ಕಗ್ಗ ಹೇಳುವ ವ್ಯಕ್ತಿತ್ವ ವಿಕಸನ
ಹೊಸಗನ್ನಡದ ಕವಿ,ವಿಚಾರವಾದಿ,ದಾರ್ಶನಿಕ ಡಿ.ವಿ.ಗುಂಡಪ್ಪನವರದು ಅಪರೂಪದ ವ್ಯಕ್ತಿತ್ವ. ಬದುಕಿದಂತೆ ಬರೆದ,ತಮ್ಮ ಕಾವ್ಯ ಮತ್ತು ಗದ್ಯ ಬರವಣಿಗೆಯನ್ನು ಜೀವನದ ಸತ್ಯವನ್ನು ಪ್ರತಿಪಾದಿಸಿದ ಡಿ.ವಿ.ಜಿ.ಯವರು ಗಾಂಧಿ ಯುಗದ ವಿಶ್ವಾತ್ಮಕ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿ ಬಾಳಿದವರು.ಮಂಕುತಿಮ್ಮನ ಕಗ್ಗ ತತ್ವ,ವಿವೇಕ,ವಾಸ್ತವ,ಆಧ್ಯಾತ್ಮ, ಜೀವನ ದರ್ಶನ ಮತ್ತು ಆದರ್ಶವನ್ನು ಎರಕ ಹೊಯ್ದು ವಿರಚಿಸಿದ ಅಪೂರ್ವವಾದ ಕೃತಿ. ಚುಟುಕ ಬ್ರಹ್ಮ ದಿನಕರ ದೇಸಾಯಿಯವರು ತಮ್ಮ ಚೌಪದಿ ರಚನೆಯಲ್ಲಿ ' ಮಂಕು ತಿಮ್ಮ ಸೆಳೆದನು ಗಮನ' ಎಂದು ತಮ್ಮ ನೆನಕೆಗಳನ್ನು ಸಲ್ಲಿಸಿದ್ದಾರೆ. ಜೀವನದಲ್ಲಿ ಜುಗುಪ್ಸೆಗೊಂಡು ಕೈ ಚೆಲ್ಲಿ ಕುಳಿತವನು ಒಮ್ಮೆ ಕಗ್ಗವನ್ನು ಓದಿದರೆ ಅವನಲ್ಲಿ ಎಲ್ಲಿಲ್ಲದ ಶಕ್ತಿ ಸಂಚಾರವಾಗಿ ಆತ ತನ್ನ ಬದುಕು ಮತ್ತು ಭವಿಷ್ಯದ ಕ್ರಿಯಾಯೋಜನೆಯನ್ನು ರೂಪಿಸಿಕೊಳ್ಳಲು ಕಗ್ಗ ಪ್ರೇರಣೆ ನೀಡುತ್ತದೆ. ಔದಾರ್ಯ ತಾಯಿ ನೀತಿಗೆ ಧೈರ್ಯವೆ ತಂದೆ ಸ್ವಾಧಿಪತ್ಯದೆ ನೀನು ಬಾಳನಾಳುವೊಡೆ ಹೋದುದನು ನೆನೆಯದಿರು ಬರುವುದಕೆ ಸಿದ್ಧನಿರು ಆದನಿತು ಸಂತೋಷ - ಮಂಕುತಿಮ್ಮ ಮನುಷ್ಯನಿಗೆ ಔದಾರ್ಯವಿರ ಬೇಕು.ನೀತಿಗೆ ಈ ಔದಾರ್ಯವೆ ತಾಯಿ.ಔದಾರ್ಯ ಎಲ್ಲವನ್ನು ಮುಚ್ಚಿ ಹಾಕುತ್ತದೆ.ತಾಯಿ ತನ್ನ ಮಗುವಿನ ತಪ್ಪನ್ನು ಕ್ಷಮಿಸಿದಂತೆ.ಆದರೆ ಬಹಳ ಜನರು ಔದಾರ್ಯದ ಗುಣ ತಮ್ಮ ಹತ್ತಿರವೂ ಬರದಂತೆ ಕಾಳಜಿ ವಹಿಸುತ್ತಾರೆ.ಅವರ ಮಕ್ಕಳು ಮರಿ ಅವರ ಕ್ಷೇಮದ ಹೊರತು ಬೇರೆಯವರ ಕಷ್ಟವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅವರು ಕುರುಡರು,ಕಿವುಡರು ಮೂಕರು ಆಗಿರುತ್ತಾರೆ.ಕುಂತಿ ತಾನು ನದಿಯಲ್ಲಿ ತೇಲಿ ಬಿಟ್ಟ ಮಗ ಕರ್ಣನ ಹತ್ತಿರ ಕೃಷ್ಣನ ಅಭಿಮತದಂತೆ ತೊಟ್ಟ ಬಾಣ ತೊಡ ಬೇಡ ಎಂಬ ವರವನ್ನು ಕೇಳಲು ಬರುತ್ತಾನೆ.ಅದನ್ನು ಕವಿ ಕುಮಾರವ್ಯಾಸ 'ಔದಾರ್ಯದ ಸುರತರುವ ಕಂಡಳು ಕುಂತಿ' ಎಂದು ಬರೆಯುತ್ತಾನೆ.ತಂದೆಯಾದ ಸೂರ್ಯ ಬಂದು ಕುಂತಿ ದಿನ್ನ ಹತ್ತಿರ ವರವನ್ನು ಕೇಳಲು ಬಂದಿದ್ದಾಳೆ ಕೊಡ ಬೇಡ ಎನ್ನುತ್ತಾನೆ. ಎದುರಿಗೆ ನಿಂತ ಕುಂತಿಗೆ ಕೈ ಮುಗಿದು ಕರ್ಣ ಅಮ್ಮಾ ನೀವು ನನ್ನನ್ನು ಮಗನೆಂದು ಕರೆದುದರಿಂದ ಕುಲ,ಚಲ,ಬಲ ,ಆಯುಷ್ಯಎಲ್ಲವೂ ಬಂದಿದೆ ನೀವು ಏನನ್ನು ಕೇಳುತ್ತಿರೊ ಕೇಳಿ ಎನ್ನುತ್ತಾನೆ.ಇದು ಕರ್ಣನ ಔದಾರ್ಯ. ಧೈರ್ಯವೆ ತಂದೆ.ಅದು ಇಲ್ಲದಿದ್ದರೆ ಎಲ್ಲವೂ ವಿಫಲವಾಗುತ್ತದೆ."ಧೈರ್ಯಂ ಸರ್ವತ್ರ ಸಾಧನಂ"ಕೃಷ್ಣ ಪಾಂಡವರ ಪಕ್ಷದ ಹಿರಿಯನಾಗು ಎಂದಾಗ ಅದನ್ನು ನಿರಾಕರಿಸುತ್ತಾನೆ. ನಿನ್ನದೆ ಅಧಿಪತ್ಯವನ್ನು ಸ್ಥಾಪಿಸಿಕೊಂಡು ನೀನು ಬಾಳನ್ನು ಆಳುವಂತಾಗ ಬೇಕು. ಇಂಥ ಸಂದರ್ಭದಲ್ಲಿ ಕಳೆದು ಹೋದುದರ ಬಗ್ಗೆ ನೆನೆದು ಚಿಂತೆಗೆ ಒಳಗಾಗ ಬೇಡ.ಏನು ಬರುತ್ತದೆಯೊ ಅದನ್ನು ದಿಟ್ಟತನದಿಂದ ಎದುರಿಸಲು ಸಿದ್ಧನಾಗಿರು.ಕವಿ ನಾಟಕಕಾರ ಶೇಕ್ಸ್‌ಪಿಯರ್ ತನ್ನ ಜ್ಯೂಲಿಯಸ್ ಸೀಸರ ನಾಟಕದಲ್ಲಿ" Cowards dies many time before their death. Valiant never taste of death but once" ಎನ್ನುತ್ತಾನೆ ಈ ಮಾತು ಸತ್ಯ. ಏನು ಆಗುವುದೊ ಅದು ಸಂತೋಷವೆ ಎಂಬ ಮನೋಭಾವದಿಂದ ಅದನ್ನು ಸ್ವೀಕರಿಸ ಬೇಕು ಎನ್ನುತ್ತರೆ ಕಗ್ಗದ ಕವಿ.ಜೀವನದಲ್ಲಿ ಔದಾರ್ಯ,ಧೈರ್ಯ, ಸ್ವಾಧಿಪತ್ಯ,ನಿಶ್ಚಿಂತ ಮನೋಭಾವ,ಎಲ್ಲವನ್ನು ಎದುರಿಸುವ ಸ್ಥಿತಿ,ಇದ್ದುದರಲ್ಲಿ ಸಂತೋಷವನ್ನು ಕಾಣುವ ಮನೋಭಾವ ರೂಢಿಸಿಕಂಡರೆ ಬದುಕು ಸಾರ್ಥಕ. ಡಾ.ಶ್ರೀಪಾದ ಶೆಟ್ಟಿ.