯಾಗ ಮಲಗಿಸಿ ಯವನ ಹತ್ರ ಹೋಗಿದ್ದಿ?” ಎನ್ನುತ್ತ ಹೊರಟನು. ಮಲ್ಲಿಗೆಗೆ ಈಗ ಒದೆ ತಪಿದಲ್ಲ ಎಂದು ಹೆಂಗಸರಲ್ಲಿ ಗುಸು-ಗೂಡು ಖುಸು-ಖುಸು ಪ್ರಾರಂಭವಾದವು. ನೆರೆ ಮನೆಯ ಪಿರಪ್ಪಜ್ಜ ತಿಳಿಸಲು ಬಂದ, “ “ಏನೋ, ಮಕ್ಕಳು ಮರಿ ಇದ್ದ ತುಂಬಿದ ಸಂಸಾರ, ನೀನಿರೀತಿ ಮಾಡಿದರೆ ಮಕ್ಕಳ ಮನಸ್ಸಿಗೆ ಹ್ಯಾಂಗ ಅನ್ನಿಸಬ್ಯಾಡಾ? ಸುಮ್ಮನಾಗೋ.”” ಪಿರಪ್ಪಜ್ಜನಿಗೂ ಬಿಡಲಿಲ್ಲ ಈ ವೀರ. ಅವನಿಗೂ ಬೈಗುಳಗಳ ಶರ ಬಿಟ್ಟ ಧೀರ. “ “ಯಾವ ನನ್ಮಕ್ಕಳಿಗೂ ನನ್ನ ಮನಿತನದ ಬಗ್ಗೆ ಮಾತಾಡೋ ಅಧಿಕಾರವಿಲ್ಲ. ಇಲ್ಲೇನು ತಮಾಷೆ ನಡೆದಿದೇನು ಹೋಗ್ರಿ ಮನೆಗೆ. ನಿಮ್ಮಿಂದಲೇ ನಮ್ಮನಿ ಸತ್ಯಾನಾಶವಾಗಿರೋದು. ನಿಮ್ಮಂಥವರ ಮಾತು ಕೇಳಿ ಈ ರಂಡೆಮಕ್ಕಳು ನನಗೆ ಎದುರು ವಾದ ಹಾಕ್ತಿದ್ದಾರೆ. ಇವರನ್ನೆಲ್ಲ ರಾಕೆಲ್ ಹಾಕಿ ಜೀವಂತ ಸುಟ್ಟು ಬಿಡ್ತೀನಿ. ಏನಂತ ತಿಳ್ಕೊಂಡಿರಲೇ...ನಾನೇನೋ ಸಿಟೀಲಿ ಇರ್ತೀನಿ. ದೊಡ್ಡ ಶಿರಿಮಂತಾಗಿನಿ ಅಂತ ನೀ ಅಂತಿರಬೇಕು... ನಿನ್ನ ರೊಕ್ಕ ನನಗ ಕಸ. ಇದೇನು ದಾರು ಕುಡಿದು ಬೊಗಳ್ತಾನಂತ ತಿಳಿದಿರಬೇಕು. ನಿಮ್ಮನ್ನ...” .” ಎಂದು ಕಟ ಕಟ ಹಲ್ಲು ಕಚ್ಚಿ ಅತ್ತ ಇತ್ತ ಏನಾದರೂ ಸಿಗುತ್ತದೇನೋ ಎಂದು ನೋಡತೊಡಗಿದನು. ತಂದೆ ಜೋತೆ ನೆಂಟಸ್ತನಮಾಡಲೆಂದು ಬಂದ ಶೀಲಕ್ಕ ಮತ್ತವಳ ಗಂಡ ಸಂತೋಷ ಇತನ ಅವತಾರವನ್ನು ಕಂಡು ದಂಗಾಗಿ ಹೋದರು. ಬೀಗತನದ ಮಾತಾಡಲು ಬಂದರೆ ಇಲ್ಲಿ ಬೇರೆಯೇ ತಮಾಷೆ ನಡೆದಿದೆ. ಈ ಸಂಬಂಧ ಬೇಡವೆಂದು ಹೇಳಿದರೂ ತಮ್ಮನನ್ನೇ ಮಗಳನ್ನು ಕೊಡುವುದಾಗಿ ಹಟ ಹೀಡಿದ ಹೆಂಡತಿಯ ಮನಸ್ಸು ಮುರಿಯಬಾರದೆಂದು ಬಂದಾಗಿದೆ. ಇದೇನು ಮನೆಯೋ ಶ್ಮಶಾನವೋ? ಹತ್ತೆಕರೆ ಹೊಲ ಇದ್ದರೆನಾತು ಮನೆಯಲ್ಲಿ ಕಿರ ಕಿರಿ ಇರದೇ ಮನಸ್ಸಿಗೆ ನೆಮ್ಮದಿ ಇರಬೇಕು. ಕಾಡು ಪ್ರಾಣಿಗಳಂತೆ ಒಬ್ಬರನೊಬ್ಬರು ಹೊಡೆದಾಡುತ್ತ ಬಾಳಿದರೆ ಅದಕ್ಕೆ ಮಾನವ ಜನ್ಮ ಎನ್ನುತ್ತಾರೆಯೇ? ಇಲ್ಲಿ ಒಬ್ಬನ ಆಸರೆ ಇನ್ನೋಬ್ಬನಿಗಿಲ್ಲ. ದೊಡ್ಡ ಮಗ ಸತ್ತ ಮೇಲೆ ಒಂಟಿಯಾದ ಕಮಲಾ ಅತ್ತೆ ಮಾವರ ಜೀವ ಹಿಂಡುತ್ತಿದ್ದಾಳೆ. ಪಟ್ಟಣದಲ್ಲಿದ್ದು ಉಸುಕಿನ ವ್ಯವಸಾಯ ಮಾಡುವ ಪ್ರಕಾಶ ಹಡೆದವರನ್ನು ಮರೆತು ಹೆಂಡತಿ ಮಕ್ಕಳ ಜೊತೆ ಹಾಯಾಗಿ ಇದ್ದಾನೆ. ವಯಸ್ಸಾದ ಅಪ್ಪ ಅಮ್ಮ ಹೇಗಿದ್ದಾರೆ, ಏನು ಮಾಡುತ್ತಿದ್ದಾರೆ, ಏನು ತಿನ್ನುತ್ತಿದ್ದಾರೆ ಎಂದೂ ಕೇಳುವುದಿಲ್ಲ. ಇನ್ನು ನನ್ನ ಅಳಿಯನಾಗಲಿರುವ ವಿಕಾಸ ಇನ್ನೂ ಯಾವ ಉದ್ಯೋಗದಲ್ಲಿ ಇಲ್ಲ. ಪಿ.ಯು.ಸೀ. ಮುಗಿಸಿಕೊಂಡು ಅಲೆಯುತ್ತ ಹೊಲಕ್ಕೆ ಹೋದನೆಂದರೆ ಹೋದ ಇಲ್ಲವೆಂದರೆ ಇಲ್ಲ ಉಂಡಾಡಿ ಗುಂಡನಂತೆ ತಾಯಿ-ತಂದೆಯರ ಜೀವ ತಿನ್ನುತ್ತ ಊರಿನಲ್ಲಿಯ ಲಫಂಗ ಹುಡುಗರ ಜೊತೆ ಅಲೆದಾಡುತ್ತಿರುತ್ತಾನೆ. ಏನಾದರು ಪ್ರಯತ್ನ ಮಾಡಿ ಸಣ್ಣ ಪುಟ್ಟ ನೌಕರಿ ಮಾಡುವಂತಾದರೆ ಸರಿ ಇಲ್ಲವಾದರೆ ನನ್ನ ಮಗಳ ಗತಿ ಏನು? ನೋಡಿ ನೋಡಿ ತಪ್ಪು ಮಾಡುವುದೇ? ರಾತ್ರಿ ಕಂಡ ಬಾವಿಯಲ್ಲಿ ಹಗಲಿನಲ್ಲಿ ಮಗಳನ್ನು ನುಕುವುದೆಂದರೆ ಹೇಗೆ? “ “ಇದೇನಪ್ಪ ಹಿಗ್ಮಾಡ್ತಿ, ವರ್ಷಕ್ಕೊಮ್ಮೆ ನಿಮ್ಮನ್ನೆಲ್ಲ ನೋಡ್ಕೊಂಡ ಹೋಗೋಕಂತ ಬಂದ್ರೆ ನಿಮ್ಮದೀ ರಾಮಾಯಣ ನೋಡೋಕೆ ಬಂದಂತಾಯಿತಲ್ಲ” ಶೀಲಕ್ಕಳ ಧ್ವನಿ ಕೇಳಿ ಸಂತೋಷ ವಿಚಾರಗಳ ಸುಳಿವುಗಳಿಂದ ಮುಕ್ತನಾದ. ಮತ್ತೇ ಶೀಲಕ್ಕ ವಿನಂತಿಸಿದಳು, “ಸ್ವಲ್ಪು ಶಾಂತನಾಗಪ್ಪ ಜನ ಏನ ಅಂತಾರೆ ಗೊತ್ತೇನು? ಹಿರಿ ಮನಷ್ಯಾ ಆಗಿ ತಪ್ಪು ಮಾಡುವ ಹುಡುಗರಿಗೆ ಬುದ್ದಿ ಹೇಳಬೇಕಾದ ನೀನು ಹುಡುಗರಂತೆ ಮಾಡಿದರೆ ಇನ್ನೂ ಮುಂದೆ ನಿಮ್ಮ ಮುಖ ಸಹಿತ ನೋಡೋಕೆ ಬರುದಿಲ್ಲ ನಾನು.” “ “ಹೇ ಬರಬ್ಯಾಡ ಹೋಗು. ನನಗ್ಯಾರ ಅವಶ್ಯಕತೆನೂ ಇಲ್ಲ. ನಾ ಇದ್ದೀನಿ ಸ್ವತಂತ್ರ ಇದ್ದೀನಿ. ಯಾವ ನನ್ಮಕ್ಕಳು ತಗೋ ಒಂದ ನೈಂಟಿ ಕುಡಿ ಅಂತ ಹತ್ತ ಪೈಸೆ ಕೊಟ್ಟಿಲ್ಲ. ಇಂಥವರ ಆಶ್ರಯ ನನಗೆ ಬೇಕಾಗಿಲ್ಲ. ಹತ್ತ ಎಕರೆ ಆಸ್ತಿ ಐತಿ ಮಾರಿ ಸಾಯೋಮಟ ಹಾಯಾಗಿ ಕುಡಿದುಂಡು ಇರ್ತೀನಿ.”” ಎಂದು ತನ್ನ ಧಿಮಾಕಿನಲ್ಲಿ ಹೇಳಿದನು. ವಿಕಾಸ ಹೊರಗೆ ಬರುತ್ತಾ, “ “ಹೇ ಹೇ ಕಂಡಾಪಟ್ಟಿ ಬೆವರು ಸುರಿಸಿ ಲಕ್ಷ್ಯನುಗಟ್ಟಲೆ ಆಸ್ತಿ ಇಟ್ಟಿದಿ ನೋಡ ನಮಗ, ದಾರು ಕುಡಿ ಅಂತ ರೊಕ್ಕ ಕೊಡ್ತೀವಿ ನಿನಗ.”” ವಿಕಾಸನ ಧ್ವನಿ ಕೇಳಿದೊಡನೆ ದೊಡ್ಡಪ್ಪ ಗವಿಯಿಂದ ಹುಲಿ ಆರ್ಭಟಿ ಬರುವಂತೆ ಬಡಿಗೆ ಹಿಡಿದು ವಿಕಾಸನಿಗೆ ಹೊಡೆಯಲು ಬೆನ್ನಟ್ಟಿದನು. “ “ಬಾ ಮಗನಾ. ನನಗೆ ಹೊಡೆದೆಯಲ್ಲ, ನಿನ್ನ ಕೈ-ಕಾಲು ಮುರಿತಿನಿ.” ವಿಕಾಸ ಮುಂದೆ ಮುಂದೆ, ದೊಡ್ಡಪ್ಪ ಹಿಂದೆ ಹಿಂದೆ ಹೀಗೆ ಮನೆಯ ಒಂದು ಸುತ್ತು ಹಾಕಿ ಕತ್ತಲೆಯಲ್ಲಿ ತಪ್ಪಿಸಿ ವಿಕಾಸನು ದೇವಿ ಗುಡಿಯಕಡೆಗೆ ಹೋಗಿ ಬಿಟ್ಟನು. ದೊಡ್ಡಪ್ಪ ಮಾತ್ರ ಬೈಯ್ಯುತಲೇ ಮನೆಯ ಸುತ್ತ ತಿರುಗಾಡಿ ಸುಸ್ತಾಗಿ ಮಕ್ಕಳಿಗಾಗಿ ಹಾಸಿದ ಹಾಸಿಗೆಯ ಮೇಲೆ ಕುಳಿತುಕೊಂಡು ಸಿಟ್ಟಿನಿಂದ ಎರಡೂ ಕೈಗಳಿಂದ ತಲೆಯನ್ನು ಹಿಡಿದುಕೊಂಡನು. ಯಾರೂ ಏನು ಹೇಳುವಂತಿರಲಿಲ್ಲ. ಹೇಳಲು ಹೋದರೆ ಕೈಯಲ್ಲಿರೋ ಕಟ್ಟಿಗೆಯಿಂದ ಹೊಡೆಯುತ್ತಾನೆ ಎಂದು ಎಲ್ಲರಿಗೂ ತಿಳಿದಿತ್ತು. ಹಾಗಾಗಿ ಸ್ವಲ್ಪು ಸಮಯ ಯಾರೂ ಅವನನ್ನು ಮಾತಾಡಿಸಲೇ ಇಲ್ಲ. ಮಾಡಿದ ಅಡುಗೆ ತಣ್ಣಗಾಗಿತ್ತು. ಕಮಲಾ ಗಾಬರಿಯಾಗಿ ಈ ಕೋಣೆಯಿಂದ ಆ ಕೋಣೆಗೆ ಬಂದ ಬೀಗರನ್ನು ಊಟಕ್ಕೆ ಕರೆಯಲು ಓಡಾಡುತ್ತಿದ್ದಳು. ಮನೆಯಲ್ಲಿ ಹೀಗೆ ರಂಪಾಟವಾಗುತ್ತಿರುವಾಗ ಬೀಗರಿಗೆ ಊಟ ಹೇಗೆ ಗಂಟಲಲ್ಲಿ ಇಳಿದ್ದಿತ್ತು? ಸಂತೋಷ ಪ್ರಕಾಶನ ಕೋಣೆಯ ಕಡೆ ನೋಡಿದ. ಪ್ರಕಾಶ ತನ್ನ ಹೆಂಡತಿಯನ್ನು ಹೊಡೆದುದಕ್ಕಾಗಿ ಅವಳನ್ನು ವಲಿಸಿಕೊಳ್ಳಲು ಹರಸಾಹಸ ಮಾಡುತ್ತಿದ್ದರೂ ಆ ಭಾಗ್ಯ ಲಕ್ಷ್ಮಿ ಪ್ರಸನವಾಗಿರಲಿಲ್ಲ. ಅವಳಲ್ಲಿ ಈಗ ಚಂಡಿ ಚಾಮುಂಡಿ ಸೇರಿಕೊಂಡಿದ್ದಳು. ಮುದುಕನ ಸಿಟ್ಟು ಮಕ್ಕಳ ಮೇಲೆ ತೆಗೆದು ಗಂಡನಿಂದ ಬಡಿಸಿಕೊಂಡು ಹಾಸಿಗೆಯಲ್ಲಿ ಬಿಕ್ಕುತ್ತ ಬಿದ್ದಿದ್ದಳು. ತಪ್ಪಾಯಿತು ಏಳು ಊಟಕ್ಕೆ ನಾಳೆನೇ ನಿನಗೆ ಊರಿಗೆ ಕಳುಹಿಸಿ ಕೊಡುತ್ತೇನೆ ಎಂದು ಪರಿ ಪರಿಯಾಗಿ ವಿನಂತಿಸಿದ್ದರೂ ಏಳದ್ದಿದಾಗ ಇನ್ನೆರಡು ಕಪಾಳಕ್ಕೆ ಬಾರಿಸಿ ಹೊರ ನಡೆದನು. ದೊಡ್ದಪ್ಪನನ್ನು ಯಾರೂ ಮಾತಾಡಿಸದೇ ಹೋದಾಗ ಕುಳಿತ ಹಾಸಿಗೆಯನ್ನೇ ಮಡಚಿ ಬಗಲಿಗೆ ಹಿಡಿದುಕೊಂಡು ‘ಎಷ್ಟೇ ದಿನ ಇಲ್ಲಿ ಉಪವಾಸ ಸತ್ತರೂ ಒಂದು ಗ್ಲಾಸ ನೀರು ಸಹಿತ ಕೆಳುದಿಲ್ಲ ಮುಂಡೆ ಮಕ್ಕಳು.’ ಎಂದು ವಟಗುಟ್ಟುತ್ತ ಊರ ಹೊರಗಿರುವ ಶಾಲೆಯಲ್ಲಿ ಬಂದು ಮಲಗಿಕೊಂಡನು. ಶೀಲಕ್ಕ ತನ್ನ ಮನಸ್ಸಿಗೆ ನೋವಾಗಿ ಎಲ್ಲರನ್ನು ಕುರಿತು, “ “ದಿನಾ ನೀವು ಹಿಂಗ ಮಾಡಿದರೆ ಏನರ್ಥ? ಅವನು ಕುಡಿದು ಬಂದ್ರೆ ಅವನ ಪಾಡಿಗೆ ಬಿಟ್ಟಬಿಡಿ. ಅವನಿಗೇನೂ ಅನ್ನಕ ಹೋಗಬೇಡಿ. ಏಳಿ ಎಲ್ಲರೂ ಊಟ ಮಾಡ್ಕೊಳ್ಳಿ.” ಎನ್ನುತ್ತ ಒಂದು ತಟ್ಟೆಯಲ್ಲಿ ಪಲ್ಲ್ಯೆ ಹಚ್ಚಿಕೊಂಡು ಎರಡು ರೊಟ್ಟಿ ಒಂದು ಲೋಟ ನೀರು ತೆಗೆದುಕೊಂಡು ಶಾಲೆಯಲ್ಲಿ ಬಂದು ಅಪ್ಪನನ್ನು ಎಬ್ಬಿಸಿದಳು. ಬಹಳ ಸಮಯದಿಂದ ಮಲಗಿದವನಂತೆ ಗೊರಕೆ ಹೊಡೆಯುತ್ತ ಹೆಣ ಬಿದಂತೆ ಬಿದ್ದಿದ್ದನು ಆದರೆ ಊಟಕ್ಕೆ ಮಾತ್ರ ಏಳಲಿಲ್ಲ. ಶೀಲಕ್ಕಳ ಕಣ್ಣಲ್ಲಿ ನೀರು ಬಂದಿತು. ನಾನು ಹಿಂದೆ ಬರುವುದನ್ನು ನೋಡಿ ಸೆರಗಿನಿಂದ ಕಣ್ಣೀರು ಒರೆಸುತ್ತ, “ “ಅಪ್ಪ ಊಟ ಮಾಡು ಏಳಪ್ಪ.”” ಎಂದು ಕರೆದಳು. “ “ಅಕ್ಕ, ಇವಂದು ದಿನಾ ಇದೇ ಹಾಡು. ನೀನೇನು ಮನಸ್ಸಿಗೆ ಹಚ್ಚಿಕೋ ಬೇಡ. ಈಗೇನ ಇತ ಊಟಮಾಡುವುದಿಲ್ಲ. ಮಲಗಲಿ ಬಿಡು. ರಾತ್ರಿ ಹಸಿವೆಯಾದ್ರೆ ತಾನೆ ಮನೆಗೆ ಬರ್ತಾನೆ. ನೀವೆಲ್ಲ ಹೋಗಿ ಊಟ ಮಾಡಿ ಮಲಗಿಕೊಳ್ಳಿ. ರಾತ್ರಿ ಬಹಳವಾಗಿದೆ.” ಎಂದು ಹೇಳಿ ಅವಳನ್ನು ಮನೆಗೆ ಕಳುಹಿಸಿದೆ. ಹೋಳಿ ಹಾಡುಗಳನ್ನು ಹಾಡುತ್ತ ಕಿರಚಾಡುತ್ತ, ಚೆಸ್ಟೆಮಾಡುತ್ತ ನಗುತ್ತ ತರುಣರ ಗುಂಪೊಂದು ಅಗಸಿ ಬಾಗಿಲಿನಿಂದ ಶಾಲೆ ಕಡೆಗೆ ಬರುತ್ತಿತ್ತು. ಊರಿನ ಜನರೆಲ್ಲ ಹೊಟ್ಟೆ ತುಂಬ ಉಂಡು ಹೋಳಿಯಲ್ಲಿ ನಲಿಯುತ್ತಿದ್ದರೆ ನಮ್ಮ ಮನೆಯಲ್ಲಿ ಮಾತ್ರ ದೊಡ್ಡಪ್ಪನ ಕರ್ಣ ಕರ್ಕಶವಾದ ಅಶ್ಲೀಲ ಅರ್ವಾಚ್ಯ ನುಡಿಗಳನ್ನು ಕೇಳಿ ಪುನಿತರಾಗುತ್ತಿದ್ದೆವು. - -ದಿನೇಶ ಠಾಕೂರದಾಸ ಚವ್ಹಾಣ