ಕಬೀರ ಕಂಡಂತೆ...೮೮
ಮನದ ಭಾವನೆಗೆ ಮುಖವೆ ಕನ್ನಡಿ... ಪ್ರೇಮ ಛಿಪಾಯಾ ನಾ ಛಿಪೆ, ಯಾ ಘಟ ಪರಗಟ ಹೋಯ| ಜೊ ಪೈ ಮುಖ ಬೋಲೈ ನಹಿ, ನೈನ ದೇತ ಹೈಂ ರೋಯ|| ಮನುಷ್ಯ ಭಾವನಾ ಜೀವಿ. ಆತನ ಮನಸ್ಸಿನ ಭಾವನೆಗಳು ಒಂದಿಲ್ಲೊಂದು ರೀತಿಯಲ್ಲಿ ಪ್ರಕಟ -ಗೊಳ್ಳುತ್ತಲೇ ಇರುತ್ತವೆ. ನಗು, ಸಂತಸ, ಕೆಮ್ಮು ಮುಂತಾದವುಗಳನ್ನು ಮುಚ್ಚಿಡುವ ಪ್ರಯತ್ನ ನಡೆದಿದರೂ ಕೊನೆಗೂ ಅವುಗಳು ಹೊರಬರುವಂತೆ ಮನಸ್ಸಿನ ಎಲ್ಲ ಭಾವನೆಗಳು ಸಹ ಒಮ್ಮೆಯಾದರೂ ವ್ಯಕ್ತವಾಗದೇ ಇರಲಾರವು. ಬಾಯಿ ಬಿಟ್ಟು ಹೇಳದ ಭಾವಗಳು ವ್ಯಕ್ತಿಯ ಮುಖ ಚಹರೆಯಲ್ಲಿ, ಕಣ್ಣು -ಗಳಲ್ಲಿ, ಚಲನವಲನಗಳಲ್ಲಿ ಖಂಡಿತ ಕಂಡು ಬರುತ್ತವೆ. ಆದರೆ ಎಲ್ಲ ಅಂಗಗಳಿಗಿಂತ ಮನುಷ್ಯನ ಮನಸ್ಸನ್ನು ಪ್ರಕಟಗೊಳಿಸುವಲ್ಲಿ ಕಣ್ಣು ಪ್ರಧಾನ ಪಾತ್ರ ವಹಿಸುತ್ತವೆ. ನಗು, ತುಂಟತನ, ಭಯ, ಕಳವಳ, ನೋವು ಮುಂತಾದವುಗಳನ್ನು ವ್ಯಕ್ತ ಮಾಡುವ ಪ್ರಭಾವಶಾಲಿ ಮಾಧ್ಯಮವೆಂದರೆ ಕಣ್ಣು! ಪ್ರೇಮ ನಿವೇದನೆ ಮಾಡುವಾಗ ಕಣ್ಣುಗಳ ಪಾತ್ರ ಮುಖ್ಯವಾದದ್ದು ಎಂಬುದು ತಜ್ಞರ ಅಭಿಪ್ರಾಯ. ಕಣ್ಣಲ್ಲಿ ಕಣ್ಣಿಟ್ಟು ನೋಡಿದಾಗ ಮನುಷ್ಯನ ಅಂತರಂಗದ ತಾಕಲಾಟಗಳು, ತವಕ-ತಲ್ಲಣಗಳು, ನೋವು, ಆನಂದ, ಮಮತೆ ಎಲ್ಲವೂ ಸಹ ಕನ್ನಡಿ -ಯಷ್ಟೇ ಸ್ಪಷ್ಟವಾಗಿ ಕಾಣಸಿಗುತ್ತವೆ. ಈ ಹಿನ್ನೆಲೆಯಲ್ಲಿ ಸಂತ ಕಬೀರರು, ಪ್ರೇಮ ಮುಚ್ಚಿಡು ಬಿಚ್ಚಿಡು, ಅದು ಪ್ರಕಟಗೊಂಡೀತು| ಬಾಯಲ್ಲಿ ಹೇಳದಿದ್ದರೂ ಸಹ, ಅದು ಕಣ್ಣಲ್ಲಿ ಕಂಡೀತು|| ಎನ್ನುತ್ತ ಪ್ರೇಮ ಮುಚ್ಚಿಡುವದು ಅಸಾಧ್ಯ. ಬಾಯಿ ಮುಚ್ಚಿದರೂ ಸಹ ಕಣ್ಣುಗಳಿಂದ ಹೊರಸೂಸುವ ಭಾವಗಳು, ಹರಿಯುವ ಆನಂದಾಶೃಗಳು ಪ್ರೇಮ ನಿವೇದನೆ ಅಥವಾ ಸಂತಸವನ್ನು ಪ್ರಕಟಪಡಿಸುತ್ತದೆ ಎಂದಿದ್ದಾರೆ. ಕಣ್ಣು ಮನಸ್ಸಿನ ಕನ್ನಡಿ ಇದ್ದಂತೆ. ತಾಯಿಯ ಮಮತೆ, ಕರುಣೆ, ಕಳಕಳಿ, ಪ್ರೀತಿಗಳು, ಪ್ರೇಮಿಗಳ ಉತ್ಕಟ ಪ್ರೇಮ ವ್ಯಕ್ತವಾಗುವದು ಅವರ ಕಣ್ಣಗಳಿಂದಲೆ ಎಂಬುದು ಸತ್ಯ. ಕಣ್ಣುಗಳ ಮೂಲಕ ಆಗುವ ಪ್ರೇಮಾಭಿವ್ಯಕ್ತಿಯನ್ನು ಕೇವಲ ಪ್ರೇಮಿ -ಗಳಷ್ಟೇ ಅಲ್ಲ ಇತರರೂ ಕಾಣಬಹುದು. ಆದರೆ ಇದಕ್ಕಾಗಿ ಕಣ್ಣುಗಳನ್ನು ಒದಿ ತಿಳಿಯುವ ವ್ಯವಧಾನ, ಉತ್ಸುಕತೆ ಎರಡೂ ಇರಬೇಕು. ಅದೇ ರೀತಿ ಭಗವಂತನ ಕುರಿತಾದ ಉತ್ಕಟ ಪ್ರೀತಿ, ವಾತ್ಸಲ್ಯಗಳು ಭಕ್ತನ ಕಣ್ಣುಗಳಲ್ಲಿ ಕಾಣ ಸಿಗುತ್ತವೆ. ಭಕ್ತ,ಮೌನವಾಗಿ ಮನಸ್ಸಿನಲ್ಲಿಯೆ ಭಗವಂತನನ್ನು ಆರಾಧಿಸುತ್ತಿದ್ದರೂ ಅತನ ಕಣ್ಣುಗಳು ಪ್ರೇಮದ ಪರಾಕಾಷ್ಟತೆಯನ್ನು ಬಿಂಬಿಸುವದನ್ನು ಕಾಣಬಹುದು. ಆದರ ಇವನ್ನೆಲ್ಲ ನೋಡುವ ದೃಷ್ಟಿ, ತಾಳ್ಮೆ ನಮಗಿರಬೇಕು, ಅಷ್ಟೆ. ಮನದ ಭಾವನೆಗೆ ಮೊಗವದುವೆ ಕನ್ನಡಿ ಮಾನವನ ನಡೆಗಳಿಗೆ ಜಗದ ಮುನ್ನುಡಿ| ಕಣ್ಣಿನ ಬಿಂಬದಿ ಆಂತರ್ಯದ ಹುಡುಕಾಟ ಕಣ್ಣಾಗು ಲೊಕಕ್ಕೆ - ಶ್ರೀವೆಂಕಟ|| ಶ್ರೀರಂಗ ಕಟ್ಟಿ ಯಲ್ಲಾಪುರ.