top of page

ಕೈತಿಂಡಿ

ಸಂಜೆಗಳಾದವು ಎಂದರೆ, ಅಮ್ಮ ಬಾಗಿಲಿಗೆ ನೀರು ಹಾಕಿ, ತಮ್ಮ ತಂಗಿಯರನ್ನು ಬಗಲಿಗೋ ಕಂಕುಳಿಗೋ ಎತ್ತಿಕೊಂಡು, ಮನೆಯೊಳಗೆ ಹೊರಟು ಬಾಗಿಲು ಹಾಕಿಕೊಳ್ಳುತ್ತಿದ್ದಳು, ಅಲ್ಲಿಗೆ ಸೊಳ್ಳೆಗಳು ಮನೆಯೊಳಗೆ ಬಾರದು ಎಂಬುದು ಖಾತ್ರಿಯಾಗುತ್ತಿತ್ತು.   ಕರಿಹಲಗೆಯ ಸ್ಲೇಟ್ ಮೇಲೆ ಬಿಳಿ ಬಳಪ ಹಿಡಿದುಕೊಂಡು, ದೊಡ್ಡದಾಗಿ ಅ, ಆ ಇ,ಈ ಗೀಚಿ ತೋರಿಸುತ್ತಿದ್ದರೆ, ಅವಳು ನಾವು ನಾಲ್ಕು ಮಕ್ಕಳನ್ನು ನೋಡಿಕೊಳ್ಳುತ್ತಾ, ಬಿಸಿ ಬಿಸಿ ರೊಟ್ಟಿ ಬಡಿದು ತುತ್ತು ಕೊಡುತ್ತಿರುತ್ತಿದ್ದಳು.  ಅವಳು ಕೊಟ್ಟದ್ದೆಲ್ಲಾ ನಮಗೆ ಪರಮಾನ್ನ.  ಮಳೆಕಾಡಿನ ಗುಡ್ಡದ ಮೇಲಿನ ದೊಡ್ಡ ಮನೆಯಲ್ಲಿ ನಾವು ಹೊರಪ್ರಪಂಚಕ್ಕೆ ತೆರೆದುಕೊಂಡಿದ್ದು ಅಮ್ಮ ಹೇಳುವ ಕತೆಗಳ ಮುಖಾಂತರ.  ಅವಳು ಹೇಳಿದ್ದೇ ವೇದವಾಖ್ಯ.  ನೀಡಿದ್ದೆಲ್ಲಾ ಅಮೃತ ಅಂತ ಹೊಟ್ಟೆ ತುಂಬಾ ತಿಂದು ಆಟ ಆಡಿಕೊಳ್ಳುತ್ತಿದ್ದೆವು.  ಒಂದು ದಿನ ಅಮ್ಮ ಉಗುರುಬಣ್ಣ ತೋರಿಸಿದ್ದಳು, ಅಲ್ಲಿಯತನಕ ನಾವ್ಯಾರು ಅದನ್ನು ಕಂಡಿದ್ದಿಲ್ಲ. 

ಹೊಸ ಹೊಸ ರುಚಿಗಳಿಗೆ ನಾವು ಅಮ್ಮನ ತಿಂಡಿಯನ್ನು ಜರಿಯದೇ ಜಾರಿದ್ದು ಅಪ್ಪನ ಕೈತಿಂಡಿಯನ್ನು ಸವಿಯುವಾಗ.  ಅಪ್ಪ ಮನೆಗೆ ಬರುತ್ತಿದ್ದೆಲ್ಲಾ ಸೂರ್ಯ ಜಾರಿದ ಮೇಲೆ, ಹಾಗೆ ಬರುವಾಗ ಕೈತುಂಬಾ ತಿಂಡಿ ಪೊಟ್ಟಣಗಳನ್ನು ತರುತ್ತಿದ್ದರು.  ಅಮ್ಮ ಅದನ್ನೆಲ್ಲಾ ಹಂಚುವಾಗಲೂ ಒಂದು ಶಿಸ್ತು ಇರುತ್ತಿತ್ತು.  ಆಕೆಗೆ ಎಲ್ಲಾ ಮಕ್ಕಳೂ ಒಂದೇ,  ನಾನು, ಅಕ್ಕ, ತಂಗಿ, ತಮ್ಮ, ಜೊತೆಗೆ ಓದಲು ಬಂದಿರುತ್ತಿದ್ದ ನಂಟರ ಮಕ್ಕಳು.  ಎಲ್ಲರನ್ನೂ ಕೂರಿಸಿಕೊಂಡು, ನಡುವಲ್ಲಿ ತಿಂಡಿ ಪೊಟ್ಟಣಗಳನ್ನು ಬಿಚ್ಚುತ್ತಿದ್ದರೆ ಅದರ ಘಮಲಿನಿಂದಲೇ ತಿಂಡಿ ಯಾವುದೆಂಬ ಊಹೆಯೂ ನಿಜವಾಗಿರುತ್ತಿತ್ತು.  ಮೊಟ್ಟೆ ಬೊಂಡ, ವಡೆ, ಆಲೂ ಬೊಂಡಾ, ಮಸಾಲೆ ದೋಸೆ-ಗಟ್ಟಿ ಚಟ್ನಿ, ಬಿರ್ಯಾನಿ, ಪಕೋಡಾ, ಕರಿದ ಮೀನು,  ಇಡ್ಲಿ, ಜಾಮೂನು, ರವುಂಡಾಗಿ ಕಳಚುವ ಪರೋಟಾಗಳು, ಬೇಕರಿಯಿಂದ ಬರುತ್ತಿದ್ದ ಬ್ರೆಡ್, ಬ್ರೆಡ್ ಆಮ್ಲೆಟ್, ರಸ್ಕ್, ಬನ್, ಖಾರಾ ರೊಟ್ಟಿ, ಸ್ಯಾಂಡ್ ವಿಚ್, ಖಾರಾಬನ್, ವಿವಿಧ ಪ್ರಾಣಿ, ಪಕ್ಷಿಗಳ ಆಕಾರಗಳ ಬಿಸ್ಕೆಟ್, ಕ್ರೀಮ್ ಬಿಸ್ಕೆಟ್, ಲಡ್ಡು, ಹಲ್ವಾ, ಚಿಪ್ಸ್, ಇನ್ನೂ ಏನೇನೋ, ಬೇಸಿಗೆ ಬಂದರೆ ಹಣ್ಣುಗಳು, ಐಸ್ ಕ್ರೀಮ್, ಕೋಲ್ಡ್ ಆದ ಸಾಫ್ಟ್ ಡ್ರಿಂಕ್ಸ್,  ಹೀಗೇ ಏನೇನೋ.. ಎಷ್ಟೋಂದು ತರಾವರಿ ತಿಂಡಿಗಳನ್ನು ತಿನ್ನಿಸುತ್ತಿದ್ದರು.  ಒಮ್ಮೆ ತಂದಿದ್ದ ಮ್ಯಾಂಗೋ ಪ್ಲೇವರ್ಡ್ ಐಸ್ ಕ್ಯಾಂಡಿ ನನಗೆ ರುಚಿ ಅನ್ನಿಸಲಿಲ್ಲ, ಅದನ್ನು ಅಕ್ಕನಿಗೆ ಕೊಟ್ಟುಬಿಟ್ಟಿದ್ದೆ, ಅದೊಂದು ಬಿಟ್ಟರೆ ಮತ್ಯಾವ ತಿಂಡಿಯನ್ನು ಉಳಿಸಿದ ನೆನಪಿಲ್ಲ. 

ಕದ್ದು ತಿನ್ನುವ ಚಪಲದಿಂದಂತೂ  ಕೆಲವೊಮ್ಮೆ ಯಾರಿಗೂ ಗೊತ್ತಿಲ್ಲದಂತೆ ಅಪ್ಪ ತಂದ ತಿಂಡಿಯನ್ನ ನಾನೇ ಮುಗಿಸಿದ್ದದ್ದು ಇದೆ, ಅಮ್ಮ ಮೇಲಿನ ಶೆಲ್ಫ್ ನಲ್ಲಿ ಇಟ್ಟಿದ್ದ ಯಾವುದೇ ತಿಂಡಿಯನ್ನು ನನ್ನ ಹೊರತು ಇನ್ನಾರೂ ತಿಂದಿರಲಿಲ್ಲ.  ತೀರಾ ಹಳೆಯ ನೆನಪನ್ನು ಕೆದಕಿದರೆ ಅಪ್ಪನ ಬಳಿ ಒಂದು ಅವಂತಿ ಗಾಡಿ ಇತ್ತು, ಅದರ ಸೀಟಿನ ಕೆಳಗೆ ಒಂದಿಷ್ಟು ಜಾಗ ಇರುತ್ತಿತ್ತು, ಅದರಲ್ಲಿ ಎಷ್ಟೋ ಸಲ ರಸ್ಕ್, ಬಿಸ್ಕೆಟ್ ಇತ್ಯಾಧಿ ಏನೆನೋ ನಾನೇ ಮೊದಲು ಹುಡುಕಿ ತೆಗೆದು ಕದ್ದು ತಿಂದದ್ದು ನೆನಪಿದೆ, ಆಮೇಲೆ ಅಪ್ಪ ಕೇಳಿದಾಗ  ‘ಹೌದು, ಸ್ವಲ್ಪ ತಿಂದಿದ್ದೆನೆ’ ಎಂದು ಪ್ಯಾಕೆಟ್ ಮರಳಿ ತೆಗೆದುಕೊಟ್ಟದ್ದೂ ಇದೆ. 

ಕೈತಿಂಡಿಗಳೆಲ್ಲಾ ಎಲ್ಲಿ ತಯಾರಾಗುತ್ತವೆ, ಎಂದು ಹೆಚ್ಚೇನೂ ನನಗೆ ಹೊಳೆದಿರುತ್ತಿಲ್ಲ, ಆದರೆ ಅಪ್ಪ ತಿಂಡಿ ಕೊಟ್ಟು ನಾವೆಲ್ಲಾ ಮೇಯುವಾಗ, ಅದರ ಹಿನ್ನೇಲೆಯನ್ನು ರಸವತ್ತಾಗಿ ವಿವರಿಸುತ್ತಿದ್ದರು.  ಚಿಕ್ಕಮಗಳೂರಿನ ಗಲ್ಲಿಗಲ್ಲಿಯಲ್ಲಿಯೂ ಉತ್ಕೃಷ್ಟ ರುಚಿಯದ್ದು ಎಲ್ಲಿ ಲಭಿಸುತ್ತದೆ ಎಂಬುದು ಅಪ್ಪನಿಗೆ ಚೆನ್ನಾಗಿ ಗೊತ್ತಿತ್ತು.  ಜಿಲೇಬಿ, ಪಕೋಡಾ ದಿಂದ ಹಿಡಿದು ಫೈವ್ ಸ್ಟಾರ್ ಹೋಟೆಲೊಂದರಲ್ಲಿ ಬಿರ್ಯಾನಿ ಪೊಟ್ಟಣಗಳನ್ನು ತರುತ್ತಿದ್ದರು.  
ಯಾವಾಗಲೂ ಖುಷಿಯಾಗಿ, ದಿಲ್ ದಾರ್ ಆಗಿ ಇರುತ್ತಿದ್ದ ಅಪ್ಪನಿಗೆ, ಅಮ್ಮ ಒಮ್ಮೊಮ್ಮೆ ರೋಪು ಹಾಕಿ, ಕೆಲವು ವಿಚಾರಗಳನ್ನು ಖಡಕ್ಕಾಗಿ ಕೇಳಿದಾಗ ಮನೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗುತ್ತಿತ್ತು, ಅಂತಹ ಸಂದರ್ಭಗಳಲ್ಲಿ ಕೈತಿಂಡಿಯ ವಾಸನೆ ಎಷ್ಟು ಜೋರಾಗಿ ಮೂಗಿಗೆ ಬಡಿದರೂ, ಅಪ್ಪನನ್ನು ಪ್ರತ್ಯೇಕ ವ್ಯಕ್ತಿಯಂತೆಯೇ ನೋಡಬೇಕಾಗುತ್ತಿತ್ತು, ಏಕೆಂದರೆ ಇಲ್ಲಿ ಅಮ್ಮನ ಪಾರ್ಟಿ ಸೇರಿರುತ್ತಿದ್ದೆವು, ಅಪ್ಪ ಹೇಗಿದ್ದರೂ ಡ್ಯೂಟಿ ನಡುವೆ ಮನೆಯಲ್ಲಿರುತ್ತಿದ್ದುದು ಕಡಿಮೆ.  ಅಮ್ಮನ ಕೋಪತಾಪ ತಗ್ಗುವವರೆಗೂ ನಾವು ಏನನ್ನು ತಿನ್ನಲು ಹೋಗುತ್ತಿರಲಿಲ್ಲ, ಕೆಲವೊಮ್ಮೆ ಮನೆಯಲ್ಲಿಮಾಡಿದ ಊಟವನ್ನೂ ಬಿಟ್ಟು ಮಲಗಿದ್ದೂ ಇದೆ.  ಆದರೂ ಊಟದ ಮೇಲಿರದ ಗಮನ, ಕೈತಿಂಡಿಯ ಮೇಲೆ ಆನಾಯಾಸವಾಗಿ ಎಳೆದುಕೊಂಡು ಹೋಗುತ್ತಿತ್ತು.  ಏನೇ ಆಗಲಿ, ನಾವು ಅಮ್ಮನೇ ಕೈಎತ್ತಿ ಎಲ್ಲರಿಗೂ ಕೊಡುವವರೆಗೂ ತಿನ್ನುತ್ತಿರಲಿಲ್ಲ, ಏಕೆಂದರೆ ಈ ಪೊಟ್ಟಣಗಳು ದೊಡ್ಡವು. 

ಈಗ ಕೈತುಂಬಾ ಸಂಬಳ ಇದ್ದರೂ, ಅಪ್ಪ ಕೊಡಿಸುತ್ತಿದ್ದ ವೆರೈಟಿಗಳನ್ನು ಮನಸ್ಸು ಹುಡುಕಲು ಹೋಗುತ್ತಿಲ್ಲ, ಆದರೆ ಅಪ್ಪನ ಮನೆಗೆ ಹೆಜ್ಜೆ ಇಟ್ಟರೆ ಮರಳಿ ಮಗಳ ವಯಸ್ಸಿಗೆ ನಾನೇ ಮರಳುತ್ತೇನೆ, ಮಗಳಿಗೂ ನನಗೂ ಶೇರಿಂಗ್ ನಲ್ಲಿ ಜಗಳವೂ ಆಗುತ್ತದೆ.  ಆದರೆ ಮಳೆಯ ನಡುವೆ ಬಿಸಿಯಾಗಿ ನಾಲ್ಕು ಮಕ್ಕಳಿಗೆ ಅಪ್ಪ ತರುತ್ತಿದ್ದ ಕೈತಿಂಡಿಯ ಬೆಲೆ ಅಳೆಯಲಾಗದು.  ಒಮ್ಮೆ ಕುದುರೆಮುಖದಲ್ಲಿದ್ದಾಗ ಅಪ್ಪ ಮಂಗಳೂರಿನಿಂದ ಬಂದ ಮೀನಿ ತರಲು  ಎಲ್ಲೆಲ್ಲೋ ಬ್ಯಾಗ್ ಅಡ್ಜೆಸ್ಟ್ ಮಾಡಿಕೊಂಡು ಮೀನು ಹಾಕಿಸಿಕೊಂಡು ತಂದಿದ್ದರು.   ಅಪ್ಪನಿಗೆ ನಾಲ್ಕು ಮಕ್ಕಳ ನಡುವೆ ಯಾವುದೇ ಬೇದ ಭಾವ ಇರಲಿಲ್ಲ, ಅವರೇನು ಮಕ್ಕಳನ್ನು ಗಟ್ಟಿಮುಟ್ಟಾಗಿ ಬೆಳೆಸಬೇಕು ಎಂಬ ಫಾರ್ಮುಲಾಗೆ ಅಂಟಿಕೊಂಡಿರಲಿಲ್ಲ,  ಮನೆಗೆ ಹೋಗುವಾಗ ಮಕ್ಕಳು ಕೈ ನೋಡುತ್ತವೆ ಅನ್ನುವುದೊಂದು small thought, ಅದನ್ನು ಪಕ್ಕಾ ಅಪ್ಪನಂತೆ ನಡೆಸಿಕೊಂಡು ಬಂದಿದ್ದರು.  ಜೇಬಿನಲ್ಲಿ ದುಡ್ಡಿರಲಿ ಬಿಡಲಿ, ಅದೇಗೆ ಹೊಂದಿಸುತ್ತಿದ್ದರೋ ಗೊತ್ತಿಲ್ಲ, ಅಮ್ಮನ ರುಚಿಕಟ್ಟಾದ ಮನೆಯ ಅಡುಗೆಯ ಜೊತೆಗೂ ನಾವು ಅಪ್ಪನ ಕೈತಿಂಡಿಗೆ ನಿರಂತರ ಕಾಯುತ್ತಲೇ ಇರುತ್ತಿದ್ದೆವು.  ತಿಂಡಿಪೋತರು ಅಂತ ಅಪ್ಪನ ಮಕ್ಕಳಿಗೆಲ್ಲಾ ಅನ್ವರ್ಥನಾಮ ಇದ್ದೇ ಇತ್ತು.  ಆದರೂ ತರಾವರಿ ತಿಂಡಿ ತರುವ ಅಪ್ಪನ ಮಕ್ಕಳು ತಿಂಡಿಪೋತರಾಗದೆ ಬೇರೆ ದಾರಿಯೂ ಇರಲಿಲ್ಲ.   ಮಳೆಗಾಲ, ಬೇಸಗೆ, ಚಳಿಗಾಲಕ್ಕೆ ಬದಲಾಗುತ್ತಿದ್ದ ಕೈತಿಂಡಿಗಳು ನೆನೆದರೆ ಈಗಲೂ ಬಾಯಲ್ಲಿ ನೀರೂರುತ್ತದೆ.

ಲಹರಿ – ನಳಿನ ಡಿ.

ಕೈತಿಂಡಿ
bottom of page